ರಾಜ್ಯಕ್ಕೆ ಹರಿದ ಕೃಷ್ಣೆ ನೀರು

ಬೆಳಗಾವಿ ಮತ್ತು ಬಿಜಾಪುರ ಪ್ರದೇಶಗಳ ಜನರಿಗೆ ಇದು ಸಿಹಿ ಸುದ್ದಿ. ರಾಜ್ಯದ ಬೇಡಿಕೆಯಂತೆ ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿಗೆ ನೀರನ್ನು ಬಿಟ್ಟಿದೆ.
Updated on: 

ಕನ್ನಡಪ್ರಭ ವಾರ್ತೆ ಬೆಳಗಾವಿ ಮೇ 26
ಬೆಳಗಾವಿ ಮತ್ತು ಬಿಜಾಪುರ ಪ್ರದೇಶಗಳ ಜನರಿಗೆ ಇದು ಸಿಹಿ ಸುದ್ದಿ.
ರಾಜ್ಯದ ಬೇಡಿಕೆಯಂತೆ ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿಗೆ ಕಾಳಮ್ಮವಾಡಿ ಜಲಾಶಯದಿಂದ 1 ಟಿಎಂಸಿ ಹಾಗೂ ರಾಜಾಪುರ ಬ್ಯಾರೇಜ್ನಿಂದ 0.50 ಟಿಎಂಸಿ ನೀರನ್ನು ಭಾನುವಾರ ಮಧ್ಯಾಹ್ನ ಬಿಟ್ಟಿದೆ. ಒಟ್ಟು 1.50 ಟಿಎಂಸಿ ನೀರು ಕೃಷ್ಣೆಯನ್ನು ಸೇರಲಿದೆ.
ಸತತವಾಗಿ 3 ವರ್ಷಗಳ ಭೀಕರ ಬರಗಾಲ ಪರಿಸ್ಥಿತಿಯಿಂದ ನಲುಗಿ ಹೋಗಿರುವ ಉತ್ತರ ಕರ್ನಾಟಕ ಜನತೆಗೆ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಉತ್ತರ ಕರ್ನಾಟಕದ ಜೀವನದಿ ಕೃಷ್ಣಾ ನದಿ ನೀರು ಬತ್ತಿ ಬರಿದಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹಾಗೂ ಸಚಿವ ಪ್ರಕಾಶ್ ಹುಕ್ಕೇರಿ ನೇತೃತ್ವದ ನಿಯೋಗ ಇತ್ತೀಚೆಗೆ ಮುಂಬೈಗೆ ತೆರಳಿ, ಕೃಷ್ಣಾ ನದಿಗೆ 2 ಟಿಎಂಸಿ ನೀರು ಹರಿಸುವಂತೆ ಮನವಿ ಮಾಡಿತ್ತು. ಇಷ್ಟೆ ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್ ಅವರಿಗೆ ಕರೆ ಮಾಡಿ, ನೀರು ಬಿಡುವಂತೆ ವಿನಂತಿಸಿಕೊಂಡಿದ್ದರು.
ರಾಜ್ಯ ಸರ್ಕಾರದ ಈ ಮನವಿಗೆ ಸಮ್ಮತಿ ನೀಡಿದ್ದ ಮಹಾರಾಷ್ಟ್ರದ ಸರ್ಕಾರ ಭಾನುವಾರ ತನ್ನ ಜಲಾಶಯಗಳಿಂದ ನೀರನ್ನು ಬಿಟ್ಟಿದೆ.
ಸಚಿವ ಹುಕ್ಕೇರಿ ಅಭಿನಂದನೆ: ನೀರು ಬಿಟ್ಟ ಮಹಾರಾಷ್ಟ್ರದ ಸಿಎಂ ಪೃಥ್ವಿರಾಜ್ ಚೌಹಾಣ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಪ್ರಕಾಶ್ ಹುಕ್ಕೇರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com