ಅಬ್ಬರಿಸಿತು ಮಳೆ

ಸುಬ್ರಹ್ಮಣ್ಯ ಸುತ್ತಮುತ್ತ ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಮಾರಧಾರಾ ಸೇತುವೆ ಮುಳುಗಿದ್ದು, ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಡಿತಗೊಂಡಿದೆ.
ಅಬ್ಬರಿಸಿತು ಮಳೆ
Updated on: 

ರಾಜ್ಯದಲ್ಲಿ ಚುರುಕುಗೊಂಡ ಮಳೆ ಕೊಡಗಿನಲ್ಲಿ ಉಕ್ಕಿ ಹರಿದ ಕಾವೇರಿ, ಗ್ರಾಮಗಳು ಜಲಾವೃತ  ವಯನಾಡಲ್ಲಿ ಮಳೆ: ಕಬಿನಿ ತುಂಬಲು 6 ಅಡಿ ಮಾತ್ರ ಬಾಕಿ, ಪ್ರವಾಹ ಮುನ್ನೆಚ್ಚರಿಕೆ  ಧಾರಾಕಾರ ಮಳೆಯಿಂದಾಗಿ ಸುಬ್ರಹ್ಮಣ್ಯ ಸಂಪರ್ಕ ಕಡಿತ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ತುಂಗಾ ನದಿ ಗುಲ್ಬರ್ಗ ಜಿಲ್ಲೆಯಲ್ಲಿ ಎರಡು ದಿನಗಳಿಂದ ಉತ್ತಮ ಮಳೆ  ಅಂತೂ ಮಲೆನಾಡಿನಲ್ಲಿ ಚುರುಕುಗೊಂಡ ಮಳೆ

ಕನ್ನಡಪ್ರಭ ವಾರ್ತೆ ಬೆಂಗಳೂರು ಜು.25
ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶ, ಕುಮಾರ ಪರ್ವತ ಹಾಗೂ ಸುಬ್ರಹ್ಮಣ್ಯ ಸುತ್ತಮುತ್ತ ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಮಾರಧಾರಾ ಸೇತುವೆ ಮುಳುಗಿದ್ದು, ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಡಿತಗೊಂಡಿದೆ. ಸುಳ್ಯ ಪರಿಸರದಲ್ಲಿ ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಮೃತಪಟ್ಟಿದ್ದರೆ, ಮತ್ತೊಬ್ಬ ನಾಪತ್ತೆಯಾಗಿದ್ದಾನೆ.
ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದು, ಬುಧವಾರವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ಸಿದ್ದಾಪುರ ಸಮೀಪದ ಕರಡಿಗೋಡು ಮತ್ತು ಕೂಡುಗದ್ದೆ ಭಾಗದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ದಡದ ಹಲವು ಮನೆಗಳು ಜಲಾವೃತಗೊಂಡಿವೆ. ಮುಂಜಾಗ್ರತಾ ಕ್ರಮವಾಗಿ 10ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಸಮೀಪದ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲು ಸಿದ್ಧತೆ ನಡೆಸಲಾಗಿದೆ.  ವಯನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಜಲಾಶಯದಿಂದ 10 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದ್ದು, ಹಳ್ಳಿಗಳಿಗೆ ಪ್ರವಾಹ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಕಬಿನಿ ಮತ್ತು ವರುಣಾ ನಾಲಾ ವೃತ್ತದ ಅಧೀಕ್ಷಕ ಎಂಜಿನಿಯರ್ ಕೆ.ಶಿವಮೂರ್ತಿ ತಿಳಿಸಿದ್ದಾರೆ. ಜಲಾಶಯಕ್ಕೆ 18 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ತುಂಬಲು ಇನ್ನು 6 ಅಡಿ ಮಾತ್ರ ಬಾಕಿ ಇದೆ.
ಹೇಮಾವತಿಗೂ ನೀರು: ಹಾಸನ ಜಿಲ್ಲೆಯ ಹೇಮಾವತಿ ಜಲಾಶಯಕ್ಕೂ ಒಳ ಹರಿವು ಹೆಚ್ಚಳವಾಗಿದ್ದು, ಸಕಲೇಶಪುರ ತಾಲೂಕಿನಲ್ಲಿಕಳೆದ 24 ಗಂಟೆ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಜಲಾಶಯ ಶೀಘ್ರವೇ ಭರ್ತಿಯಾಗುವ ಸಾಧ್ಯತೆ ಇದೆ. ಈ ಜಲಾಶಯಕ್ಕೆ 6 ಸಾವಿರ ಕ್ಯುಸೆಕ್ ಒಳ ಹರಿವು ಇದೆ.
ತುಂಗೆ ತುಂಬಿದಳು: ಮಲೆನಾಡಿನಲ್ಲಿ ಮಳೆ ಚುರುಕುಗೊಂಡಿದೆ. ವಿಶೇಷವಾಗಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗೆ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ತುಂಗಾ ಜಲಾಶಯಕ್ಕೆ ಒಳಹರವಿನ ಪ್ರಮಾಣ ೆ 50 ಸಾವಿರ ಕ್ಯುಸೆಕ್‌ನಷ್ಟು ಹೆಚ್ಚಾಗಿದ್ದು, ಜಲಾಶಯದಿಂದ ಹೊರಬಿಡಲಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೂ ಒಳ ಹರಿವು ಹೆಚ್ಚಾಗಿದೆ.
ಉತ್ತರ ಕರ್ನಾಟಕದಲ್ಲಿ ಮಳೆ: ಗುಲ್ಬರ್ಗ ಜಿಲ್ಲೆಯ ಚಿಂಚೋಳಿ, ಅಫಜಲ್ಪೂರ, ಜೇವರ್ಗಿಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತ್ತಿದ್ದರೆ, ಬಿಜಾಪುರ, ಬಾಗಲಕೋಟೆಯಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ಗುಂಡ್ಲುಪೇಟೆಯ ತಾಲೂಕಿನಲ್ಲಿ ಸೋಮವಾರ ಮಧ್ಯ ರಾತ್ರಿಯಿಂದಲೇ ನಿರಂತರ ಮಳೆ ಸುರಿಯುತ್ತಿರುವುದರಿಂದ ರೈತರು ಹರ್ಷಗೊಂಡಿದ್ದಾರೆ.

ಕುಕ್ಕೆಗೆ ಸಂಪರ್ಕ ಕಡಿತ
ಕುಮಾರಾಧಾರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಕುಮಾರಾಧಾರ ಸೇತುವೆ ಮುಳುಗಿದೆ. ಹಾಗಾಗಿ, ಬೆಂಗಳೂರು, ಮಂಗಳೂರು, ಧರ್ಮಸ್ಥಳ, ಉಪ್ಪಿನಂಗಡಿ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಏಕೈಕ ರಸ್ತೆ ಕಡಿತಗೊಂಡು ಯಾತ್ರಾರ್ಥಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡಬೇಕಾಯಿತು. ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ದಿನವಾಗಿದ್ದು ಬೆಳಗ್ಗಿನಿಂದಲೇ ವಿವಿಧ ಕಡೆಗಳಿಂದ ಯಾತ್ರಾರ್ಥಿಗಳು ರೈಲು, ಬಸ್ ಹಾಗೂ ಖಾಸಗಿ ವಾಹನಗಳಲ್ಲಿ ಆಗಮಿಸಿ ಸೇವೆ ಸಲ್ಲಿಸಿದ್ದರು.

ಪ್ರವಾಹದ ಮುನ್ನೆಚ್ಚರಿಕೆ
ಕೇರಳದ ವಯನಾಡ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಜಲಾಶಯದಿಂದ ನದಿಗೆ 10 ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಹಾಗಾಗಿ, ನದಿ ಪಾತ್ರದ ತಗ್ಗು ಪ್ರದೇಶದ ಜನರಿಗೆ ಪ್ರವಾಹ ಮುನ್ನೆಚ್ಚರಿಕೆ ನೀಡಲಾಗಿದೆ. ಅಲ್ಲದೆ ಜಲಾಶಯ ಭರ್ತಿಗೆ ಕೇವಲ 6 ಅಡಿ ಮಾತ್ರ ಬಾಕಿದೆ. ಈ ಜಲಾಶಯ ವರ್ಷಕ್ಕೆ 2 ಬಾರಿ ತುಂಬುವ ಖ್ಯಾತಿ ಇದೆ.

ಕೊಡಗಲ್ಲಿ ಭಾರಿ ಮಳೆ
ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರೆದಿದ್ದು, ಮಳೆ ಹಿನ್ನೆಲೆಯಲ್ಲಿ ಬುಧವಾರವೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿದೆ. ಗ್ರಾಮೀಣ ಭಾಗದದಲ್ಲಿ ರಸ್ತೆ ಸಂಚಾರ ವ್ಯತ್ಯಯಗೊಂಡಿದ್ದು, ಹಲವು  ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.  ಭಾಗಮಂಡಲ, ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ.  ಭಾಗಮಂಡಲದಿಂದ ಅಯ್ಯಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ಹರಿಯುತ್ತಿದ್ದು ಇದರಿಂದಾಗಿ ಭಾಗಮಂಡಲ- ಅಯ್ಯಂಗೇರಿ - ನಾಪೋಕ್ಲು ರಸ್ತೆ ಸಂಚಾರ ಕಡಿತಗೊಂಡಿದೆ. ಇದರಿಂದ ಈ ಗ್ರಾಮಗಳು ದ್ವೀಪದಂತಾಗಿದೆ. ಮಳೆ ಹಿನ್ನೆಲೆಯಲ್ಲಿ 2ನೇ ದಿನವಾದ ಬುಧವಾರವೂ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ, ಅಂಗನವಾಡಿಗಳಿಗೂ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಘೋಷಿಸಿದ್ದಾರೆ.

ಒಬ್ಬ ನೀರುಪಾಲು
ಸೋಮವಾರ ರಾತ್ರೆಯಿಂದ ಸುಳ್ಯ ಹಾಗೂ ಪರಿಸರದಲ್ಲಿ ಧಾರಾಕಾರ ಮಳೆ ಸುರಿದಿದ್ದು ಬೆಳ್ಳಾರೆಯಲ್ಲಿ ಮಂಗಳವಾರ ಒಬ್ಬರು ನೀರು ಪಾಲಾಗಿ ಮೃತಪಟ್ಟಿದ್ದಾರೆ. ಸಂಪಾಜೆಯಲ್ಲಿ ಓರ್ವ ನಾಪತ್ತೆಯಾಗಿದ್ದಾರೆ. ಬೆಳ್ಳಾರೆಯ ತಡಗಜೆ ನಿವಾಸಿ ರಾಮಚಂದ್ರ ಹೆಗ್ಡೆ ಮಂಗಳವಾರ ಬೆಳಿಗ್ಗೆ ಮನೆ ಸಮೀಪದ ತೋಡಿನಲ್ಲಿ ಕಿರುಸೇತುವೆ ದಾಟುತ್ತಿದಾಗ ನೀರಲ್ಲಿ ಕೊಚ್ಚಿ ಹೋಗಿ ಮೃತಪಟ್ಟರು.
ನಾಪತ್ತೆ: ಚೆಂಬು ಗ್ರಾಮದ ಊರುಬೈಲಿನ ಪುರುಷೋತ್ತಮ ಗೌಡ ಎಂಬವರು ಸೋಮವಾರ ಸಂಜೆ ಪೇಟೆಗೆಂದು ಹೋದವರು ವಾಪಾಸು ಬಂದಿಲ್ಲ. ಇವರು ಮನೆಗೆ ಬರುವ ದಾರಿಯಲ್ಲಿ ಸಣ್ಣ ತೋಡೊಂದು ಇದ್ದು ಅದನ್ನು ದಾಟಿ ಬರಬೇಕಾಗಿದ್ದು ಈ ವೇಳೆ ನೀರು ಪಾಲಾಗಿರಬಹುದೆಂದು ಶಂಕಿಸಲಾಗಿದೆ. ಊರವರು ಹುಡುಕಾಟ ನಡೆಸಿದ್ದರೂ ಫಲಕಾರಿಯಾಗಿಲ್ಲ. ಪೊಲೀಸರಿಗೆ ದೂರು ನೀಡಲಾಗಿದೆ.

ಕಬಿನಿಗೆ ಪ್ರವಾಹದ ಮುನ್ನೆಚ್ಚರಿಕೆ
ಕೇರಳದ ವಯನಾಡ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಜಲಾಶಯದಿಂದ ನದಿಗೆ 10 ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಹಾಗಾಗಿ, ನದಿ ಪಾತ್ರದ ತಗ್ಗು ಪ್ರದೇಶದ ಜನರಿಗೆ ಪ್ರವಾಹ ಮುನ್ನೆಚ್ಚರಿಕೆ ನೀಡಲಾಗಿದೆ. ಅಲ್ಲದೆ ಜಲಾಶಯ ಭರ್ತಿಗೆ ಕೇವಲ 6 ಅಡಿ ಮಾತ್ರ ಬಾಕಿದೆ. ಈ ಜಲಾಶಯ ವರ್ಷಕ್ಕೆ ಎರಡು ಬಾರಿ ತುಂಬುವ ಖ್ಯಾತಿ ಇದೆ.
ಗುಲ್ಬರ್ಗ ಜಿಲ್ಲೆಯಲ್ಲಿ ಮಳೆ: ಉತ್ತರ ಕರ್ನಾಟಕದ ಗುಲ್ಬರ್ಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಜಿಲ್ಲೆಯ ಚಿಂಚೋಳಿ, ಅಫಜಲ್ಪೂರ, ಜೇವರ್ಗಿ ತಾಲೂಕುಗಳಲ್ಲಿ ಮಳೆಯಾಗುತ್ತಿದ್ದು, ರೈತರು ಸಂತೋಷಗೊಂಡಿದ್ದಾರೆ. ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ಕಳೆದ ಎರಡು ದಿನಗಳಲ್ಲಿ ಒಟ್ಟು 789.7 ಮಿ.ಮೀ. ಮಳೆಯಾಗಿದೆ.

ಮನೆಗಳು ಜಲಾವೃತ
ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಕರಡಿಗೋಡು ಮತ್ತು ಕೂಡುಗದ್ದೆ ಭಾಗದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ದಡದ ಹಲವು ಮನೆಗಳು ಜಲಾವೃತಗೊಂಡಿವೆ. ಕೆಲವು ಮನೆಗಳು ಬಿರುಕುಬಿಟ್ಟಿದ್ದು, ನೆಲಕಚ್ಚುವ ಸ್ಥಿತಿಯಲ್ಲಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಕಾವೇರಿ ನದಿ ಉಕ್ಕಿ ಹರಿದು, ಈ ಭಾಗದಲ್ಲಿ ಹಲವು ಮನೆಗಳು ಜಲಾವೃತಗೊಳ್ಳುವುದು ಸಾಮಾನ್ಯ. ಆದರೆ ಇದುವರೆಗೂ ಯಾವುದೇ ಪರ್ಯಾಯ ವ್ಯವಸ್ಥೆ ಮಾಡುವುದಿಲ್ಲ ಎಂಬುದು ಸ್ಥಳೀಯರ ಆರೋಪ. ನದಿ ದಡದಲ್ಲಿದ್ದ ಭಾರಿ ಗಾತ್ರದ ಬಿದಿರು ಮರ ನದಿಗೆ ಬಿದ್ದ ಪರಿಣಾಮ ದಡದಲ್ಲಿದ್ದ ಕೂಡುಗದ್ದೆಯ ಲೀಲಾಬಾಬು ಎಂಬವರ ಮನೆಯು ಕುಸಿಯುವ ಹಂತದಲ್ಲಿದ್ದು, ಕುಟುಂಬ ಆತಂಕಕ್ಕೀಡಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com