

-ರೇಣುಕಾಪ್ರಸಾದ್ ಹಾಡ್ಯ
ನವದೆಹಲಿ: ಕಾವೇರಿ ನ್ಯಾಯಾಧಿಕರಣ ಅಂತಿಮ ಐತೀರ್ಪಿನ ಅಧಿಸೂಚನೆ ಪ್ರಕಟಿಸಿದ ನಂತರ ಮೊದಲ ಜಲವರ್ಷದಲ್ಲೇ ಕರ್ನಾಟಕ ಶತಮಾನದ ಅತಿಕೆಟ್ಟ ಜಲಕ್ಷಾಮ ಎದುರಿಸಲಿದೆ!
ರಾಷ್ಟ್ರದ ಪ್ರಮುಖ 85 ಜಲಾಶಯಗಳ ಪೈಕಿ ಕಾವೇರಿ ಕಣಿವೆಯ ಕೃಷ್ಣರಾಜ ಸಾಗರ, ಹೇಮಾವತಿ ಹಾಗೂ ಕಬಿನಿ ಜಲಾಶಯಗಳು ಅಕ್ಷರಶಃ ಒಣಗಿಹೋಗಿರುವುದನ್ನು ಕೇಂದ್ರ ಜಲ ಆಯೋಗ ತನ್ನ ವರದಿಯಲ್ಲಿ ಪ್ರಕಟಿಸಿದೆ. ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆಯುವ ಮುನ್ನ ಕರ್ನಾಟಕ ಸರ್ಕಾರ ಕಾವೇರಿ ಕಣಿವೆಯ ಜಲಕ್ಷಾಮವನ್ನು ಸುಪ್ರೀಂ ಕೋರ್ಟ್ ಹಾಗೂ ಅದರ ಆದೇಶದಂತೆ ರಚಿತವಾಗಿರುವ ಕಾವೇರಿ ಮೇಲುಸ್ತುವಾರಿ ಸಮಿತಿಗೆ ತಿಳಿಸಬೇಕಿದೆ.
ತಮಿಳುನಾಡು ಮುಂಚಿತವಾಗಿ ತಕರಾರು ತೆಗೆದು ಸದಾ ತನ್ನ ಪಾಲು ದಕ್ಕಿಸಿಕೊಳ್ಳುತ್ತಿದೆ. ಕರ್ನಾಟಕ ತಮಿಳುನಾಡು ತಕರಾರು ಎತ್ತುವವರೆಗೂ ಮೌನವಾಗಿದ್ದು, ಇದ್ದ ನೀರನ್ನೆಲ್ಲ ಹರಿಸುತ್ತಿದೆ. ತೀವ್ರ ಸಂಕಷ್ಟದಲ್ಲಿರುವ ಕರ್ನಾಟಕ ಮುಂಚಿತವಾಗಿಯೇ ತನ್ನ ದುಃಸ್ಥಿತಿಯನ್ನು ಸುಪ್ರೀಂ ಕೋರ್ಟ್ ಮುಂದೆ ನಿವೇದಿಸಿಕೊಳ್ಳುವುದು ಈ ಹಂತದಲ್ಲಿ ಅನಿವಾರ್ಯ.
ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುವ ಉತ್ಸಾಹ ತೋರಿದ ಸರ್ಕಾರ ಮುಂದಾಗಬಹುದಾದ ಜಲಕ್ಷಾಮದ ತೀವ್ರ ಪರಿಣಾಮಗಳನ್ನು ಗಮನಿಸುವಲ್ಲಿ ಉತ್ಸಾಹ ತೋರಿಸಲಿಲ್ಲ. ಅದರ ಪ್ರತಿಫಲ ಈಗ ಕಾವೇರಿ ಕಣಿವೆಯ ಜಲಾಶಯಗಳು ಬತ್ತಿವೆ.
ಬತ್ತಿದ ಮೂರೂ ಅಣೆಕಟ್ಟೆಗಳು: ಕಾವೇರಿ ಕಣಿವೆಯಲ್ಲಿರುವ ಕರ್ನಾಟಕದ ಮೂರು ಜಲಾಶಯಗಳು ಈಗಾಗಲೇ ಬತ್ತಿ ಹೋಗಿದ್ದರೆ, ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಇನ್ನೂ 0.118 ಬಿಸಿಎಂ (ಬಿಲಿಯನ್ ಕ್ಯೂಬಿಕ್ ಮೀಟರ್) ನೀರು ಸಂಗ್ರಹವಿದೆ. ಇದು ಬಳಕೆಗೆ ಇರುವ ನೀರಿನ ಪ್ರಮಾಣದ ಶೇ.4ರಷ್ಟು. ಕಳೆದ ವರ್ಷ ತಮಿಳುನಾಡಿನಲ್ಲಿ ಶೇ.44ರಷ್ಟು ಸಂಗ್ರಹವಿತ್ತು. ಕಳೆದ ವರ್ಷ ಇದೇ ವೇಳೆ ಕೃಷ್ಣರಾಜಸಾಗರದಲ್ಲಿ ಒಟ್ಟು ಬಳಕೆ ಪ್ರಮಾಣದ ಶೇ.7ರಷ್ಟು ಇದ್ದರೆ, ಕಳೆದ ಹತ್ತು ವರ್ಷಗಳ ಸರಾಸರಿ ಶೇ.10ರಷ್ಟು ಸಂಗ್ರಹ ಇತ್ತು. ಹೇಮೆಯಲ್ಲಿ ಕಳೆದ ಸಾಲಿನಲ್ಲಿ ಒಟ್ಟು ಸಂಗ್ರಹದ ಶೇ.6ರಷ್ಟು ಇದ್ದರೆ, 10 ವರ್ಷಗಳ ಸರಾಸರಿ ಸಂಗ್ರಹವೂ ಶೇ.6ರಷ್ಟು.
ದಕ್ಷಿಣದಲ್ಲಿ ಕ್ಷಾಮ ಉಳಿದೆಡೆ ಸಮೃದ್ಧಿ!
ಕೇಂದ್ರ ಜಲ ಆಯೋಗ ಬಿಡುಗಡೆ ಮಾಡಿರುವ ವರದಿ ಪ್ರಕಾರ, ದಕ್ಷಿಣ ಭಾರತದಲ್ಲಿರುವ ಜಲಾಶಯಗಳಲ್ಲಿ ನೀರಿನ ಕೊರತೆ ತೀವ್ರವಾಗಿದೆ. ಇಡೀ ದೇಶದಲ್ಲಿರುವ ಪ್ರಮುಖ 84 ಜಲಾಶಯಗಳಲ್ಲಿ ಒಟ್ಟು ನೀರಿನ ಸಂಗ್ರಹ ಶೇ.22ರಷ್ಟು.
ಉತ್ತರ ಭಾರತದಲ್ಲಿರುವ ಜಲಾಶಯಗಳಲ್ಲಿನ ಸಂಗ್ರಹ ಶೇ.28ರಷ್ಟಿದ್ದರೆ, ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿರುವ ಜಲಾಶಯಗಳಲ್ಲಿನ ಸಂಗ್ರಹ ಶೇ.26ರಷ್ಟಿದೆ. ಆದರೆ, ದಕ್ಷಿಣ ಭಾರತದಲ್ಲಿರುವ ಜಲಾಶಯಗಳಲ್ಲಿನ ಸಂಗ್ರಹ ಶೇ.10ರಷ್ಟಿದೆ. ಕಳೆದ ಸಾಲಿನಲ್ಲಿ ದಕ್ಷಿಣ ಭಾರತದ ಜಲಾಶಯಗಳಲ್ಲಿನ ಸಂಗ್ರಹ ಶೇ.18ರಷ್ಟಿತ್ತು.
45 ಸಾವಿರ ಕೋಟಿ ವೆಚ್ಚದಲ್ಲಿ 9 ಲಕ್ಷ ಹೆಕ್ಚೇರ್ಗೆ ನೀರಾವರಿ
ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 25
ಮುಂದಿನ ಐದು ವರ್ಷಗಳ ಅವಧಿಯಲ್ಲಿ ರು. 45,574.105 ಕೋಟಿ ವೆಚ್ಚದಲ್ಲಿ 9,25,805 ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಕ್ರಿಯಾ ಯೋಜನೆ ತಯಾರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಜತೆ ಚರ್ಚೆ ನಡೆಸಿ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಶನಿವಾರ ತಿಳಿಸಿದರು. ಚಾಲ್ತಿಯಲ್ಲಿರುವ ಯೋಜನೆಗಳ ಪೈಕಿ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ಪರಮಶಿವಯ್ಯ ವರದಿ ಆಧಾರಿತ ಯೋಜನೆಗಳು, ಕೃಷ್ಣಾ ಮೇಲ್ದಂಡೆ ಮೂರನೇ ಹಂತ, ಕೃಷ್ಣಾ ಮೇಲ್ದಂಡೆ ಪುನರ್ವಸತಿ - ಪುನರ್ ನಿರ್ಮಾಣ ವಿಚಾರ ಸೇರಿದಂತೆ ಹಾಲಿ ಇರುವ ಯೋಜನೆಗಳ ಸಮಸ್ಯೆ ನಿವಾರಣೆಯೂ ಈ ವ್ಯಾಪ್ತಿಯಲ್ಲಿ ಸೇರುತ್ತವೆ.
ಜತೆಗೆ ರಾಜ್ಯದ ಜಲಸಂಪನ್ಮೂಲ ಯೋಜನೆಗಳಿಗೆ ಕೇಂದ್ರ ಅನುದಾನ ಪಡೆಯುವುದಕ್ಕೆ ಹಾಗೂ ಕೇಂದ್ರ ಜಲಮಂಡಳಿ ಮುಂದೆ ರಾಜ್ಯದ ವಾದವನ್ನು ಸಮರ್ಥವಾಗಿ ಮಂಡಿಸಲು ವಿಶೇಷ ಪ್ರತಿನಿಧಿಯನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.
ಕಾನೂನು ತಿದ್ದುಪಡಿ : ಅಲಮಟ್ಟಿ ಆಣೆಕಟ್ಟಿನ ಎತ್ತರ ಹೆಚ್ಚಿಸುವುದು, ಮುಳುಗಡೆಯಾಗಿರುವ ಪ್ರದೇಶದ ಭೂಸ್ವಾಧೀನ ಹಾಗೂ ಪುನರ್ ನಿರ್ಮಾಣ ಕಾಮಗಾರಿಗೆ ವಿಶೇಷ ಆದ್ಯತೆ ನೀಡಲಾಗುವುದು. ಇದರ ಜತೆಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಇಲಾಖೆ ಮಾದರಿಯಲ್ಲಿ ನೀರಾವರಿ ಯೋಜನೆಗೆ ಅಗತ್ಯವಾದ ಭೂಸ್ವಾಧೀನವನ್ನು ಜಲಸಂಪನ್ಮೂಲ ಇಲಾಖೆ ಮೂಲಕವೇ ನಡೆಸುವುದಕ್ಕೆ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ವಿವರಿಸಿದರು.
ಜಲಸಂಪನ್ಮೂಲ ಇಲಾಖೆಯಲ್ಲಿ 383 ಕಿರಿಯ ಎಂಜಿನಿಯರ್ಗಳು, 992 ಸಹಾಯಕ ಎಂಜಿನಿಯರ್ಗಳು, 40 ಹೆಚ್ಚುವರಿ ಕಾರ್ಯ ನಿರ್ವಾಹಕ ಎಂಜಿನಿಯರ್ಗಳು ಹಾಗೂ 11 ಕಾರ್ಯ ನಿರ್ವಾಹಕ ಎಂಜಿನಿಯರ್ಗಳ ಕೊರತೆ ಇದೆ. ಇವುಗಳನ್ನು ಭರ್ತಿ ಮಾಡುವುದಕ್ಕೆ ಹಾಲಿ ಇರುವ ನಿಯಮ ಪಾಲನೆಯಿಂದ ಕನಿಷ್ಠ 2 ವರ್ಷ ಬೇಕಾಗುತ್ತದೆ. ಹೀಗಾಗಿ ಕೃಷ್ಣ ಭಾಗ್ಯ ಜಲ ನಿಗಮ ಸೇರಿದಂತೆ ಸ್ವಾಯತ್ತ ಮಂಡಳಿಗಳ ಮೂಲಕ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಿಕೊಂಡು ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.
ಶೇ.100 ಸಬ್ಸಿಡಿ : ಕಾವೇರಿ ಜಲಾನಯನ ಪ್ರದೇಶದಲ್ಲಿ 28 ಸಾವಿರ ಎಕರೆ ಪ್ರದೇಶಕ್ಕೆ ಮಾತ್ರ ನೀರಾವರಿ ಸೌಲಭ್ಯ ಕಲ್ಪಿಸುವುದು ಬಾಕಿ ಇದ್ದು, ಈ ವರ್ಷ ಪೂರ್ಣಗೊಳಿಸಲಾಗುವುದು. ನೀರಿನ ಮಿತವ್ಯಯ ಸಾಧಿಸಲು ಕಾವೇರಿಕೊಳ್ಳದ ರೈತರಿಗೆ ಸೂಕ್ಷ್ಮ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಸೌಲಭ್ಯ ಸಲಕರಣೆಗೆ ಶೇ.100ರಷ್ಟು ಸಬ್ಸಿಡಿ ನೀಡಲಾಗುವುದು. ಇದರಿಂದ ಕಾವೇರಿ ಜಲಾನಯನ ಪ್ರದೇಶದ ಸವಳು-ಜವಳು ಸಮಸ್ಯೆಯೂ ಹತೋಟಿಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು. ಭದ್ರಾ ಮೇಲ್ದಂಡೆ, ಕೊಪ್ಪಳ ಮತ್ತು ಬಬಲೇಶ್ವರ ಏತ ನೀರಾವರಿ ಯೋಜನೆಗಳ ಅನುಷ್ಠಾನದ ಜತೆಗೆ ಡೋಣಿ ನದಿ ಮುಖಜ ಪ್ರದೇಶದ 28 ಸಾವಿರ ಎಕರೆ ಪ್ರದೇಶವನ್ನು ಕೃಷಿಯೋಗ್ಯ ಭೂಮಿಯಾಗಿ ಪರಿವರ್ತಿಸಲಾಗುವುದು. ಇದರಿಂದ ವಾರ್ಷಿಕ 50 ಕೋಟಿ ಕೃಷಿ ಉತ್ಪನ್ನ ಸಾಧ್ಯ ಎಂದು ಹೇಳಿದರು.
ಅಣೆಕಟ್ಟುಗಳ ಭದ್ರತೆ ಸರ್ಕಾರದ ಮುಂದೆ ಇರುವ ಸವಾಲುಗಳ ಪೈಕಿ ಒಂದು. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಹಾಗೂ ಹೋಮ್ಗಾರ್ಡ್ಸ್ನ ಎರಡು ಬೆಟಾಲಿಯನ್ಗೆ ಈ ಸಂಬಂಧ ವಿಶೇಷ ತರಬೇತಿ ನೀಡುತ್ತೇವೆ ಎಂದರು.
ಕೇಂದ್ರ ಜಲ ಆಯೋಗದಿಂದ ವರದಿ ಬಿಡುಗಡೆ
ಕೆಆರ್ಎಸ್ ಕಬಿನಿ ಹೇಮಾವತಿ ಮೆಟ್ಟೂರು
ಒಟ್ಟು ಸಂಗ್ರಹ ಸಾಮರ್ಥ್ಯ (ಬಿಸಿಎಂ) 1.163 0.275 0.927 2.647
ಈಗಿನ ಸಂಗ್ರಹ 0.000 0.000 0.000 0.118
ಕಳೆದ ವರ್ಷ ಈ ವೇಳೆ ಶೇ.7 -- ಶೇ.6 ಶೇ.4
ಕಳೆದ 10 ವರ್ಷದ ಸರಾಸರಿ ಶೇ.10 -- ಶೇ.6 ಶೇ.44
2 ಟಿಎಂಸಿ ನೀರು ಬಿಡಲು ಮಹಾ ಭರವಸೆ
ಉತ್ತರ ಕರ್ನಾಟಕದ ಬಿಜಾಪುರ, ಬೆಳಗಾವಿ ಭಾಗದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಮಹಾರಾಷ್ಟ್ರ ಸರ್ಕಾರ 2 ಟಿಎಂಸಿ ನೀರು ಬಿಡಲು ಭರವಸೆ ನೀಡಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ನಾನೇ ಖುದ್ದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಕೋಯ್ನಾ ಅಥವಾ ವಾರ್ನಾ ಅಣೆಕಟ್ಟೆಯಿಂದ 2 ಟಿಎಂಸಿ ನೀರು ಬಿಡುವ ಭರವಸೆಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ ಎಂದು ಹೇಳಿದರು.