20 ಸಂಪುಟ ದರ್ಜೆ ಸಚಿವರು, 8 ರಾಜ್ಯ ಸಚಿವರು, ಪ್ರಮಾಣ ಬೋಧಿಸಿದ ರಾಜ್ಯಪಾಲ ಭಾರದ್ವಾಜ್
ಕ.ಪ್ರ. ವಾರ್ತೆ ಬೆಂಗಳೂರು ಮೇ 18
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ 28 ಸದಸ್ಯರ ಸಚಿವ ಸಂಪುಟ ಶನಿವಾರ ಅಸ್ತಿತ್ವಕ್ಕೆ ಬಂದಿದೆ.
ರಾಜಭವನದ ಗಾಜಿನಮನೆಯಲ್ಲಿ ಬೆಳಗ್ಗೆ 10.30ಕ್ಕೆ ಆರಂಭವಾದ ಸಮಾರಂಭದಲ್ಲಿ 20 ಸಂಪುಟ ದರ್ಜೆ ಸಚಿವರು ಮತ್ತು 8 ರಾಜ್ಯ ಸಚಿವರಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದಲ್ಲಿ 34 ಮಂದಿಗೆ ಅವಕಾಶವಿದ್ದು, ಇದರೊಂದಿಗೆ 29 ಸದಸ್ಯರು ಭರ್ತಿಯಾದಂತಾಗಿದೆ. ಇನ್ನೂ ಐದು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗಿದೆ.
ಸಿದ್ದರಾಮಯ್ಯ ಅವರು ನೂತನ ಸಚಿವ ಸಂಪುಟ ಹಿರಿಯರು, ಅನುಭವಿಗಳು ಮತ್ತು ಯುವಕರನ್ನೊಳಗೊಂಡ ಸಮತೋಲನದಿಂದ ಕೂಡಿದೆ. ಶಾಮನೂರು ಶಿವಶಂಕರಪ್ಪ (81) ಅತಿ ಹಿರಿಯ ಸಚಿವರಾಗಿದ್ದರೆ, ಸಂತೋಷ್ ಲಾಡ್ (38) ಅತಿ ಕಿರಿಯ ಸಚಿವ.
ಆರು ತಂಡಗಳಲ್ಲಿ ಪ್ರಮಾಣವಚನ: 28 ನೂತನ ಸಚಿವರಿಗೆ ರಾಜ್ಯಪಾಲರು ಆರು ತಂಡಗಳಲ್ಲಿ ಪ್ರಮಾಣವಚನ ಬೋಧಿಸಿದರು. ಮೊದಲ ತಂಡದಲ್ಲಿ ಆರ್.ವಿ. ದೇಶಪಾಂಡೆ, ಖಮರುಲ್ ಇಸ್ಲಾಂ, ಪ್ರಕಾಶ್ ಬಿ. ಹುಕ್ಕೇರಿ, ಟಿ.ಬಿ. ಜಯಚಂದ್ರ, ಆರ್. ರಾಮಲಿಂಗಾರೆಡ್ಡಿ, 2ನೇ ತಂಡದಲ್ಲಿ ಬಿ. ರಮಾನಾಥ ರೈ, ಎಚ್.ಕೆ. ಪಾಟೀಲ್, ಶಾಮನೂರು ಶಿವಶಂಕರಪ್ಪ, ಡಾ.ಎಚ್.ಸಿ. ಮಹದೇವಪ್ಪ ಮತ್ತು ವಿ. ಶ್ರೀನಿವಾಸಪ್ರಸಾದ್ ಪ್ರಮಾಣ ವಚನ ಸ್ವೀಕರಿಸಿದರು.
3ನೇ ತಂಡದಲ್ಲಿ ಕೆ.ಜೆ. ಜಾರ್ಜ್, ಎಚ್.ಎಸ್. ಮಹದೇವಪ್ರಸಾದ್, ಅಂಬರೀಷ್, ವಿನಯ ಕುಮಾರ್ ಸೊರಕೆ, ಬಾಬುರಾವ್ ಚಿಂಚನಸೂರು, 4ನೇ ತಂಡದಲ್ಲಿ ಯು.ಟಿ. ಖಾದರ್, ಸತೀಶ್ ಜಾರಕಿಹೊಳಿ, ಎಚ್. ಆಂಜನೇಯ, ಎಂ.ಬಿ. ಪಾಟೀಲ್ ಮತ್ತು ಶಿವರಾಜ್ ತಂಗಡಗಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
5ನೇ ತಂಡದಲ್ಲಿ ಅಭಯಚಂದ್ರ ಜೈನ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಡಾ. ಶರಣಪ್ರಕಾಶ್ ಪಾಟೀಲ್, 6ನೇ ತಂಡದಲ್ಲಿ ಕಿಮ್ಮನೆ ರತ್ನಾಕರ, ಉಮಾಶ್ರೀ, ಸಂತೋಷ್ ಲಾಡ್, ಪಿ.ಟಿ. ಪರಮೇಶ್ವರ ನಾಯಕ್ ಅವರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಆರೋಪ ಹೊತ್ತವರು ಸಂಪುಟದಿಂದ ದೂರ: ಕಳಂಕ ಹೊತ್ತಿರುವ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್, ರೋಷನ್ ಬೇಗ್, ಡಿ.ಬಿ. ಇನಾಂದಾರ್, ಅನಿಲ್ ಲಾಡ್ ಅವರಿಗೆ ಸಚಿವ ಸ್ಥಾನ ನೀಡಿಲ್ಲ. ಇದರ ಜತೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನೂ ಮೊದಲ ಹಂತದ ಸಂಪುಟ ವಿಸ್ತರಣೆಯಿಂದ ದೂರವಿಡಲಾಗಿದೆ.
ಬಳ್ಳಾರಿ ಜಿಲ್ಲಾ ಕೋಟಾದಲ್ಲಿ ಸಚಿವ ಸ್ಥಾನ ಪಡೆಯಲು ಅನಿಲ್ ಲಾಡ್ ತೀವ್ರ ಪ್ರಯತ್ನ ನಡೆಸಿದ್ದರಾದರೂ ಅವರನ್ನು ಕೈಬಿಟ್ಟು ಪಿ.ಟಿ. ಪರಮೇಶ್ವರ ನಾಯಕ್ ಅವರನ್ನು ರಾಜ್ಯ ಸಚಿವರಾಗಿ ನೇಮಕ ಮಾಡಲಾಗಿದೆ.
ಹಾಜರಿದ್ದ ಪ್ರಮುಖರು: ಎಐಸಿಸಿ ಪರವಾಗಿ ಪ್ರಧಾನ ಕಾರ್ಯದರ್ಶಿ ಹನುಂತರಾವ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸೇರಿದಂತೆ ಪಕ್ಷದ ಮುಖಂಡರು, ನೂತನ ಸಚಿವರ ಕುಟುಂಬ ಸದಸ್ಯರು, ಸಾವಿರಾರು ಬೆಂಬಲಿಗರು ನೂತನ ಸಚಿವರ ಪ್ರಮಾಣವಚನಕ್ಕೆ ಸಾಕ್ಷಿಯಾದರು.
ಶಾಮನೂರು ಹಿರಿಯ, ಲಾಡ್ ಕಿರಿಯ
ಬೆಂಗಳೂರು: ಶಾಮನೂರು ಶಿವಶಂಕರಪ್ಪ ಅವರಿಗಿಂತ ಹಿರಿಯರಿಲ್ಲ, ಸಂತೋಷ್ ಲಾಡ್ಗಿಂತ ಕಿರಿಯರಿಲ್ಲ. ಹೌದು, 64ರ ಹರೆಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ಸಚಿವ ಸಂಪುಟದಲ್ಲಿ ಶಾಮನೂರು ಶಿವಶಂಕರಪ್ಪ (81) ಅವರು ವಯಸ್ಸಿನಲ್ಲಿ ಅತಿ ಹಿರಿಯರು. ಅದೇ ರೀತಿ 38ರ ಹರೆಯದ ಸಂತೋಷ್ ಲಾಡ್ ಅತಿ ಕಿರಿಯ ಸದಸ್ಯ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿರುವ 28 ಮಂದಿ ಪೈಕಿ ಒಬ್ಬರು ಮಾತ್ರ 80ಕ್ಕಿಂತ ಹೆಚ್ಚು ವಯಸ್ಸಾದವರು. ಆದರೆ, 38ರಿಂದ 40 ವಯಸ್ಸಿನವರು ಇಬ್ಬರಿದ್ದಾರೆ. ಸಂತೋಷ್ ಲಾಡ್ ನಂತರ ಅತಿ ಕಿರಿಯ ಸಚಿವ ಕೃಷ್ಣಬೈರೇಗೌಡ. ಅವರ ವಯಸ್ಸು 40. ಇನ್ನು 41ರಿಂದ 50 ವರ್ಷದೊಳಗಿನ ಸದಸ್ಯರ ಸಂಖ್ಯೆ 7 ಇದ್ದರೆ, 51ರಿಂದ 60 ವಯಸ್ಸಿನವರು 8 ಮಂದಿ ಹಾಗೂ 61ರಿಂದ 70 ಹರೆಯದವರು 10 ಮಂದಿ ಇದ್ದಾರೆ. 70ರಿಂದ 80ರ ವಯಸ್ಸಿನವರು ಯಾರೂ ಇಲ್ಲ.
ಸಚಿವ ಸ್ಥಾನ ಸಿಕ್ಕರೆ ಮಾಡುತ್ತೇನೆ, ಇಲ್ಲವಾದರೆ ಇಲ್ಲ: ಕಾಗೋಡು
ಬೆಂಗಳೂರು: ವಿಧಾನಸಭೆ ಅಧ್ಯಕ್ಷರ ಸ್ಥಾನ ಅಲಂಕರಿಸುವುದಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವರಾಗುವ ಬಯಕೆ ವ್ಯಕ್ತಪಡಿಸಿದ್ದ ಅವರಿಗೆ ಸ್ಪೀಕರ್ ಹುದ್ದೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಈ ಸಂಬಂಧ ಹಿರಿಯ ಮುಖಂಡರ ಜತೆ ಕಾಗೋಡು ತಿಮ್ಮಪ್ಪ ಅವರ ಜತೆ ಮಾತುಕತೆಯನ್ನೂ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲೇ ಶಿವಮೊಗ್ಗ ಜಿಲ್ಲೆಗೆ ಪ್ರಾತಿನಿಧ್ಯ ನೀಡಲು ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದ್ದು, ಮೇ 30ರೊಳಗೆ ಕಾಗೋಡು ಅವರ ಮನವೊಲಿಸಲು ನಿರ್ಧರಿಸಲಾಗಿದೆ. ಈ ಸಂಬಂಧ “ ಕನ್ನಡಪ್ರಭ ’ ಜತೆ ಮಾತನಾಡಿದ ಕಾಗೋಡು ತಿಮ್ಮಪ್ಪ “ ನಾನು ಯಾವುದೇ ಹುದ್ದೆಯನ್ನು ಕೇಳಿಲ್ಲ. ಸಚಿವ ಸ್ಥಾನ ಕೊಟ್ಟರೆ ಮಾಡುತ್ತೇನೆ. ಇಲ್ಲವಾದರೆ ಇಲ್ಲ. ಸುಮ್ಮನೆ ಕತೆ ಹೇಳುವುದು ನನ್ನ ಜಾಯಮಾನವಲ್ಲ. ಒಳ್ಳೆ ಸರ್ಕಾರ ಬೇಕು, ಒಳ್ಳೆ ಕೆಲಸ ನಡೆಯಬೇಕು ಎಂದು ಜನ ಈ ಬಾರಿ ಕಾಂಗ್ರೆಸ್ ಪರ ತೀರ್ಪು ನೀಡಿದ್ದಾರೆ. ಅದನ್ನು ಋಜುವಾತುಪಡಿಸಬೇಕು ’ ಎಂದು ಹೇಳಿದ್ದಾರೆ. ನನ್ನನ್ನು ಸ್ಪೀಕರ್ ಮಾಡುವ ಪ್ರಸ್ತಾಪ ಇದೆ ಎಂಬ ವಿಚಾರ ನನಗೆ ಗೊತ್ತಿಲ್ಲ. ನನಗೆ ಯಾರೂ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.