ಧಾರಾಕಾರ ಮಳೆ

ಒಂದು ದಿನದ ಬಿಡುವಿನ ಬಳಿಕ ವರುಣ ನಗರದಲ್ಲಿ ಬುಧವಾರ ರಾತ್ರಿ ಅಬ್ಬರಿಸಿದ್ದಾನೆ. ಬುಧವಾರ ರಾತ್ರಿ..
ಧಾರಾಕಾರ ಮಳೆ
Updated on: 

ಬೆಂಗಳೂರು: ಒಂದು ದಿನದ ಬಿಡುವಿನ ಬಳಿಕ ವರುಣ ನಗರದಲ್ಲಿ ಬುಧವಾರ ರಾತ್ರಿ ಅಬ್ಬರಿಸಿದ್ದಾನೆ. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ವರುಣನ ಮರು ಆಗಮನವಾಯಿತು. ಇದರಿಂದ ನಗರದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಆಯಿತು.
ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಧಾರಾಕಾರ ಸುರಿದ ಪರಿಣಾಮ ನಗರದ ಜನತೆ ಪರದಾಡುವಂತಾಯಿತು. ಇಡೀ ದಿನ ಬಿಸಿಲಿನ ಬೇಗೆ ಸಹಿಸಲು ಅಸಾಧ್ಯವಾಗಿತ್ತು. ಇದರಿಂದ ಜನ ಮಳೆಗಾಗಿ ಎದುರು ನೋಡುವಂತಾಗಿತ್ತು. ಆದರೆ ವರುಣ ಜನರ ನಿರೀಕ್ಷೆ ಹುಸಿ ಮಾಡಲಿಲ್ಲ. ಮೊದಲು ಗಾಳಿ ಬಲವಾಗಿ ಬೀಸತೊಡಗಿತು. ಅದರ ಬೆನ್ನಲ್ಲೇ ಮಳೆ ಶುರುವಾಯಿತು. ಇದರಿಂದ ಬಸವೇಶ್ವರ ನಗರ, ಶಿವಾಜಿ ನಗರ ಮತ್ತು ವಿಮಾನ ನಿಲ್ದಾಣ ರಸ್ತೆಯಲ್ಲಿ ಮರಗಳು ಧರೆಗುರುಳಿದವು. ಜೊತೆಗೆ ರಸ್ತೆಗಳು ಜಲಾವೃತವಾಗಿದ್ದರಿಂದ ವಾಹನ ಸಂಚಾರದಲ್ಲೂ ಏರುಪೇರಾಯಿತು.
ಸುರಿಯುವ ಮಳೆಯಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡ ವಾಹನ ಸವಾರರು ಮನೆ ಸೇರಲು ಪರದಾಡಿದರು. ಅದರಲ್ಲಿಯೂ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ದಿಕ್ಕು ತೋಚದಂತಾದರು. ಧರೆಗುರುಳಿದ್ದ ಮರಗಳನ್ನ ತೆರವುಗೊಳಿಸಿ ರಸ್ತೆಗಳನ್ನು ವಾಹನ ಸಂಚಾರಕ್ಕೆ ಮುಕ್ತವಾಗಿಸುವಷ್ಟರಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸಂಚಾರ ಪೊಲೀಸರು ಹೈರಾಣಾಗಿದ್ದರು.
ದಾಸರಹಳ್ಳಿಯಲ್ಲಿ ಗಂಗಮ್ಮ ತಿಮ್ಮಯ್ಯ ಕಲ್ಯಾಣ ಮಂಟಪಕ್ಕೆ ಮಳೆಯಿಂದ ನೀರು ನುಗ್ಗಿತ್ತು. ಬಸವೇಶ್ವರ ನಗರದಲ್ಲಿ ಮರ ಉರುಳಿದ ಪರಿಣಾಮ ಎರಡು ಆಟೋ ಜಖಂಗೊಂಡಿವೆ. ಶಿವಾಜಿ ನಗರ, ರಾಜಾಜಿನಗರ, ಶೇಷಾದ್ರಿಪುರ, ಗಾಯತ್ರಿನಗರ, ಶ್ರೀರಾಮಪುರ, ವಿಜಯನಗರ ಮತ್ತು ಹೆಬ್ಬಾಳ, ಜೆ.ಪಿ ನಗರದಲ್ಲಿ ವರುಣನ ಅರ್ಭಟ ತೀವ್ರವಾಗಿತ್ತು.
ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದರು.  ಇನ್ನು ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿದ ಪರಿಣಾಮ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಯವಾಗಿತ್ತು. ಕೆಲವೆಡೆ ಸ್ಥಿರ ದೂರವಾಣಿ ಸಂಪರ್ಕ ಕಡಿತಗೊಂಡಿತ್ತು.
ಹಲವು ಮನೆಗಳಿಗೆ ನೀರು ನುಗ್ಗಿದ್ದಲ್ಲದೆ ನಗರದ ಹಲವೆಡೆ ಮರಗಳು ಉರುಳಿದ ಪರಿಣಾಮ ಸಹಾಯಕ್ಕಾಗಿ ನಾಗರೀಕರು ಬಿಬಿಎಂಪಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದ ಕಾರಣ ಲೈನ್ ಜಾಮ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com