

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಯುಪಿಎಗೆ ನೀಡಿರುವ ಬಾಹ್ಯ ಬೆಂಬಲ ವಾಪಸ್ ತೆಗೆದುಕೊಳ್ಳುವ ಸಂಭವವಿದೆ ಎಂದಿದ್ದ ಪ್ರಧಾನಿ ಮನಮೋಹನ್ ಸಿಂಗ್ಗೆ ಮುಲಾಯಂ ನಿಶ್ಚಿತ ಬೆಂಬಲದ ಮುಲಾಮು ನೀಡಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಯುಪಿಎಗೆ ನೀಡಿರುವ ಬೆಂಬಲ ವಾಪಸ್ ಪಡೆದರೂ ಪಡೆಯಬಹುದು ಎಂದಿದ್ದ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಗೆ ಮುಲಾಯಂ ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯಕ್ಕೆ ನಮ್ಮ ತಲೆಯಲ್ಲಿ ಬೆಂಬಲ ವಾಪಸ್ ಪಡೆಯುವ ಚಿಂತನೆ ಇಲ್ಲವೇ ಇಲ್ಲ. ಮುಂದೆ ಕಾಲ ಬಂದಾಗ ನೋಡೋಣ. ಆದರೆ ಈ ವರ್ಷವೇ ಲೋಕಸಭೆಗೆ ಚುನಾವಣೆ ನಡೆಯುವುದು ಶತಸಿದ್ಧ ಎಂದು ಹೇಳಿದ್ದಾರೆ.
ಪ್ರಧಾನಿ ಸಿಂಗ್ ಹೇಳಿಕೆ ಕುರಿತಂತೆ ಮಾತನಾಡಿರುವ ಮುಲಾಯಂ ಮುಂದಿನ ಹಾದಿಯ ಬಗ್ಗೆ ವಿವರ ನೀಡಿದ್ದಾರೆ. ಸರ್ಕಾರಕ್ಕೆ ಇನ್ನು ಕೇವಲ 8-9 ತಿಂಗಳ ಕಾಲಾವಕಾಶವಿದೆ. ಇಂಥ ಸಮಯದಲ್ಲಿ ಸರ್ಕಾರ ಬೀಳಲು ನಾನೇಕೆ ಅವಕಾಶ ಕೊಡಬೇಕು. ಹೀಗಾಗಿ ಯುಪಿಎಗೆ ನೀಡಿರುವ ಬೆಂಬಲ ವಾಪಸ್ ಪಡೆಯುವುದೇ ಇಲ್ಲ ಎಂದು ಹೇಳಿದ್ದಾರೆ.