ಸುಗ್ರೀವಾಜ್ಞೆಗೆ ಕೊಳ್ಳಿ

ಅಂತೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒತ್ತಡಕ್ಕೆ ಕೇಂದ್ರ ಸಂಪುಟ ಮಣಿದಿದೆ. ದೋಷಿ ಸಂಸದರನ್ನು ರಕ್ಷಿಸುವ ಸುಗ್ರೀವಾಜ್ಞೆ ಮತ್ತು ಅದಕ್ಕೆ ಸಂಬಂಧಿಸಿದ ಮಸೂದೆಯನ್ನು...
ಸುಗ್ರೀವಾಜ್ಞೆಗೆ ಕೊಳ್ಳಿ

ಪಿಟಿಐ ನವದೆಹಲಿ ಅ.2
ಅಂತೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒತ್ತಡಕ್ಕೆ ಕೇಂದ್ರ ಸಂಪುಟ ಮಣಿದಿದೆ. ದೋಷಿ ಸಂಸದರನ್ನು ರಕ್ಷಿಸುವ ಸುಗ್ರೀವಾಜ್ಞೆ ಮತ್ತು ಅದಕ್ಕೆ ಸಂಬಂಧಿಸಿದ ಮಸೂದೆಯನ್ನು ಹಿಂಪಡೆಯುವ ಬಗ್ಗೆ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ 20 ನಿಮಿಷಗಳ ಕೇಂದ್ರ ಸಂಪುಟ ಸಭೆಯಲ್ಲಿ ದೋಷಿ ಸಂಸದರಿಗೆ ರಕ್ಷಣೆ ನೀಡುವಂಥ ಸುಗ್ರೀವಾಜ್ಞೆ ಹಾಗೂ ಸಂಸತ್‌ನಲ್ಲಿ ಅಂಗೀಕಾರಕ್ಕೆ ಬಾಕಿ ಇರುವ ಮಸೂದೆಯನ್ನು ಹಿಂಪಡೆಯುವ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿತು.
ಸಭೆಯ ಬಳಿಕ ಪ್ರಧಾನಿ ನಿವಾಸದ ಬಳಿ ಸುತ್ತುವರಿದಿದ್ದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಮನೀಶ್ ತಿವಾರಿ ಸಂಪುಟದ ನಿರ್ಣಯವನ್ನು ಪ್ರಕಟಿಸಿದರು. ಶಾಸಕರು ಅಥವಾ ಸಂಸದರು ದೋಷಿ ಎಂದು ಸಾಬೀತಾದ ತಕ್ಷಣ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಜು.10ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಸೆ.24ರಂದು ಸುಪ್ರೀಂಕೋರ್ಟ್‌ಗೆ ಸೆಡ್ಡು ಹೊಡೆಯುವಂತೆ ಸಂಸದರ ರಕ್ಷಣೆಗಾಗಿ ಸುಗ್ರೀವಾಜ್ಞೆ ಜಾರಿಗೊಳಿಸುವ ನಿರ್ಧಾರವನ್ನು ಕೇಂದ್ರ ಸಂಪುಟ ಕೈಗೊಂಡಿತ್ತು. 'ಸಾಕಷ್ಟು ಸಮಾಲೋಚನೆ ನಡೆಸಿದ ಬಳಿಕ ಸುಗ್ರೀವಾಜ್ಞೆ ಮತ್ತು ಮಸೂದೆಯನ್ನು ಹಿಂಪಡೆವ ನಿರ್ಧಾರಕ್ಕೆ ಬರಲಾಗಿದೆ. ದೇಶದ ಜನರೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಂಪುಟ ಈ ನಿರ್ಧಾರಕ್ಕೆ ಬಂದಿದೆ' ಎಂದರು ಮನೀಷ್ ತಿವಾರಿ.      

ರಾಹುಲ್-ಪ್ರಧಾನಿ ಭೇಟಿ: ಮಹಾತ್ಮಾ ಗಾಂಧಿಯವರಿಗೆ ನಮನ ಸಲ್ಲಿಸಿದ ಕಾರ್ಯಕ್ರಮ ಬಳಿಕ ಕಾಂಗ್ರೆಸ್ ಉಪಾಧ್ಯಕ್ಷ  ರಾಹುಲ್ ಗಾಂಧಿ ಪ್ರಧಾನಿ ಮನಮೋಹನ್ ಸಿಂಗ್ ಜತೆ ಮಾತುಕತೆ ನಡೆಸಿದರು. ಸೆ.27ರಂದು ನವದೆಹಲಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ 'ನಾನ್‌ಸೆನ್ಸ್‌' ಎಂದು ಹೇಳಿದ್ದ ಬಗ್ಗೆ ವಿವರಣೆ ನೀಡಿದರು. ಆದರೆ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಲಿಲ್ಲ. ಸುಮಾರು 30 ನಿಮಿಷಗಳ ಕಾಲ ಈ ಸಭೆ ನಡೆಯಿತು. 'ಸೆ.27ರಂದು ನೀಡಿದ್ದ ಹೇಳಿಕೆ ನಿಮಗೆ ಮುಜುಗರ ಉಂಟುಮಾಡಲು ಅಲ್ಲ' ಎಂದು ರಾಹುಲ್ ಪ್ರಧಾನಿಗೆ ವಿವರಿಸಿದರು ಎಂದು ಹೇಳಲಾಗಿದೆ.
ರಾಷ್ಟ್ರಪತಿ-ಮನಮೋಹನ್ ಸಿಂಗ್ ಚರ್ಚೆ: ಅಮೆರಿಕ ಪ್ರವಾಸದಿಂದ ಹಿಂದಿರುಗಿದ ಪ್ರಧಾನಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜತೆ ಮಾತುಕತೆ ನಡೆಸಿದರು. ಸುಮಾರು ಒಂದು ಗಂಟೆ ಕಾಲ ನಡೆದ ಮಾತುಕತೆಯಲ್ಲಿ ಮುಜುಗರ ತಂದ ಸುಗ್ರೀವಾಜ್ಞೆಯನ್ನು ಹಿಂಪಡೆಯುವ ನಿರ್ಧಾರವನ್ನು ಮುಖರ್ಜಿ ಅವರಿಗೆ ಪ್ರಧಾನಿ ತಿಳಿಸಿದರು. ವಿವಾದಿತ ನಿರ್ಧಾರದ ಬಗ್ಗೆ ಪ್ರಣಬ್ ಕೇಂದ್ರ ಸರ್ಕಾರದಿಂದ ಕೆಲ ಸ್ಪಷ್ಟನೆ ಕೇಳಿದ್ದರು.
ಪ್ರಧಾನಿ ಚರ್ಚೆ: ಸಂಜೆ ಪ್ರಧಾನಿ ಮನಮೋಹನ್ ಸಿಂಗ್ ಮಿತ್ರಪಕ್ಷಗಳನ್ನು ಭೇಟಿಯಾಗಿ ಸುಗ್ರೀವಾಜ್ಞೆ ಹಿಂಪಡೆಯುವ ಸರ್ಕಾರದ ನಿರ್ಧಾರ ಪ್ರಕಟಿಸಿದರು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಅಜಿತ್ ಸಿಂಗ್ ಜತೆ ಚರ್ಚೆ ನಡೆಸಿದ್ದರು.
ಪವಾರ್ ಅಸಮಾಧಾನ: ಸುಗ್ರೀವಾಜ್ಞೆ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ನಡೆದುಕೊಂಡ ಕ್ರಮದ ಬಗ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಪಕ್ಷದ ವಕ್ತಾರ ಡಿ.ಪಿ.ತ್ರಿಪಾಠಿ ಮಾತನಾಡಿ 'ರಾಹುಲ್ ಗಾಂಧಿಯವರಿಗೆ ತಮ್ಮ ಹಿಂಬಾಲಕರು ಯಾರು ಮತ್ತು ಮಿತ್ರಪಕ್ಷಗಳು ಯಾರು ಎಂದು' ತಿಳಿಯುತ್ತದೆ ಎಂದು ಕಟಕಿಯಾಡಿದ್ದರು. ಪವಾರ್ ಜತೆಗೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಡಾ.ಫಾರೂಕ್ ಅಬ್ದುಲ್ಲಾ ಕೂಡ ರಾಹುಲ್ ಟೀಕೆಗೆ ಅತೃಪ್ತಿ ವ್ಯಕ್ತಪಡಿಸಿದ್ದರು.


ಸಮಾಜವಾದಿ ಪಕ್ಷ ಆಕ್ಷೇಪ
ಕೇಂದ್ರ ಸಂಪುಟ ಸುಗ್ರೀವಾಜ್ಞೆಯನ್ನು ಹಿಂಪಡೆಯುವ ನಿರ್ಧಾರವನ್ನು ಸಮಾಜವಾದಿ ಪಕ್ಷ ಆಕ್ಷೇಪಿಸಿದೆ. ವ್ಯಕ್ತಿಯೊಬ್ಬರ (ರಾಹುಲ್ ಗಾಂಧಿ) ಅಭಿಪ್ರಾಯವನ್ನು ಆಧರಿಸಿ ಪ್ರಧಾನಿ ಅಂತಿಮ ನಿರ್ಧಾರ ಕೈಗೊಳ್ಳಲೇಬಾರದು. ಮನಮೋಹನ್ ಸಿಂಗ್ ಸುಗ್ರೀವಾಜ್ಞೆ ಜಾರಿಗೊಳಿಸುವ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ಪಕ್ಷದ ನಾಯಕ ನರೇಶ್ ಅಗರ್ವಾಲ್ ಒತ್ತಾಯಿಸಿದ್ದರು. ಇಂಥ ಕ್ರಮ ಪ್ರಜಾಪ್ರಭುತ್ವದ ವಿರುದ್ಧದ ಸಂಚು ಎಂದು ಅವರು ಪ್ರತಿಪಾದಿಸಿದ್ದಾರೆ.

ದಿನದ ಬೆಳವಣಿಗೆ
- ಬೆಳಗ್ಗೆ 10.00 ಪ್ರಧಾನಿ ಭೇಟಿಯಾದ ರಾಹುಲ್ ಗಾಂಧಿ
- ಬೆಳಗ್ಗೆ 10.10 ಪ್ರಧಾನಿ ಜತೆ ರಾಹುಲ್ ಭೇಟಿ ಮುಕ್ತಾಯ
- ಬೆಳಗ್ಗೆ 10.55 ಕಾಂಗ್ರೆಸ್ ಕೋರ್ ಕಮಿಟಿ ಸಭೆ ಆರಂಭ
- ಬೆಳಗ್ಗೆ 11.40 ಕಾಂಗ್ರೆಸ್ ಕೋರ್ ಕಮಿಟಿ ಸಭೆ ಮುಕ್ತಾಯ
- ಮಧ್ಯಾಹ್ನ 1.00 ರಾಷ್ಟ್ರಪತಿ ಭೇಟಿಗೆ ತೆರಳಿದ ಪ್ರಧಾನಿ
- ಮಧ್ಯಾಹ್ನ 1.55 ರಾಷ್ಟ್ರಪತಿ- ಪ್ರಧಾನಿ ಭೇಟಿ ಅಂತ್ಯ
- ಸಂಜೆ 4.25 ಮಿತ್ರ ಪಕ್ಷಗಳ ಜತೆ ಪ್ರಧಾನಿ ಚರ್ಚೆ, ಸುಗ್ರೀವಾಜ್ಞೆ ಹಿಂಪಡೆಯುವ ನಿರ್ಧಾರ ತಿಳಿಸಿದ ಪ್ರಧಾನಿ
- ಸಂಜೆ 4.55 ಅಟಾರ್ನಿ ಜನರಲ್ ವಾಹನ್ವತಿ ಮತ್ತು ಪ್ರಧಾನಿ ಭೇಟಿ
- ಸಂಜೆ 6.25 ಕೇಂದ್ರ ಸಂಪುಟದಿಂದ ಸುಗ್ರೀವಾಜ್ಞೆ ಮತ್ತು ಮಸೂದೆ ಹಿಂಪಡೆಯಲು ನಿರ್ಧಾರ

ರಾಜ್‌ಘಾಟ್‌ನಲ್ಲಿ ಸೋನಿಯಾ- ಪಿಎಂ ಚರ್ಚೆ

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 144ನೇ ಜಯಂತ್ಯುತ್ಸವ ಕಾರ್ಯಕ್ರಮದ ಬಳಿಕ ರಾಜ್‌ಘಾಟ್‌ನಲ್ಲಿ ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿದ್ದರು. ಸುಗ್ರೀವಾಜ್ಞೆ ವಿವಾದದ ಬಗ್ಗೆ ಮಾತುಕತೆ ನಡೆಸಿದರು. ಇಬ್ಬರು ನಾಯಕರು ಪರಸ್ಪರ ಶುಭಾಶಯ ಕೋರಿದರು. ಗಮನಾರ್ಹ ವಿಚಾರವೆಂದರೆ ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಉಪಸ್ಥಿತರಿರಲಿಲ್ಲ.

ಮಸೂದ್ ಸದಸ್ಯತ್ವ ರದ್ದತಿಗೆ ಅಸ್ತು
ಸಂಪುಟ ಸಭೆಯಲ್ಲಿ 4 ವರ್ಷ ಜೈಲು ಶಿಕ್ಷೆಗೆ ಗುರಿಯಾದ ರಾಜ್ಯಸಭೆ ಸದಸ್ಯ ರಶೀದ್ ಮಸೂದ್ ಅವರ ಸದಸ್ಯತ್ವ ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯಸಭೆ ಸಭಾಪತಿಗೆ ಪತ್ರ ಬರೆದು ಅಧಿಕೃತವಾಗಿ ತಿಳಿಸುವ ಬಗ್ಗೆ ತೀರ್ಮಾನಿಸಲಾಗಿದೆ.

ಸಭೆಯಲ್ಲೂ ಒಪ್ಪಿಗೆ
ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ಸುಗ್ರೀವಾಜ್ಞೆ ಬಗ್ಗೆ ಚರ್ಚೆ ನಡೆಸಲಾಯಿತು. ರಾಹುಲ್ ಗಾಂಧಿ ಹೇಳಿಕೆ ಸೇರಿದಂತೆ ಸಮಗ್ರ ಬೆಳವಣಿಗೆ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಯಿತು. ಅಂತಿಮವಾಗಿ ಸುಗ್ರೀವಾಜ್ಞೆ ವಾಪಸ್‌ಗೆ ನಿರ್ಧಾರ ಕೈಗೊಳ್ಳಲಾಯಿತು.

ಸುಗ್ರೀವಾಜ್ಞೆ ಹಿಂಪಡೆದದ್ದಕ್ಕೆ ಸಂತೋಷವಿದೆ. ರಾಹುಲ್ ಗಾಂಧಿಯರ ಹೇಳಿಕೆ ಅವರ ಪಕ್ಷಕ್ಕೆ ಲಾಭ ತರಬಹುದೋ ಇಲ್ಲವೋ, ಅದರ ಬಗ್ಗೆ ನಾನೇನೂ ಹೇಳಲಾರೆ. ಆದರೆ ಸಾರ್ವಜನಿಕರ ಅಭಿಪ್ರಾಯ ಗೆದ್ದಂತಾಗಿದೆ.
- ನ್ಯಾ.ಸಂತೋಷ್ ಹೆಗ್ಡೆ ನಿವೃತ್ತ ಲೋಕಾಯುಕ್ತ

ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸಂಪುಟ, ಗಾಂಧಿ ವಂಶದ ನಿರ್ಧಾರಗಳನ್ನು ಪಾಲಿಸುತ್ತದೆ ಎಂಬ ನಮ್ಮ ಆರೋಪ ಮತ್ತೊಮ್ಮೆ ಸಾಬೀತಾಗಿದೆ. ಅದಕ್ಕೆ ಕಾನೂನು, ನೈತಿಕತೆ, ಸಂವಿಧಾನಬದ್ಧತೆ ಏನೇನೂ ಇಲ್ಲ. ಇದಕ್ಕಿಂತ ಶೋಚನೀಯ ವಿಚಾರ ಮತ್ತೊಂದಿಲ್ಲ.
- ರವಿಶಂಕರ ಪ್ರಸಾದ್, ಬಿಜೆಪಿ ವಕ್ತಾರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com