

ನವದೆಹಲಿ: ಗಾಯದ ಮೇಲೆ ಬರೆ ಎಳೆದಂತಾಗಿದೆ ಪ್ರವಾಹ ಸಂತ್ರಸ್ತರ ಮತ್ತು ರಕ್ಷಣಾ ಕಾರ್ಯಕರ್ತರ ಸ್ಥಿತಿ...!
ಗೌರಿಕುಂಡ್ನಲ್ಲಿ ಪ್ರವಾಹ ಸಂತ್ರಸ್ತರನ್ನು ಹೊತ್ತು ಬರುತ್ತಿದ್ದ ರಕ್ಷಣಾ ಪಡೆಯ ಹೆಲಿಕಾಪ್ಟರ್ ಎಂಐ17 ವಿ5 ಪತನವಾದ ಪರಿಣಾಮ 19 ಮಂದಿ ಸಾವನ್ನಪ್ಪಿದ್ದಾರೆ.
ಹೆಲಿಕಾಪ್ಟರ್ನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದು, ಸದ್ಯ 8 ಮೃತದೇಹಗಳು ಸಿಕ್ಕಿವೆ ಎಂದು ರಕ್ಷಣಾ ಪಡೆಯ ಮೂಲಗಳು ಹೇಳಿವೆ. ಈ ಕಾಪ್ಟರ್ ಬೆಳಗಿನಿಂದ ಎರಡು ಬಾರಿ ಕೇದಾರನಾಥದಿಂದ ಸಂತ್ರಸ್ತರನ್ನು ಕರೆತಂದಿತ್ತು. ಮೂರನೇ ಬಾರಿಗೆ ಬರುವಾಗ ಪತನವಾಗಿ, ಇದರಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಐಎಎಫ್ ಹೇಳಿದೆ.
ಮಧ್ಯಾಹ್ನ 12.30ರ ವೇಳೆಗೆ ಹೆಲಿಕಾಪ್ಟರ್ ಕೇದಾರನಾಧ ಬಿಟ್ಟಿದೆ. ಸ್ಥಳದಿಂದ ಹಾರಿದ 5 ರಿಂದ 7 ನಿಮಿಷಗಳಲ್ಲಿ ಪತನವಾಗಿದೆ .
ಕಾಪ್ಟರ್ನಲ್ಲಿ ಎನ್ಡಿಆರ್ಎಫ್, ಐಟಿಬಿಪಿ ಮತ್ತು ಐಎಎಫ್ ಸಿಬ್ಬಂದಿ ಇದ್ದರು . ಹೆಲಿಕಾಪ್ಟರ್ ಪತನಕ್ಕೆ ಕೆಟ್ಟ ಹವಾಮಾನ, ಮಂಜು ಮುಸುಕಿದ್ದೇ ಕಾರಣ ಎಂದು ಐಎಎಫ್ ಹೇಳಿದೆ. ಇದು ಪಶ್ಚಿಮ ಬಂಗಾಳದ ಬಾರಕ್ಪುರ ವಾಯು ಪಡೆಗೆ ಸೇರಿದ ಹೆಲಿಕಾಪ್ಟರ್ ಎಂದು ತಿಳಿಸಿದೆ.
ಕೇದಾರನಾಥದಿಂದ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಘಟನೆ ಸಂಬಂಧ ತನಿಖೆ ನಡೆಯಲಿದೆ. ಕಾರ್ಯಾಚರಣೆಯನ್ನೂ ಮುಂದುವರಿಸುವುದಾಗಿ ಸೇನೆ ಹೇಳಿದೆ. ಕಳೆದ ವರ್ಷವಷ್ಟೇ ರಷ್ಯಾದಿಂದ ಈ ಹೆಲಿಕಾಪ್ಟರ್ಗಳನ್ನು ತರಿಸಿಕೊಳ್ಳಲಾಗಿತ್ತು.