
ಹೈದರಾಬಾದ್: ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಪ್ರತಿಮೆಗಳನ್ನು ನಿರ್ಮಿಸಿವುದು, ಕಟ್ ಔಟ್ ಗಳನ್ನು ಹಾಕುವುದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಹೈದರಾಬಾದ್ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠ, ಇವುಗಳನ್ನು ಕೂಡಲೆ ತೆರವುಗೊಳಿಸಲು ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರಗಳಿಗೆ ಶುಕ್ರವಾರ ಸೂಚನೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೫ ರಲ್ಲಿ, ಮುಕ್ತಿನುತಲ್ಪಾಡು ಮತ್ತು ಗುಂಡಿಮಿಲ್ಲಪಾಡು ಹಳ್ಳಿಗಳ ಬಳಿ ಪ್ರತಿಮೆಗಳನ್ನು ನಿರ್ಮಿಸಲು ೧೫ ಅಡಿ ರಸ್ತೆಯನ್ನು ಅತಿಕ್ರಮಿಸಿ, ಗುಂಡಿಗಳನ್ನು ತೋಡುತ್ತಿದ್ದ ಕ್ರಮವನ್ನು ಪ್ರಶ್ನಿಸಿ ಪ್ರಕಾಶಂ ಜಿಲ್ಲೆಯ ಎಸ್ ಮುರಳಿಕೃಷ್ಣ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ಮಾಡಿದ ಮುಖ್ಯ ನ್ಯಾಯಾಧೀಶ ಕಲ್ಯಾಣ ಜ್ಯೋತಿ ಸೇನ್ ಗುಪ್ತ ಹಾಗು ನ್ಯಾಯಾಧೀಶ ಪಿ ವಿ ಸಂಜಯ್ ಕುಮಾರ್ ಅವರನ್ನು ಒಳಗೊಂಡ ಪೀಠ ಈ ಮಧ್ಯಂತರ ತೀರ್ಪು ನೀಡಿದೆ.
ಇದಕ್ಕೆ ಸಂಬಂಧಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡಲೆ ಇದನ್ನು ಅನುಷ್ಟಾನಗೊಳಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಸಾರ್ವಜನಿಕ ರಸ್ತೆ, ಕಾಲುದಾರಿ ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಮೆಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರಗಳು ಅನುಮತಿ ನೀಡಬಾರದೆಂದು ಈ ಹಿಂದೆ ಸುಪ್ರೀಮ್ ಕೋರ್ಟ್ ನೀಡಿದ್ದ ತೀರ್ಪನ್ನು ಉದಾಹರಿಸಿರುವ ನ್ಯಾಯಾಲಯ, ವಿಐಪಿಗಳ ಹುಟ್ಟು ಹಬ್ಬಕ್ಕೆ ಶುಭ ಕೋರುವ ಕಟ್ ಔಟ್ ಗಳು, ಫ್ಲೆಕ್ಷ್ ಗಳು, ಪ್ರತಿಮೆಗಳು ಜನರಿಗೆ ಮುಜುಗರ ಉಂಟು ಮಾಡುತ್ತದೆ, ಅಲ್ಲದೆ ಆ ವಿಐಪಿಗಳಿಗೂ ಇದು ತೊಂದರೆ ಉಂಟು ಮಾಡುತ್ತದೆ ಎಂದಿದೆ ನ್ಯಾಯಾಲಯ.
Advertisement