

ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 20-
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸೋಮವಾರ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ನಾಲ್ವರು ಮೃತಪಟ್ಟಿದ್ದಾರೆ.
ಹುಕ್ಕೇರಿ ತಾಲೂಕಿನ ಶಿಪ್ಪೂರ್ನಲ್ಲಿ ಓಮಿನಿ ಕಾರಿನ ಮೇಲೆ ಆಲದ ಮರವೊಂದು ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಇಚಲಕರಂಜಿ ಮೂಲದ ಫರ್ಜಾನ್ ಮುಸ್ತಾಕ್ ಮುಲ್ಲಾ (35), ಮೊಹಮ್ಮದ್ ಅಸ್ಲಂ ಮುಸ್ತಾಕ್ ಮುಲ್ಲಾ (2) ಹಾಗೂ ಪರಾಹ್ (3) ಮೃತಪಟ್ಟವರು. ಸಂಬಂಧಿಕರ ಮನೆಗೆ ಬಂದು ವಾಪಸ್ ತೆರಳುತ್ತಿದ್ದಾಗ ದಾರಿ ಮಧ್ಯೆ ಈ ಅವಘಡ ಸಂಭವಿಸಿದೆ. ಬೈಲಹೊಂಗಲ, ಚಿಕ್ಕೋಡಿ ತಾಲೂಕಿನಲ್ಲೂ ಭಾರಿ ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.
ಚಿಕ್ಕಮಗಳೂರು ಸಮೀಪದ ಕಣಿವೆ ದಾಸರಹಳ್ಳಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಪಕ್ಕದಲ್ಲೇ ಶೆಡ್ ನಿರ್ಮಿಸಿಕೊಂಡಿದ್ದರು. ಮಳೆ, ಗಾಳಿ ಜೋರಾಗಿದ್ದರಿಂದ ಆ ಶೆಡ್ನಲ್ಲಿ ಆಶ್ರಯ ಪಡೆದಾಗ ಕುಸಿದು ಬಿದ್ದ ಪರಿಣಾಮ ಜಯಕುಮಾರ್ (21) ಎಂಬಾತ ಮೃತಪಟ್ಟಿದ್ದಾನೆ. ಇನ್ನುಳಿದವರು ಬಚಾವ್ ಆಗಿದ್ದಾರೆ.
ಧರೆಗುರುಳಿದ ವಿದ್ಯುತ್ ಕಂಬಗಳು: ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ, ದೊಡ್ಡಬಳ್ಳಾಪುರ, ಸೂಲಿಬೆಲೆ, ಹುಬ್ಬಳ್ಳಿ, ಧಾರವಾಡ, ಕೊಡಗಿನಲ್ಲೂ ಧಾರಾಕಾರ ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಕುಣಿಗಲ್ನಲ್ಲಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಕೆಲವು ಮರಗಳು ಧರೆಗುರುಳಿವೆ. ಮನೆಯೊಂದರ ಮೇಲೆ ಮರ ಬಿದ್ದಿದ್ದರಿಂದ ಚಾವಣಿ ಜಖಂಗೊಂಡಿದೆ. ಎಚ್.ಡಿ.ಕೋಟೆಯಲ್ಲಿ ಸಿಡಿಲಿಗೆ ಎರಡು ಆಕಳು ಬಲಿಯಾಗಿವೆ. ಭಾರಿ ಮಳೆ, ಗಾಳಿಗೆ 90 ಮನೆಗಳಿಗೆ ಹಾನಿಯಾಗಿದೆ.
ಹುಬ್ಬಳ್ಳಿ- ಧಾರವಾಡದಲ್ಲಿ ಆಲಿಕಲ್ಲು ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಧಾರವಾಡದಲ್ಲಿ ವಿದ್ಯುತ್ ತಂತಿಯ ಮೇಲೆ ಮರಗಳು ಉರುಳಿದ್ದರಿಂದ ವ್ಯತ್ಯಯ ಉಂಟಾ ಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಮಳೆಯ ಅಬ್ಬರದಿಂದ ತಂಪಿನ ವಾತಾವರಣ ನಿರ್ಮಾಣವಾಗಿದೆ. ಯಲಬುರ್ಗಾ ತಾಲೂಕಿನಲ್ಲೂ ಆಲಿಕಲ್ಲು ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಗಜೇಂದ್ರಗಡ, ಕುಷ್ಟಗಿಯಲ್ಲಿ ವಿದ್ಯುತ್ ಕಂಬ, ಮರಗಳು ಧರೆಗುರುಳಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿದೆ. 15ಕ್ಕೂ ಹೆಚ್ಚು ಮನೆಗಳ ಚಾವಣಿ ಹಾರಿ ಹೋಗಿವೆ.
ಇದೇ ವೇಳೆ ಧಾರವಾಡ ತಾಲೂಕಿನ ಹಂಗರಕಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಸಿಡಿಲಿಗೆ ಬಲಿಯಾಗಿದ್ದಾನೆ. ಮೃತನನ್ನು ವೀರಪ್ಪ ನಿಂಗಪ್ಪ ರಾಮಣ್ಣನವರ ಎಂದು ಗುರುತಿಸಲಾಗಿದೆ.
ಈತ ಮಳೆಯಿಂದ ರಕ್ಷಿಸಿಕೊಳ್ಳಲು ಗ್ರಾಮದ ಶಾಲೆಯ ಹಿಂಭಾಗದಲ್ಲಿದ್ದ ಶೆಡ್ ಮೊರೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮ ಸುಟ್ಟು ಕರಕಲಾಗಿದ್ದಾನೆ. ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು. ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಜೊತೆಗೆ ವರವನಾಗಭಾವಿಯಲ್ಲಿ ಸಿಡಿಲಿಗೆ ಹಸುವೊಂದು ಬಲಿಯಾಗಿದೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ
ಕಾದು ಕೆಂಡವಾಗಿದ್ದ ರಾಜಧಾನಿಗೆ ವರುಣ ತಂಪೆರೆದರೆ, ವಿವಿಧೆಡೆ ಸಂಚಾರ ದಟ್ಟನೆಯಿಂದ ವಾಹನ ಸವಾರರು ಪರದಾಡುವಂತಾಯಿತು. ಸೋಮವಾರ ಸಂಜೆ ನಗರದಲ್ಲಿ ಸುರಿದ ಮಳೆಗೆ ಐದಾರು ಕಡೆ ಮರಗಳು ಧರೆಗುರುಳಿ ಎರಡು ಕಾರುಗಳು ಜಖಂಗೊಂಡಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಗಾಳಿಯೊಂದಿಗೆ ಸಂಜೆ ಆರಂಭವಾದ ಮಳೆಯಿಂದ ರಸ್ತೆಗಳಲ್ಲಿದ್ದ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರು ರಸ್ತೆ ಯಾವುದು ಗುಂಡಿ ಯಾವುದು ಎಂಬುದನ್ನು ಗುರುತಿಸಲು ಸಾಧ್ಯವಾಗದೆ ಪರದಾಡಿದರು. ಇನ್ನು ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಕಾಡುಗೋಡಿಯಲ್ಲಿ ಹಳೇ ತೆಂಗಿನಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ಬಳಿಕ ಎರಡು ಕಾರುಗಳ ಮೇಲೆ ಬಿದ್ದಿದೆ. ಇದರಿಂದ ವಿದ್ಯುತ್ ಕಂಬ ಮುರಿದಿರುವುದಲ್ಲದೆ ಎರಡು ಕಾರುಗಳೂ ಜಖಂಗೊಂಡಿವೆ.