ಮಡಿಕೇರಿ/ಸಿದ್ದಾಪುರ: ದೇಗುಲ ಮತ್ತು ಮಠಗಳ ಸರ್ಕಾರಿಕರಣಗೊಳಿಸುವ ವಿವಾದ ದಿನದಿಂದ ದಿನಕ್ಕೆ ಬಿಸಿಯಾಗುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಂತಿದೆ.
ಮಡಿಕೇರಿಯಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ, 'ಉಡುಪಿ, ಗೋಕರ್ಣ ಸೇರಿದಂತೆ ಯಾವುದೇ ಮಠ, ದೇಗುಲಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವ ಚಿಂತನೆ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ವ್ಯರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ' ಎಂದು ತಿಳಿಸಿದ್ದಾರೆ. ಸರ್ಕಾರದ ಮುಂದೆ ಸದ್ಯಕ್ಕೆ ಅಂಥ ಯಾವುದೇ ಚಿಂತನೆಯೇ ಇಲ್ಲ. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದೂ ಅವರು ಆರೋಪಿಸಿದರು.
ಸರ್ಕಾರಿಂದ ಗೊಂದಲ-ಎಚ್ಡಿಕೆ: ಮತ್ತೊಂದೆಡೆ, ದೇಗುಲಗಳ ಸರ್ಕಾರಿಕರಣ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, 'ಮಠಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನರಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಇಂಥ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಜನರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸುವುದು ಸೂಕ್ತ' ಎಂದಿದ್ದಾರೆ. ಕೊಡಗು ಜಿಲ್ಲೆಯ ಸಿದ್ದಾಪುರಕ್ಕೆ ಖಾಸಗಿ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.