ಮನ್ನಾ ಬೇಡೆಂದ ಮುನ್ನಾ

ಕ್ಷಮಾದಾನಕ್ಕಾಗಿ ಮನವಿ ಸಲ್ಲಿಸುವುದಿಲ್ಲ, ಈ ಬಗ್ಗೆ ದಯಮಾಡಿ ಯಾರೂ ಚರ್ಚೆ ಮಾಡಬೇಡಿ, ನನ್ನನ್ನು ನನ್ನ ಪಾಡಿಗೆ ಇರಲು ಬಿಡಿ...
ಮನ್ನಾ ಬೇಡೆಂದ ಮುನ್ನಾ
Updated on: 

ಮುಂಬೈ: ಕ್ಷಮಾದಾನಕ್ಕಾಗಿ ಮನವಿ ಸಲ್ಲಿಸುವುದಿಲ್ಲ, ಈ ಬಗ್ಗೆ ದಯಮಾಡಿ ಯಾರೂ ಚರ್ಚೆ ಮಾಡಬೇಡಿ, ನನ್ನನ್ನು ನನ್ನ ಪಾಡಿಗೆ ಇರಲು ಬಿಡಿ...
ಹೀಗೆಂದು ಅಲವತ್ತುಗೊಂಡಿದ್ದಾರೆ ಬಾಲಿವುಡ್ ನಟ ಸಂಜಯ್ ದತ್. 1993ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಜಯ್ ದತ್ ಗುರುವಾರ ಮುಂಬೈನ ತಮ್ಮ ನಿವಾಸದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲೇ ಹಲವಾರು ಬಾರಿ ಗದ್ಗದಿತರಾದ ಅವರು, ನನ್ನ ಜೀವನ ಕಠಿಣ ಪರಿಸ್ಥಿತಿಯಲ್ಲಿದೆ. ನಾನು ಜರ್ಜರಿತಗೊಂಡಿದ್ದೇನೆ. ನಾನು ಶಾಂತಿಯಿಂದ ಇರಲು ಬಿಡಿ. ನನ್ನ ಕ್ಷಮಾದಾನ ಮನವಿ ಬಗ್ಗೆ ಯಾರೂ ಚರ್ಚಿಸಬೇಡಿ ಎಂದು ಮಾಧ್ಯಮಗಳ ಮುಂದೆ ಕೈಮುಗಿದು ಬೇಡಿಕೊಂಡಿದ್ದಾರೆ.
ದೇಶದ ನ್ಯಾಯ ವ್ಯವಸ್ಥೆ ಮತ್ತು ದೇಶದ ಬಗ್ಗೆ ನನಗೆ ಗೌರವವಿದೆ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಕೋರ್ಟ್ ನನಗೆ ನಾಲ್ಕು ವಾರಗಳ ಸಮಯಾವಕಾಶ ಕೊಟ್ಟಿದೆ.       
ಈ ಸಮಯದಲ್ಲೇ ನಾನು ಶರಣಾಗುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲೇ ಗದ್ಗದಿತರಾದ ಅವರನ್ನು ಸೋದರಿ ಪ್ರಿಯಾದತ್ ಸಂತೈಸಿದರು.
  ಈ ದೇಶದಲ್ಲಿ ಕ್ಷಮಾದಾನಕ್ಕೆ ಅರ್ಹರಾದವರು ಬೇರೆಯವರಿದ್ದಾರೆ. ಅವರಿಗೆ ಕ್ಷಮೆ ಸಿಗಲಿ. ನನಗೆ ಬೇಡ ಎಂದರು.
ಚುಟುಕಾಗಿ ಪತ್ರಿಕಾಗೋಷ್ಠಿ ನಡೆಸಿದ ಸಂಜಯ್ ದತ್, ಸುದ್ದಿಗಾರರಿಂದ ಪ್ರಶ್ನೆ ಸ್ವೀಕರಿಸಲಿಲ್ಲ. ಪತ್ರಿಕಾಗೋಷ್ಠಿ ಮಧ್ಯದಲ್ಲೇ ಅಳುತ್ತಾ ಅಲ್ಲಿಂದ ಎದ್ದುಹೋದರು.
  ಈಗಾಗಲೇ 18 ತಿಂಗಳ ಕಾಲ ಜೈಲಿನಲ್ಲಿ ಕಳೆದಿರುವ ಸಂಜಯ್ ದತ್ ಅವರು ಇನ್ನು ಮೂರೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
'ಪೊಲೀಸ್‌ಗಿರಿ' ಸದ್ಯದಲ್ಲೇ ಅಂತ್ಯ
ಸಂಜಯ್ ದತ್ ಅಭಿನಯಿಸುತ್ತಿರುವ ಪೊಲೀಸ್‌ಗಿರಿ ಚಿತ್ರದ ಚಿತ್ರೀಕರಣವು ಇನ್ನು 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ. ಸಂಜಯ್ ದತ್ ಇನ್ನು 10 ದಿನಗಳ ಸಮಯ ಕೊಟ್ಟರೆ ಚಿತ್ರ ಪೂರ್ಣಗೊಳಿಸಬಹುದಾಗಿದೆ. ಸಂಜಯ್ ಡೇಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕ್ಷಮೆ ಸಿಗಲೇಬೇಕು: ಕಾಟ್ಜು
ಸ್ವತಃ ದತ್ ಅವರೇ ಕ್ಷಮೆ ಬೇಡ ಎಂದು ಹೇಳಿದ್ದರೂ ಪತ್ರಿಕಾ ಮಂಡಳಿ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಅವರು ಮುಂಬೈ ಸರಣಿ ಸ್ಫೋಟ ಅಪರಾಧಿಗಳಾದ ಸಂಜಯ್ ದತ್ ಮತ್ತು ಜೈಬುನ್ನೀಸಾ ಅವರಿಗೆ ಕ್ಷಮಾದಾನ ನೀಡಬೇಕು ಎಂದು ಹೇಳಿದ್ದಾರೆ. ಈ ಸಂಬಂಧ ಅವರು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.
  ದತ್ ಹಾಗೂ ಜೈಬುನ್ನೀಸಾ ಅವರಿಗೆ ಮಾನವೀಯ ನೆಲೆಗಳ ಆಧಾರದಲ್ಲಿ ಕ್ಷಮೆ ನೀಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com