
ನವದೆಹಲಿ: ಸಿಡ್ನಿ ಒತ್ತೆಯಾಳು ಪ್ರಕರಣ ಮತ್ತು ಪೇಶಾವರ ಶಾಲೆಯಲ್ಲಿ ಉಗ್ರರು ನಡೆಸಿದ ಮಾರಣಹೋಮವನ್ನು ಖಂಡಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಯೋತ್ಪಾದನೆಯ ವಿರುದ್ದ ಜಗತ್ತಿನ ಎಲ್ಲ ರಾಷ್ಟ್ರಗಳು ಒಂದಾಗಬೇಕೆಂದು ಹೇಳಿದ್ದಾರೆ.
ಬುಧವಾರ ಸಂಸತ್‌ನ್ನುದ್ದೇಶಿಸಿದ ಮಾತನಾಡಿದ ಸುಷ್ಮಾ, ಈ ಎರಡೂ ಘಟನೆಗಳು ಹೋಲಿಕೆಗೆ ನಿಲುಕದ್ದು. ಇಂಥಾ ಘೋರ ಕೃತ್ಯಗಳನ್ನು ನಿಯಂತ್ರಿಸಲು ಎಲ್ಲರೂ ಒಗ್ಗಟ್ಟಾಗಬೇಕು.
ಮಂಗಳವಾರ ಪೇಶಾವರದ ಸೇನಾ ಶಾಲೆಯಲ್ಲಿ ಪಾಕಿಸ್ತಾನದ ತಾಲೀಬಾನ್ ಸಂಘಟನೆಗಳು 141 ಜನರ ಮಾರಣಹೋಮ ಮಾಡಿದವು ಅದರಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮಕ್ಕಳ ಸಂಖ್ಯೆ 132. ಅದೇ ವೇಳೆ ಆಸ್ಟ್ರೇಲಿಯಾದ ಸಿಡ್ನಿಯ ಕೆಫೆಯೊಂದರಲ್ಲಿ ಉಗ್ರರು 17 ಮಂದಿಯನ್ನು 16 ಗಂಟೆಗಳ ಕಾಲ ಒತ್ತೆಯಾಳುಗಳನ್ನಾಗಿರಿಸಿದ್ದರು.
ಈ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಸಚಿವೆ, ಕಳೆದ ದಿನ ನಡೆದ ಈ ಎರಡೂ ಘಟನೆಗಳು ಬೇರೆ ಬೇರೆ. ಆದರೆ ಇಲ್ಲಿ ಅಟ್ಟಹಾಸ ಮೆರೆದದ್ದು ಭಯೋತ್ಪಾದನೆ. ಇವುಗಳನ್ನೆಲ್ಲ ನೋಡಿದಾಗ, ಭಯೋತ್ಪಾದನೆಯ ವಿರುದ್ಧ ಜಗತ್ತಿನ ರಾಷ್ಟ್ರಗಳೆಲ್ಲ ಒಗ್ಗೂಡಿ ನಿಲ್ಲಬೇಕಾದ ಸಮಯ ಬಂದಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
Advertisement