ಇನ್ನಷ್ಟು ಮಂದಿ ಫಿಕ್ಸ್

ರಾಜಸ್ಥಾನ ರಾಯಲ್ಸ್ ತಂಡದ ಇನ್ನೂ ಇಬ್ಬರು ಆಟಗಾರರು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು..
ಇನ್ನಷ್ಟು ಮಂದಿ ಫಿಕ್ಸ್
Updated on: 

ನವದೆಹಲಿ: ರಾಜಸ್ಥಾನ ರಾಯಲ್ಸ್ ತಂಡದ ಇನ್ನೂ ಇಬ್ಬರು ಆಟಗಾರರು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಸುಳಿವು ನೀಡಿದ್ದಾರೆ. ಹೀಗಾಗಿ ಫಿಕ್ಸಿಂಗ್ ಭೂತದ ಬಾಹುಗಳು ಎಲ್ಲಿಯವರೆಗೆ ಹರಡಿದೆ ಎಂಬುದು ಪೊಲೀಸರಿಗೆ ಇನ್ನೂ ಸ್ಪಷ್ಟವಾಗಿಲ್ಲ.
ಇನ್ನಿಬ್ಬರು ಭಾಗಿಯಾಗಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪ್ರಕರಣದ ಬೆನ್ನು ಬಿದ್ದಿರುವ ದೆಹಲಿ ಪೊಲೀಸರು ಶುಕ್ರವಾರ ಹೇಳಿದ್ದಾರೆ. ಬಂಧಿಸಲಾಗಿರುವ ಬುಕ್ಕಿ ಮತ್ತು ರಾಜಸ್ಥಾನದ ಮಾಜಿ ಆಟಗಾರ ಅಮಿತ್ ಸಿಂಗ್ ನೀಡಿರುವ ಹೇಳಿಕೆಗಳನ್ನು ಆಧರಿಸಿ ಕಳೆದ ವರ್ಷದ ಆವೃತ್ತಿಯಲ್ಲಿ ಈ ಆಟಗಾರರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ದೆಹಲಿಯಲ್ಲಿ ನಡೆದ ಪಂದ್ಯ ಇದಕ್ಕೆ ಸಾಕ್ಷಿ ಎನ್ನಲಾಗುತ್ತಿದೆ.
ಕಳೆದ ವರ್ಷವೂ ಫಿಕ್ಸ್: ಕಳೆದ ವರ್ಷ ಏಪ್ರಿಲ್ 29 ರಂದು ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ನಡುವೆ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನಲ್ಲಿ ನಡೆದ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿದೆ ಎನ್ನಲಾಗುತ್ತಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ 152 ರನ್ ಗಳಿಸಿತ್ತು ನಂತರ ರಾಜಸ್ಥಾನ ಕೇವಲ 3 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ ಸೋಲನುಭವಿಸಿತ್ತು.
ಅಂತಿಮ ಎರಡು ಓವರ್‌ಗಳಲ್ಲಿ ಜಯ ಸಾಧಿಸಲು ರಾಜಸ್ಥಾನಕ್ಕೆ 12 ರನ್ ಬೇಕಾಗಿತ್ತು. ಅಜಿಂಕ್ಯ ರಹಾನೆ ಮತ್ತು ಬ್ರಾಡ್ ಹಾಡ್ಜ್ ಕ್ರೀಸ್‌ನಲ್ಲಿದ್ದರು. ಹಾಡ್ಜ್ ಮಾರ್ಕೆಲ್ ಬೌಲಿಂಗ್‌ನಲ್ಲಿ ಎಲ್‌ಬಿಗೆ ಬಲಿಯಾಗಿದ್ದರು.
ಈ ಪಂದ್ಯದ ಅಂತಿಮ ಎರಡು ಓವರ್‌ಗಳಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿತ್ತು ಎಂದು ಅಮಿತ್ ಸಿಂಗ್ ದೆಹಲಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಹೀಗಾಗಿ ಪೊಲೀಸರು ಈ ಕುರಿತು ಪರಿಶೀಲನೆಗೆ ಮುಂದಾಗಿದ್ದಾರೆ.
ಈಗಾಗಲೇ ಬಂಧಿಸಲಾಗಿರುವ ರಾಜಸ್ಥಾನ ರಾಯಲ್ಸ್ ತಂಡದ ಅಜಿತ್ ಚಾಂಡಿಲಾ ಐಪಿಎಲ್‌ನ 5ನೇ ಆವೃತ್ತಿಯಲ್ಲೂ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ಅಮಿತ್ ಸಿಂಗ್ ಹೇಳಿಕೆಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.

ಸ್ತ್ರೀ ಸಂಗದ ಆಮಿಷ
ಈ ಸ್ಪಾಟ್ ಫಿಕ್ಸಿಂಗ್ ಕೇವಲ ಹಣಕ್ಕಷ್ಟೇ ಸೀಮಿತ ಆಗಿಲ್ಲ. ಬುಕ್ಕಿಗಳು ಆಟಗಾರರಿಗೆ ಬೆಲೆವೆಣ್ಣುಗಳನ್ನೂ ಸಪ್ಲೈ ಮಾಡಿದ್ದರು ಎಂಬ ಆತಂಕಕಾರಿ ಅಂಶ ಬಯಲಾಗಿದೆ.
ಪೊಲೀಸರ ತನಿಖೆಯಿಂದ ಈ ಮಾಹಿತಿ ಬಹಿರಂಗವಾಗಿದ್ದು, ಆಟಗಾರರ ದೂರವಾಣಿ ಸಂಭಾಷಣೆಯ ದಾಖಲೆಗಳು ಇದಕ್ಕೆ ಪುಷ್ಠಿ ನೀಡಿವೆ.
ಬುಕ್ಕಿಗಳಾದ ಮನನ್ ಮತ್ತು ಚಂದ್, ಆಟಗಾರರಾದ ಶ್ರೀಶಾಂತ್ ಹಾಗೂ ಅಜಿತ್ ಚಾಂಡಿಲಾ ಅವರಿಗೆ ಕನಿಷ್ಠ ಮೂರು ಬಾರಿ ಬೆಲೆವೆಣ್ಣುಗಳನ್ನು ಪೂರೈಸಿದ್ದರು. ಉಳಿದಂತೆ ಅಂಕಿತ್ ಸಹ ಬೆಲೆವೆಣ್ಣು ಸೇವೆಯನ್ನು ಒಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.  ಅಲ್ಲದೆ ಪೊಲೀಸರು ಶ್ರೀಶಾಂತ್ ಹಾಗೂ ಆತನ ಸ್ನೇಹಿತ ಬಿಜುವನ್ನು ಬಂಧಿಸಿದಾಗ ಇವರ ಜತೆ ಕೆಲ ಹುಡುಗಿಯರು ಸಹ ಇದ್ದರು.

ಬಿಸಿಸಿಐ ತುರ್ತು ಸಭೆ
ಸ್ಪಾಟ್ ಫಿಕ್ಸಿಂಗ್ ಕುರಿತು ಚರ್ಚೆ ನಡೆಸಲು ಬಿಸಿಸಿಐ ಭಾನುವಾರ ತನ್ನ ಕಾರ್ಯನಿರ್ವಾಹಕ ಮಂಡಳಿಯ ತುರ್ತು ಸಭೆ ಕರೆದಿದೆ. ರಾಜಸ್ಥಾನ ರಾಯಲ್ಸ್ ತಂಡದ ಶ್ರೀಶಾಂತ್, ಅಂಕಿತ್ ಚೌವಾಣ್ ಹಾಗೂ ಅಜಿತ್ ಚಾಂಡಿಲಾ ಅವರು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ಪರಿಶೀಲಿಸಲು ಸಭೆ ಕರೆಯಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com