ನವದೆಹಲಿ: ಸಿಬಿಐಗೆ ಸ್ವಾಯತ್ತೆ ನೀಡುವ ವಿಚಾರ ಕುರಿತು ನಿರ್ಧಾರ ತೆಗೆದುಕೊಳ್ಳಲು ವಿತ್ತ ಸಚಿವ ಪಿ. ಚಿದಂಬರಂ ನೇತೃತ್ವದಲ್ಲಿ ರಚಿಸಲಾಗಿದ್ದ ಸಚಿವರ ಸಮಿತಿಯ ಮೊದಲ ಸಭೆ ಗುರುವಾರ ನಡೆಯಿತು. ಸುಪ್ರೀಂಕೋರ್ಟ್ ಆದೇಶ, ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬಿಲಿಷ್ಮೆಂಟ್ ಕಾಯ್ದೆ ಮತ್ತು ಸಿವಿಸಿ ಕಾಯ್ದೆ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಮಿತಿಗೆ ಮಾಹಿತಿ ನೀಡಿತು. ಈ ವೇಳೆ ಜಂಟಿ ಕಾರ್ಯದರ್ಶಿ ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಯ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಲು ಸಿಬಿಐ ಸರ್ಕಾರದ ಅನುಮತಿ ಪಡೆಯಬೇಕೆಂಬ ನಿಯಮವನ್ನು ರದ್ದುಗೊಳಿಸುವ ಪ್ರಸ್ತಾಪಕ್ಕೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತೀವ್ರ ವಿರೋಧ ವ್ಯಕ್ತಪಡಿಸಿತು.