ಟಿಕೆಟ್ ಪರದಾಟ

ಟಿಕೆಟ್ ಆಕಾಂಕ್ಷಿಗಳ ಅತೃಪ್ತಿ ಹಾಗೂ ಪಕ್ಷಾಂತರದ ಭೀತಿಯಿಂದ ತಲ್ಲಣಗೊಂಡಿರುವ ಎಲ್ಲ ಪಕ್ಷಗಳು ಅಭ್ಯರ್ಥಿಗಳನ್ನು ಅಖೈರುಗೊಳಿಸುವುದನ್ನ ಮುಂದೂಡುತ್ತಲೇ ಸಾಗಿವೆ...
Updated on: 

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.29
ಟಿಕೆಟ್ ಆಕಾಂಕ್ಷಿಗಳ ಅತೃಪ್ತಿ ಹಾಗೂ ಪಕ್ಷಾಂತರದ ಭೀತಿಯಿಂದ ತಲ್ಲಣಗೊಂಡಿರುವ ಎಲ್ಲ ಪಕ್ಷಗಳು ಅಭ್ಯರ್ಥಿಗಳನ್ನು ಅಖೈರುಗೊಳಿಸುವುದನ್ನು ಮುಂದೂಡುತ್ತಲೇ ಸಾಗಿವೆ.
ದೆಹಲಿಯಲ್ಲಿ ಸತತ ಸಭೆ ನಡೆಸುತ್ತಿರುವ ಕಾಂಗ್ರೆಸ್ ಪರಮೇಶ್ವರ ಹಾಗೂ ಸಿದ್ದರಾಮಯ್ಯ ನಡುವಿನ ಹೊಂದಾಣಿಕೆ ಕೊರತೆಯಿಂದ ಅಭ್ಯರ್ಥಿಗಳ ಆಯ್ಕೆಗೆ ಹೆಣಗಾಡುತ್ತಿದೆ. ಬಿಜೆಪಿ 120 ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಅಂತಿಮಗೊಳಿಸಿದ್ದು ಸೋಮವಾರ ವರಿಷ್ಠರಿಗೆ ರವಾನಿಸಲು ನಿರ್ಧರಿಸಿದೆ. 224 ಕ್ಷೇತ್ರಗಳಿಗೂ ಒಂದೇ ಬಾರಿಗೆ ಅಭ್ಯರ್ಥಿಗಳ ಹೆಸರು ಪ್ರಕಟ ಮಾಡಲು ಜೆಡಿಎಸ್‌ಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಆದರೆ, ಕೆಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿ ಬೀಗುತ್ತಿದ್ದು ಶನಿವಾರ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧವಾಗಿದೆ.
ಸೋಮವಾರ ವರಿಷ್ಠರಿಗೆ ರವಾನೆ: ಮಡಿಕೇರಿ ಹಾಗೂ ಶಿವಮೊಗ್ಗದಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ಕೆ.ಎಸ್. ಈಶ್ವರಪ್ಪ, '120 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಖೈರುಗೊಳಿಸಲಾಗಿದೆ. ಭಾನುವಾರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು ಸೋಮವಾರ ಪಟ್ಟಿಯನ್ನು ವರಿಷ್ಠರಿಗೆ ರವಾನಿಸಲಾಗುವುದು. ಏ.7 ಅಥವಾ 8ರಂದು ಮೊದಲ ಪಟ್ಟಿ ಪ್ರಕಟಿಸಲಾಗುವುದು. ಇನ್ನುಳಿದ ಕ್ಷೇತ್ರಗಳಿಗೆ ಇಬ್ಬರು ಹಾಗೂ ಮೂವರು ಆಕಾಂಕ್ಷಿಗಳಿದ್ದಾರೆ. ಅದರ ಕುರಿತು ಸುದೀರ್ಘ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಯಾವುದೇ ಗೊಂದಲ ಹಾಗೂ ಅತೃಪ್ತಿಗೆ ಅವಕಾಶ ನೀಡುವುದಿಲ್ಲ' ಎಂದು ತಿಳಿಸಿದ್ದಾರೆ.
ಜೆಡಿಎಸ್ ಕಾದು ನೋಡುವ ತಂತ್ರ: 224 ಕ್ಷೇತ್ರಗಳಿಗೂ ಒಂದೇ ಬಾರಿಗೆ ಅಭ್ಯರ್ಥಿಗಳ ಹೆಸರು ಪ್ರಕಟ ಮಾಡಲು ಸಿದ್ಧವಾಗಿದ್ದ ಜೆಡಿಎಸ್ ಈಗ ಅದನ್ನು ಕೈ ಬಿಟ್ಟು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಅಜ್ಮೀರ್‌ನಿಂದ ವಾಪಸ್ ಬಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಾ.30ರೊಳಗೆ ಅಭ್ಯರ್ಥಿಗಳ ಪಟ್ಟಿಯನ್ನು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಶದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಈ ಸಮಾವೇಶ ನಡೆಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.
ಕಾಂಗ್ರೆಸ್‌ನಲ್ಲಿ ಗೊಂದಲ: ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರ ನಡುವಿನ ಗೊಂದಲದ ನಡುವೆಯೇ ಶನಿವಾರ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯ ನಿರ್ಣಾಯಕ ಸಭೆ ನಡೆಯಲಿದೆ. ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರು ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧಪಡಿಸಲಿದ್ದಾರೆ.
ಇಂದು ಕೆಜೆಪಿ ಎರಡನೇ ಪಟ್ಟಿ: ಮೊದಲ ಹಂತದಲ್ಲಿ 69 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಕೆಜೆಪಿ ಶನಿವಾರ 40ರಿಂದ 50 ಕ್ಷೇತ್ರಗಳಿಗೆ 2ನೇ ಕಂತಿನ ಪಟ್ಟಿ ಪ್ರಕಟಿಸಲು ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶನಿವಾರ ತಮ್ಮ ನೇತೃತ್ವದಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಅಲ್ಲಿ 40ರಿಂದ 50 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com