ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.27-
ಬೆಂಗಳೂರು ಜಲಮಂಡಳಿ ಅಧ್ಯಕ್ಷರಾಗಿದ್ದಾಗ ಹಿರಿಯ ಐಎಎಸ್ ಅಧಿಕಾರಿ ಪಿ.ಬಿ. ರಾಮಮೂರ್ತಿ ಅವರು ಹೆಣೆದಿದ್ದ 'ಅಕ್ರಮಗಳ ಬಲೆ' ಅವರು ಅಲ್ಲಿಂದ ಹೋದಮೇಲೆ ಈಗ ನಿಧಾನವಾಗಿ ಬಿಚ್ಚಿಕೊಳ್ಳುತ್ತಿದೆ. ಕರ್ನಾಟಕ ರಾಜ್ಯ ಕೈಗಾರಿಕೆ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಮಮೂರ್ತಿ ಅವರು ಜಲಮಂಡಳಿ ಅಧ್ಯಕ್ಷರಾಗಿದ್ದಾಗ ಸಾಕಷ್ಟು ಅಕ್ರಮಗಳಿಗೆ ಕಾರಣರಾಗಿದ್ದ ಅಂಶ ಬೆಳಕಿಗೆ ಬಂದಿದೆ.
ಒಂದೇ ಕಾಮಗಾರಿಗೆ ಪದೇ ಪದೇ ಟೆಂಡರ್ ಕರೆದು ಕೋಟ್ಯಂತರ ರು.ಗಳ ಅಕ್ರಮ ನಡೆಸಿರುವ ಗಂಭೀರ ಆರೋಪ ರಾಮಮೂರ್ತಿ ಅವರ ಮೇಲಿದೆ. ತಮಗೆ ಬೇಕಾದವರಿಗೆ ಕಾಮಗಾರಿಗಳ ಗುತ್ತಿಗೆ ನೀಡಿದ್ದಲ್ಲದೆ ಮಂಡಳಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆಪಾದನೆಯೂ ಅವರ ಕುತ್ತಿಗೆಗೆ ಸುತ್ತಿಕೊಂಡಿದೆ.
ಅಷ್ಟೇ ಅಲ್ಲ. ಅವ್ಯವಹಾರದ ವಿಚಾರದಲ್ಲಿ ಆಪ್ತ ಸಹಾಯಕರೊಂದಿಗೂ ಜಗಳ ಆಡಿದ್ದ ರಾಮಮೂರ್ತಿ, ತಮ್ಮ ಅಕ್ರಮಗಳಿಗೆ ಸಾಕ್ಷಿ ಆಗಬಹುದು ಎಂಬ ಕಾರಣಕ್ಕೆ ಆತನಿಗೆ ಸೇವೆಯಿಂದ ಸ್ವಯಂ ನಿವೃತ್ತಿ ಕೊಡಿಸಿದ್ದಾರೆಂದೂ ಮೂಲಗಳು ಹೇಳಿವೆ.
ಏನಿದು ಅಕ್ರಮ? ನಗರ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ರಾಜ್ಯ ಸರ್ಕಾರ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಅನೇಕ ಮೂಲ ಸೌಕರ್ಯದ ಯೋಜನೆಗಳನ್ನು ರೂಪಿಸಿತ್ತು. ಇವುಗಳ ಪೈಕಿ ಜಲಮಂಡಳಿ, ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿರುವ 8 ಪುರಸಭೆಗಳ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. 1200 ಕೋಟಿ ವೆಚ್ಚದ ಯೋಜನೆ ಇದಾಗಿತ್ತು. ಇದರಲ್ಲಿ ಸುಮಾರು 24 ಪ್ಯಾಕೇಜ್ಗಳಿದ್ದು, ಪ್ರತಿ ಪ್ಯಾಕೇಜ್ನಲ್ಲಿ 7 ಕಾಮಗಾರಿಗಳಿಗೆ ಪ್ರತ್ಯೇಕ ಟೆಂಡರ್ಗಳನ್ನು ಆಹ್ವಾನಿಸಲಾಗಿತ್ತು.
ಟೆಂಡರ್ನಲ್ಲಿ ಯಶಸ್ವಿಯಾದ ಸಂಸ್ಥೆಗಳಿಗೆ ರಾಮಮೂರ್ತಿ ಅವರು ಕೆಲಸ ವಹಿಸಲಿಲ್ಲ. ಇಲ್ಲದ ನೆಪ ಹೇಳಿ ಮತ್ತೆ ಟೆಂಡರ್ ಕರೆದಿದ್ದರು. ಏಕೆಂದರೆ, ಟೆಂಡರ್ನಲ್ಲಿ ಯಶಸ್ವಿಯಾದ ಸಂಸ್ಥೆಗಳು ಕಾಮಗಾರಿ ವಹಿಸಿಕೊಳ್ಳುವ ಮುನ್ನ ತಮ್ಮನ್ನು 'ಗಮನಿಸಿಕೊಳ್ಳಲಿಲ್ಲ' ಎಂದು ರಾಮಮೂರ್ತಿಯವರು ಸಿಟ್ಟಾಗಿದ್ದರು.
ತಮ್ಮ ನಿರೀಕ್ಷೆ ಪ್ರಕಾರ ಗುತ್ತಿಗೆ ಸಂಸ್ಥೆ ನಡೆದುಕೊಳ್ಳದಿದ್ದಾಗ ಟೆಂಡರ್ ಪ್ರಕ್ರಿಯೆಯನ್ನು ನಿರೀಕ್ಷೆಯಂತೆ ನಡೆದಿಲ್ಲ ಎಂದು ಹೇಳಿ ರದ್ದುಗೊಳಿಸಿದ್ದರು. ನಂತರ ಅದೇ ಪ್ಯಾಕೇಜ್ನ ಕಾಮಗಾರಿಗಳಿಗೆ ಪದೇಪದೇ ಟೆಂಡರ್ ಕರೆದಿದ್ದರು. ವಿಚಿತ್ರವೆಂದರೆ, ಟೆಂಡರ್ನಲ್ಲಿ ಯಶಸ್ವಿಯಾಗಿ ಕಾರ್ಯಾದೇಶವನ್ನೂ ಪಡೆದಿದ್ದ 4 ಗುತ್ತಿಗೆ ಸಂಸ್ಥೆಗಳಿಗೆ ನೀಡಿದ್ದ ಟೆಂಡರ್ನ್ನೇ ರದ್ದುಗೊಳಿಸಲಾಗಿತ್ತು. ಇದಕ್ಕೆ 4 ಸಂಸ್ಥೆಗಳು ಸರಿಯಾಗಿ ಕಾಮಗಾರಿ ನಡೆಸುತ್ತಿಲ್ಲ. ಪ್ರಗತಿ ತೋರಿಸುತ್ತಿಲ್ಲ ಎಂಬ ಕಾರಣ ನೀಡಲಾಗಿತ್ತು.
ಇದನ್ನು ವಿರೋಧಿಸಿ ಆ ಗುತ್ತಿಗೆ ಸಂಸ್ಥೆಗಳು ನ್ಯಾಯಾಲಯ ಮೊರೆ ಹೋದರೂ ಜಲ ಮಂಡಳಿ ಅಧಿಕಾರಿಗಳು ರಾಮಮೂರ್ತಿ ಅವರ ಸೂಚನೆಯಂತೆ ಮತ್ತೆ ಮರು ಟೆಂಡರ್ ನಡೆಸಿದ್ದರು. ಹೀಗಾಗಿ 5 ವರ್ಷಗಳ ಹಿಂದಿನ ಯೋಜನೆಯ ಬಹುತೇಕ ಕಾಮಗಾರಿಗಳಿಗೆ ಇನ್ನೂ ಚಾಲನೆಯೇ ಸಿಕ್ಕಿಲ್ಲ.
ಇದೇ ಕಾಮಗಾರಿಗಳ ಅಕ್ರಮದಲ್ಲಿ ಹಿಂದಿನ ಹೆಚ್ಚುವರಿ ಮುಖ್ಯ ಎಂಜಿನಿಯರ್ ರಾಮಕೃಷ್ಣ ಎಂಬುವರು ಭಾಗಿಯಾಗಿದ್ದರು. ಇವರ ಮನೆ ಮೇಲೆ ಲೋಕಾಯುಕ್ತ ದಾಳಿಯೂ ಆಗಿತ್ತು. ದಾಳಿ ಸಂದರ್ಭದಲ್ಲಿ 7ಲಕ್ಷ ನಗದು ಕೂಡ ಸಿಕ್ಕಿತ್ತು. ಈ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ.
ಏಕೆ ಹೀಗಾಗುತ್ತಿದೆ?: ಮಂಡಳಿ ನಿಮಯದಂತೆ ಇಲ್ಲಿ ಸಚಿವರಿಗಿಂತ ಅಧ್ಯಕ್ಷರಿಗೇ ಹೆಚ್ಚಿನ ಅಧಿಕಾರ. ಏಕೆಂದರೆ, ಮಂಡಳಿ ಸಭೆಯಲ್ಲಿ ಅಧ್ಯಕ್ಷರು, ಸದಸ್ಯರನ್ನು ಹೊರತುಪಡಿಸಿ ಉಳಿದ ಯಾರಿಗೂ ಅವಕಾಶವಿಲ್ಲ. ಅಷ್ಟೆ ಏಕೆ ? ಜಲಮಂಡಳಿ ಉಸ್ತುವಾರಿ ಹೊತ್ತ ಸಚಿವರೂ ಪಾಲ್ಗೊಳ್ಳುವಂತಿಲ್ಲ. ಹೀಗಾಗಿ ಮಂಡಳಿಯಲ್ಲಿ ನಗರಾಭಿವೃದ್ಧಿ, ಹಣಕಾಸು ಮತ್ತು ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳಿದ್ದರೆ ಸಾಕು. ಸದಸ್ಯ ಬಲವಿದೆ ಎಂದು ಬೇಕಾದ ವಿಷಯಗಳಿಗೆ ಅನುಮೋದನೆ ಪಡೆದುಕೊಳ್ಳಲಾಗುತ್ತದೆ. ಹೀಗಾಗಿ ಎಷ್ಟೋ ಅಕ್ರಮಗಳುನಡೆದು ಹೋಗಿವೆ.
ರು. 400 ಕೋಟಿ ಎಲ್ಲಿ ?
ಅವೈಜ್ಞಾನಿಕವಾಗಿರುವ ನೀರು ಪೂರೈಕೆಯ ಕೊಳವೆ ಮಾರ್ಗ ಸರಿಪಡಿಸಲು ಜಲಮಂಡಳಿ 2001ರಲ್ಲಿ ಬೆಂಗಳೂರು ಪೂರ್ವ ವಲಯದಲ್ಲಿ ರು. 400 ಕೋಟಿ ವೆಚ್ಚ ಮಾಡಿತ್ತು. ಈ ಹಣ ಎಲ್ಲಿ, ಹೇಗೆ ವೆಚ್ಚವಾಯಿತು ಎನ್ನುವ ಬಗ್ಗೆ ಮಂಡಳಿಗೆ ಇನ್ನೂ ಮಾಹಿತಿ ಇಲ್ಲ.
ಆಪ್ತನಿಗೆ ವಿಆರ್ಎಸ್ ಸಿಕ್ಕಿದ್ದು ಹೇಗೆ?
ಜಲಮಂಡಳಿಯಲ್ಲಿ ಅಕ್ರಮಗಳು ಮಿತಿ ಮೀರುತ್ತಿದ್ದಂತೆ ಅಧ್ಯಕ್ಷ ರಾಮಮೂರ್ತಿ ಮತ್ತು ಅವರ ಆಪ್ತ ಸಹಾಯಕ ಆಚಾರ್ಯ ನಡುವೆ ಜಗಳ ಶುರುವಾಯಿತು. ಅಷ್ಟೇ ಅಲ್ಲ. ಕೂಡಲೇ ಸೇವೆ ತ್ಯಜಿಸಬೇಕೆಂದು ಆತನಿಗೆ ತಾಕೀತು ಮಾಡಿದ್ದರು. ನಂತರ ಆಚಾರ್ಯ ಸ್ವಯಂ ನಿವೃತ್ತಿ ಪಡೆಯುವಂತೆ ಮಾಡಿದರು. ನಂತರ ರಾಮಮೂರ್ತಿ ಸಹ ವರ್ಗವಾದರು. ಆದರೆ, ಅಕ್ರಮಗಳು ಮಾತ್ರ ಬೆಳಕಿಗೆ ಬರಲೇ ಇಲ್ಲ.
-ಶಿವಕುಮಾರ್ ಬೆಳ್ಳಿತಟ್ಟೆ