ಮತಾಂತರಕ್ಕೊಳಗಾದವರು ಹಿಂದೂಗಳೂ ಅಲ್ಲ, ಮುಸ್ಲಿಮರೂ ಅಲ್ಲ!

ಆಗ್ರಾದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ 57 ಮುಸ್ಲಿಂ ಕುಟುಂಬಗಳ ಪರಿಸ್ಥಿತಿ 'ಅತ್ತ ದರಿ ಇತ್ತ ಪುಲಿ' ಎಂಬಂತಾಗಿದೆ...
ಸಾಮೂಹಿಕ ಮತಾಂತರ
ಸಾಮೂಹಿಕ ಮತಾಂತರ

ಆಗ್ರಾ: ಆಗ್ರಾದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ 57 ಮುಸ್ಲಿಂ ಕುಟುಂಬಗಳ ಪರಿಸ್ಥಿತಿ 'ಅತ್ತ ದರಿ ಇತ್ತ ಪುಲಿ' ಎಂಬಂತಾಗಿದೆ. ಸೋಮವಾರ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಇಲ್ಲಿನ ಸ್ಲಂಗಳಲ್ಲಿ ವಾಸಿಸುವ ಕುಟುಂಬದವರನ್ನು ಬುಧವಾರ ಮೌಲ್ವಿಗಳು ಭೇಟಿಯಾಗಿದ್ದಾರೆ. ಈ ವೇಳೆ ಮೌಲ್ವಿಗಳು ನೀವು ಈಗ ಹಿಂದೂಗಳೂ ಅಲ್ಲ, ಮುಸ್ಲಿಂ ಸಮುದಾಯಕ್ಕೂ ಸೇರಿಲ್ಲ . ನಿಮ್ಮನ್ನು ಕ್ಷಮಿಸಲು ಇಲ್ಲಿ ಭಗವಂತನೂ ಇಲ್ಲ, ಅಲ್ಲಾಹು ಕೂಡಾ ಇಲ್ಲ ಎಂದಿದ್ದಾರೆ.

ಇದನ್ನು ಕೇಳಿದ ಈ ಬಡಕುಟುಂಬಗಳಿಗೆ ನಡುಕಉಂಟಾಗಿದೆ. ಮತಾಂತರಗೊಂಡ ನಮ್ಮ ರಕ್ಷಣೆಗೆ ಯಾರೂ ಇಲ್ಲವಲ್ಲ ಎಂಬ ದಿಗಲು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಕೆಲವರು ಆಕಾಶದತ್ತ ಕೈ ಎತ್ತಿ ನಮ್ಮನ್ನು ಕ್ಷಮಿಸು ಪ್ರಭುವೇ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದರು.

ನೀವು ತಪ್ಪು ಮಾಡಿದ್ದೀರಿ:

ಇಲ್ಲಿನ ಮಧೂ ನಗರ್ ಸ್ಲಂಗೆ ಭೇಟಿ ನೀಡಿದ ಮುದಾಸ್ಸಿರ್ ಖಾನ್, ಮತಾಂತರಗೊಂಡ ಕುಟುಂಬಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ನೀವು ಮತ್ತೊಮ್ಮೆ ಮದುವೆಯಾಗಬೇಕು. ಮತ್ತೊಮ್ಮೆ ಖುರಾನ್ ಪಠಿಸಿ ಇಸ್ಲಾಂ ಧರ್ಮ ಸ್ವೀಕರಿಸಿದರೆ ಮಾತ್ರ ನೀವು ಮುಸ್ಲಿಂ ಆಗುತ್ತೀರಿ.
ಇನ್ನೊಮ್ಮೆ ನಿಖಾ ಮಾಡಿ, ನಿಮ್ಮ ಮಕ್ಕಳಿಗೆ ಖುರಾನ್ ಪಠಿಸಿ , ನಿಮ್ಮ ಹೆಂಗಸರಿಗೆ  ಪರ್ದಾ ಧರಿಸುವಂತೆ ಹೇಳಿದೆ. ಹೀಗೆ ಮಾಡಿದರೆ ಮಾತ್ರ ನಿಮಗೆ ಕ್ಷಮೆ ಸಿಗುತ್ತದೆ. ನೀವು ತಪ್ಪು ಮಾಡಿದ್ದೀರಿ ಎಂದು ಎಂದು ಖಾನ್ ಹೇಳಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಹಿಂದೂ ಸಂಘಟನೆಯೊಂದು ಸ್ಲಂನಲ್ಲಿ ವಾಸಿಸುವ ಚಿಂದಿ ಆಯುವ ಬಡ ಮುಸ್ಲಿಂ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ಸಾಮೂಹಿಕ ಮತಾಂತರ ಮಾಡಿತ್ತು.

ನಮ್ಮನ್ನು ಕ್ಷಮಿಸು ಎಂದು ಕಣ್ಣೀರಿಟ್ಟರು

ಮತಾಂತರಗೊಂಡ ನಂತರ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರುವ ಸೂಫಿಯಾ ಬೇಗಂ ಎಂಬಾಕೆ ಈಶ್ವರ ಮತ್ತು ಅಲ್ಲಾಹು ಇಬ್ಬರೂ ಒಂದೇ ಎಂದು ಕಣ್ಣೀರಿಟ್ಟರು. ಆಮೇಲೆ ನಾವಿನ್ನು ಇಂಥಾ ತಪ್ಪನ್ನು ಮಾಡಲ್ಲ, ನಮ್ಮನ್ನು ಕ್ಷಮಿಸಿ ಬಿಡು ಬೇಡಿಕೊಂಡರು.

ಅದೇ ವೇಳೆ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಇಸ್ಮಾಯಿಲ್ ಎಂಬಾತ, ನಮಗೆ ರೇಷನ್ ಕಾರ್ಡ್, ಬಿಪಿಎಲ್ ಕಾರ್ಡ್ ನೀಡುತ್ತೇನೆ ಎಂದು ಹೇಳಿ ನಮಗೆ ಮೋಸ ಮಾಡಿದರು. ನಾವು ವಾಸಿಸುತ್ತಿರುವ ಭೂಮಿ ಹಿಂದೂಗಳಿಗೆ ಸೇರಿರುವುದರಿಂದ ಅಲ್ಲಿ ಪೂಜೆ ಮಾಡಬೇಕೆಂದು ಅವರು ಹೇಳಿದ್ದರು. ಆದ್ದರಿಂದಲೇ ನಾವು ಆ ಪೂಜೆಯಲ್ಲಿ ಭಾಗವಹಿಸಿದೆವು. ನಮ್ಮನ್ನು ಮತಾಂತರಗೊಳಿಸಲಾಗುತ್ತಿದೆ ಎಂದು ಗೊತ್ತಾಗಿದ್ದು ಆಗಲೇ. ಅಷ್ಟೊತ್ತಿಗೆ ಮಾಧ್ಯಮದವರು ಅಲ್ಲಿಗೆ ಬಂದಿದ್ದರು.

ಇಷ್ಟು ಹೇಳಿ ಆತ ಮೌಲಾನಾ ಮಸ್ಸೂರ್ ರಾಜಾ ಖ್ವಾದ್ರಿ ಕಾಲಿಗೆ ಅಡ್ಡ ಬಿದ್ದು ಬಿಟ್ಟ. ಗಂಭೀರವದನನಾಗಿ ನಿಂತಿದ್ದ ಖ್ವಾದ್ರಿ, ನೀವು ನಮ್ಮ ಧರ್ಮವನ್ನು ಪರಿಹಾಸ್ಯ ಮಾಡಿದ್ದೀರಿ. ನಿಮ್ಮನ್ನು ಅಲ್ಲಾಹು ಕ್ಷಮಿಸುವುದಿಲ್ಲ ಎಂದು ಹೇಳಿದಾಗ, ಆ ಬಡಕುಟುಂಬಗಳು ತಪ್ಪಿತಸ್ಥರಂತೆ ತಲೆ ತಗ್ಗಿಸಿ ನಿಂತಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com