ಕದಲದ ಕಾಪ್ಟರ್

ಪ್ರವಾಹಪೀಡಿತ ಉತ್ತರಾಖಂಡದಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯಕ್ಕೆ ವರುಣನ ಮುನಿಸು ಮುಂದುವರಿಸಿದೆ. ಸೋಮವಾರ ದಿನವಿಡೀ ಸುರಿದ ಮಳೆಯಿಂದಾಗಿ...
Updated on: 

ಡೆಹ್ರಾಡೂನ್: ಪ್ರವಾಹಪೀಡಿತ ಉತ್ತರಾಖಂಡದಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯಕ್ಕೆ ವರುಣನ ಮುನಿಸು ಮುಂದುವರಿಸಿದೆ. ಸೋಮವಾರ ದಿನವಿಡೀ ಸುರಿದ ಮಳೆಯಿಂದಾಗಿ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ನಿಯೋಜಿಸಿದ ಬಹುತೇಕ ಹೆಲಿಕಾಪ್ಟರ್‌ಗಳು ಕೆಲಸವಿಲ್ಲದೆ ಖಾಲಿ ಕೂತಿವೆ.
ಇದರ ಬೆನ್ನಲ್ಲೇ ಮತ್ತೊಂದು ಮಹಾಮಳೆಯ ಮುನ್ಸೂಚನೆ ಹವಾಮಾನ ಇಲಾಖೆಯಿಂದ ಬಂದಿದೆ. ಮುಂದಿನ ಮೂರು ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದ ಮತ್ತೊಮ್ಮೆ ಮೇಘಸ್ಫೋಟ ಮತ್ತು ಭಾರಿ ಭೂಕುಸಿತದ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ರಕ್ಷಣಾ ಕಾರ್ಯ ಪೂರ್ಣಪ್ರಮಾಣದಲ್ಲಿ ಪುನಾರಂಭಗೊಳ್ಳಬೇಕಾದರೆ 3 ದಿನ ಬೇಕಾಗಬಹುದು ಎಂದು ಐಟಿಬಿಪಿ ಹೇಳಿದೆ.
ಈ ನಡುವೆ, ದುರ್ಗಮ ಪ್ರದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಇನ್ನೂ 15 ಸಾವಿರ ಮಂದಿಯಲ್ಲಿ ಸೋಮವಾರ ಸುಮಾರು ಒಂದು ಸಾವಿರ ಮಂದಿಯನ್ನಷ್ಟೇ ರಕ್ಷಿಸುವುದು ಸಾಧ್ಯವಾಗಿದೆ. ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದಾಗಿ ಕಾಪ್ಟರ್‌ಗಳು ಗಗನಕ್ಕೇರದ ಕಾರಣ ನೆಲಮಾರ್ಗದ ಮೂಲಕವಷ್ಟೇ ರಕ್ಷಣಾ ಕಾರ್ಯ ನಡೆಸಲಾಗಿದೆ. ಆದರೆ, ಬದರಿನಾಥ, ರುದ್ರಪ್ರಯಾಗ್ ಸೇರಿದಂತೆ ಹಲವೆಡೆ ಸಂಭವಿಸಿದ ಗುಡ್ಡಕುಸಿತದಿಂದಾಗಿ ರಸ್ತೆ ಹಾಗೂ ಕಾಲ್ದಾರಿ ಮೂಲಕ ನಡೆಯುತ್ತಿದ್ದ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕೂ ಅಡ್ಡಿಯಾಗಿದೆ. ಇಷ್ಟಾದರೂ ಭಾರತೀಯ ವಾಯು ಸೇನೆಯ ಕೆಲವು ಹೆಲಿಕಾಪ್ಟರ್‌ಗಳು ಪ್ರತಿಕೂಲ ಹವಾಮಾನದ ನಡುವೆಯೂ ಕಾರ್ಯಾಚರಣೆ ನಡೆಸಿದವು. ಸುಮಾರು 420 ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವಲ್ಲಿ ಸಹಕರಿಸಿದವು.
ರಾಜ್ಯಪಾಲ ತರಾಟೆ
ಪ್ರವಾಹದ ಹಿನ್ನೆಲೆಯಲ್ಲಿ ರಾಜ್ಯಪಾಲ ಅಜೀಜ್ ಖುರೇಷಿ  ಉತ್ತರಾಖಂಡ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.  ದಿಢೀರ್ ಪ್ರವಾಹವನ್ನು ಎದುರಿಸಲು ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡೇ ಇಲ್ಲ ಎಂದು ಟೀಕಿಸಿದ್ದಾರೆ.  ವರ್ಷದಿಂದ  ಸುರಕ್ಷತಾ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸುತ್ತಲೇ ಬಂದಿದ್ದೇನೆ. ಇಷ್ಟಾದರೂ ಸರ್ಕಾರ  ದುರಂತ ಎದುರಿಸಲು ಸಿದ್ಧತೆ ಮಾಡಿಕೊಳ್ಳದಿದ್ದುದು ವಿಷಾದನೀಯ ಎಂದಿದ್ದಾರೆ.

ಇತರೆ ರಾಜ್ಯಗಳ ಕಾಪ್ಟರ್ ಬೇಡ: ಕೇಂದ್ರ
ಇತರೆ ರಾಜ್ಯಗಳು ಉತ್ತರಾಖಂಡಕ್ಕೆ ಖಾಸಗಿ ಹೆಲಿಕಾಪ್ಟರ್ ಕಳುಹಿಸಿಕೊಡಬಾರದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಪ್ರವಾಹಪೀಡಿತ ಉತ್ತರಾಖಂಡಕ್ಕೆ ನೆರವಾಗಲು ಇತರೆ ರಾಜ್ಯಗಳೂ ಹೆಲಿಕಾಪ್ಟರ್‌ಗಳನ್ನು ಕಳುಹಿಸಿಕೊಡುತ್ತಿವೆ. ಇದರಿಂದಾಗಿ ರಕ್ಷಣೆ ಹಾಗೂ ಪರಿಹಾರ ಕಾರ್ಯದಲ್ಲಿ ಗೊಂದಲವಾಗುತ್ತಿದೆ. ರಾಜ್ಯಸರ್ಕಾರಗಳು ಕಾಪ್ಟರ್ ಅಥವಾ ಇತರೆ ಪರಿಹಾರ ಸಾಮಗ್ರಿಗಳನ್ನು ಉತ್ತರಾಖಂಡ ಸರ್ಕಾರದ ಮೂಲಕವೇ ಕಳುಹಿಸಿಕೊಡಲಿ ಎಂದು ಕೇಂದ್ರ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com