

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.27-
ಪಡಿತರ ಚೀಟಿ, ಸಾಮಾಜಿಕ ಭದ್ರತಾ ಪಿಂಚಣಿ ಸೇರಿದಂತೆ ಫಲಾನುಭವಿ ಆಧರಿತ ಎಲ್ಲಾ ಯೋಜನೆಗಳ ಜಾರಿಗೆ ಕೇಂದ್ರ ಚುನಾವಣಾ ಆಯೋಗ ಬ್ರೇಕ್ ಹಾಕಿದೆ.
ಫಲಾನುಭವಿ ಆಧರಿತ ಯೋಜನೆಗಳನ್ನು ಜಾರಿ ಮಾಡಿದರೆ ಅದು ಮತದಾರರನ್ನು ಓಲೈಸಲು ಅವಕಾಶ ನೀಡಿದಂತಾಗುತ್ತದೆ. ಆದ್ದರಿಂದ ಫಲಾನುಭವಿ ಆಧರಿತ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಪಡಿತರ ಚೀಟಿ ವಿತರಣೆಗೆ ಅರ್ಜಿಗಳನ್ನು ಆಹ್ವಾನಿಸುವ ಕಾರ್ಯ ಸ್ಥಗಿತಗೊಳಿಸುವಂತೆ ಸೂಚಿಸಿದ್ದು, ಅದರಂತೆ ಸರ್ಕಾರ ಕ್ರಮ ಕೈಗೊಂಡಿದೆ. ಅಲ್ಲದೆ, ಈಗಾಗಲೇ ಪಡಿತರ ಚೀಟಿಗಳನ್ನು ಸಿದ್ಧಪಡಿಸಿ ಫಲಾನುಭವಿಗಳಿಗೆ ಹಂಚಲು ಸಿದ್ಧವಾಗಿಟ್ಟಿದ್ದರೂ ಅದನ್ನು ವಿತರಿಸದಂತೆ ನಿರ್ದೇಶನ ನೀಡಲಾಗಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸೂಚಿಸಲಾಗಿದೆ ಎಂದರು.
ಅದೇ ರೀತಿ ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಪಿಂಚಣಿಗೆ ಫಲಾನುಭವಿಗಳ ಆಯ್ಕೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಭೂ ಪರಿವರ್ತನೆ, ಫಲಾನುಭವಿಗಳಿಗೆ ನಿವೇಶನ ವಿತರಣೆ, ಭೂಮಿ ಹಂಚಿಕೆ ಮುಂತಾದ ಕಾರ್ಯಗಳನ್ನೂ ನಿಲ್ಲಿಸಲಾಗಿದೆ. ಈಗಾಗಲೇ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ವಿಚಾರದಲ್ಲಿ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದರು.
ವೆಬ್ಸೈಟ್ಗಳ ಮೇಲೂ ಕಣ್ಗಾವಲು: ಇದಲ್ಲದೆ ಸರ್ಕಾರ ಈಗಾಗಲೇ ಕೈಗೊಂಡಿರುವ ಯೋಜನೆಗಳು ಮತದಾರರ ಮೇಲೆ ಪರಿಣಾಮ ಬೀರುವಂತಿದ್ದರೆ ಅದನ್ನೂ ಸ್ಥಗಿತಗೊಳಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಆದೇಶ ಅಥವಾ ನಿರ್ದೇಶನಗಳನ್ನು ನೀಡುವಂತಿಲ್ಲ. ಜತೆಗೆ ಸರ್ಕಾರದ ವಿವಿಧ ಇಲಾಖೆಗಳ ವೆಬ್ಸೈಟ್ ಮೇಲೂ ಕಣ್ಣಿಡಲಾಗಿದ್ದು, ಯಾವುದೇ ಆದೇಶಗಳನ್ನು ಪ್ರಕಟಿಸದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಂದಾಯ, ಪೊಲೀಸ್ ವರ್ಗಾವಣೆ ಶೀಘ್ರ: ಕಂದಾಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ಆಯಾ ಜಿಲ್ಲೆಗಳಲ್ಲಿ 3 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ.
2013ರ ಮೇ 8ರಂದು ಒಂದೇ ಕಡೆ ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸೇವೆ ಸಲ್ಲಿಸುತ್ತಿರುವ ಎಲ್ಲಾ ಅಧಿಕಾರಿಗಳು ಈ ವರ್ಗಾವಣೆ ವ್ಯಾಪ್ತಿಗೆ ಬರಲಿದ್ದಾ ರೆ. ಈಗಾಗಲೇ ಕೆಲವು ಜಿಲ್ಲೆಗಳಿಗೆ ಹೊಸ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ತಕ್ಷಣವೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಾಗಿ 2-3 ದಿನಗಳಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಗಳಲ್ಲಿ 3 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ ಎಂದರು.
ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ: ಚುನಾವಣಾ ನೀತಿ ಸಂಹಿತೆಯಡಿ ಎರಡು ವಿಧಗಳಿವೆ. ಅದರಲ್ಲಿ ಮೊದಲನೆಯದ್ದು ಸರ್ಕಾರ ಕೈಗೊಳ್ಳುವ ಯೋಜನೆಗಳು. ಈ ಕುರಿತು ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಸರ್ಕಾರವೂ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ ಎಂದು ಹೇಳಿದರು. ಅದೇ ರೀತಿ ಮತದಾರರಿಗೆ ಆಮಿಷ ಒಡ್ಡುವುದು, ಇತರೆ ಪಕ್ಷಗಳ ಬಗ್ಗೆ ಹೀನಾಯವಾಗಿ ಮಾತನಾಡುವುದು ಮುಂತಾದ ಅಂಶಗಳು ನೀತಿ ಸಂಹಿತೆ ಉಲ್ಲಂಘನೆಯ ಮತ್ತೊಂದು ವಿಧ. ಈ ಬಗ್ಗೆ ದೂರುಗಳು ಬಂದ ತಕ್ಷಣವೇ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾಲ್ಸೆಂಟರ್ 1950 ಉನ್ನತೀಕರಣ
ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳು, ಮಾಹಿತಿ ಪಡೆಯುವುದು ಮುಂತಾದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಾಪಿಸಲಾಗಿರುವ ಕಾಲ್ಸೆಂಟರ್ (1950) ಉನ್ನತೀಕರಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ. ಈಗ ಕಾಲ್ಸೆಂಟರ್ಗೆ ಬರುವ ಎಲ್ಲಾ ಕರೆಗಳು ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಗೆ ಮಾತ್ರ ಬರುತ್ತವೆ. ಇನ್ನು ಮುಂದೆ ಆಯಾ ಜಿಲ್ಲೆಗಳಿಂದ ಬರುವ ಕರೆಗಳು ಆಯಾ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯನ್ನೇ ತಲುಪುವಂತೆ ಮಾಡಲಾಗುತ್ತದೆ. ಇನ್ನೆರಡು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಡಿಸಿಗಳ ಎತ್ತಂಗಡಿ
ಬೆಂಗಳೂರು: ವಿಧಾನಸಭಾ ಚುನಾವಣೆ ನಡೆಸುವಲ್ಲಿ ಹೆಚ್ಚು ಜವಾಬ್ದಾರಿ ಹೊಂದಿರುವ ಜಿಲ್ಲಾಧಿಕಾರಿಗಳ ಮೇಲೆ ದೃಷ್ಟಿ ಇಟ್ಟಿರುವ ಚುನಾವಣಾ ಆಯೋಗ 12 ಜಿಲ್ಲಾಧಿಕಾರಿಗಳನ್ನು ಬದಲಿಸಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಸೂಚನೆಯಂತೆ 12 ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ, ಸಿ. ಸೋಮಶೇಖರ್ ಅವರ ವರ್ಗಾವಣೆಯಿಂದ ತೆರವಾಗಿರುವ ಅಬಕಾರಿ ಆಯುಕ್ತರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಶಂಭು ದಯಾಳ್ ಮೀನಾ ಅವರನ್ನು ನೇಮಕ ಮಾಡಿದೆ. ಚುನಾವಣೆ ಘೋಷಣೆಯಾಗುವ ಮುನ್ನ ಸರ್ಕಾರದ ಪ್ರತಿನಿಧಿಗಳು ತಮಗೆ ಬೇಕಾದವರನ್ನು ಜಿಲ್ಲಾಧಿಕಾರಿಗಳನ್ನಾಗಿ ನೇಮಕ ಮಾಡಿಸಿಕೊಂಡಿದ್ದರು. ಚುನಾವಣೆ ಸಮಯದಲ್ಲಿ ಈ ಅಧಿಕಾರಿಗಳು ಆಡಳಿತ ಪಕ್ಷದವರ ಪರ ಕೆಲಸ ಮಾಡಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಇದೀಗ ಚುನಾವಣಾ ಆಯೋಗ ಈ ಜಿಲ್ಲಾಧಿಕಾರಿಗಳನ್ನು ಬದಲಿಸಿ ಬೇರೆಯವರನ್ನು ನೇಮಕ ಮಾಡುವಂತೆ ಸೂಚಿಸಿತ್ತು. ಅದರಂತೆ ಸರ್ಕಾರ 12 ಜಿಲ್ಲಾಧಿಕಾರಿಗಳನ್ನು ಬದಲಾವಣೆ ಮಾಡಿದೆ.
ವರ್ಗಾವಣೆಯಾದ ಜಿಲ್ಲಾಧಿಕಾರಿಗಳು: ಹರ್ಷಗುಪ್ತ-ದಕ್ಷಿಣ ಕನ್ನಡ, ನವೀನ್ರಾಜ್ ಸಿಂಗ್- ರಾಮನಗರ, ಮೌನೀಷ್ ಮೌದ್ಗಿಲ್- ಬೆಳಗಾವಿ, ಪಿ. ಹೇಮಲತಾ- ಬೆಂಗಳೂರು ಗ್ರಾಮಾಂತರ, ವಿ. ಪೊನ್ನುರಾಜ್- ಬೆಂಗಳೂರು ನಗರ, ಡಾ.ಜೆ. ರವಿಶಂಕರ್- ಚಿತ್ರದುರ್ಗ, ಡಾ.ಎಂ.ಎನ್. ಅಜಯ್ನಾಗಭೂಷಣ್- ಮಂಡ್ಯ, ವಿ. ಅನ್ಬುಕುಮಾರ್- ಹಾವೇರಿ, ಸಿ. ಶಿಖಾ- ಮೈಸೂರು, ಡಾ.ಕೆ.ಜಿ. ಜಗದೀಶ್- ಗುಲ್ಬರ್ಗಾ, ಉಜ್ವಲ್ ಕುಮಾರ್ ಘೋಷ್- ರಾಯಚೂರು, ಪಿ. ರಾಜೇಂದ್ರ ಚೋಳ- ಯಾದಗಿರಿ ಜಿಲ್ಲಾಧಿಕಾರಿ.
ಮತದಾರರ ಗುರುತಿನ ಚೀಟಿಗೆ 4 ಲಕ್ಷ ಅರ್ಜಿ
ಮತದಾರರ ಗುರುತಿನ ಚೀಟಿ ಕುರಿತಂತೆ ಚುನಾವಣಾ ಆಯೋಗ ಕೈಗೊಂಡಿರುವ ಜಾಗೃತಿ ಕಾರ್ಯಕ್ರಮಗಳಿಂದಾಗಿ ಜನವರಿ 20ರಿಂದ ಇದುವರೆಗೆ ಗುರುತಿನ ಚೀಟಿಗಾಗಿ 4 ಲಕ್ಷ ಅರ್ಜಿಗಳು ಬಂದಿವೆ ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ಹೇಳಿದ್ದಾರೆ. ಜ. 2ರ ಮಾಹಿತಿಯಂತೆ ರಾಜ್ಯದಲ್ಲಿ 4.18 ಲಕ್ಷ ಮಂದಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ನಂತರದಲ್ಲಿ 4 ಲಕ್ಷ ಅರ್ಜಿಗಳು ಬಂದಿದ್ದು, ಈ ಪೈಕಿ 2.24 ಲಕ್ಷ ಅರ್ಜಿಗಳಿಗೆ ಒಪ್ಪಿಗೆ ನೀಡಲಾಗಿದೆ. ಶೀಘ್ರದಲ್ಲೇ ಅವರಿಗೆ ಗುರುತಿನ ಚೀಟಿ ವಿತರಿಸಲಾಗುವುದು. ಉಳಿದ ಅರ್ಜಿಗಳನ್ನೂ ಶೀಘ್ರ ಇತ್ಯರ್ಥಗೊಳಿಸಲಾಗುವುದು. ಏ. 7ರವರೆಗೆ ಬರುವ ಎಲ್ಲಾ ಅರ್ಜಿಗಳಿಗೂ ಗುರುತಿನ ಚೀಟಿ ವಿತರಿಸಲಾಗುವುದು ಎಂದು ತಿಳಿಸಿದರು.