
ಜಕಾರ್ತಾ: 162 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಏಷ್ಯಾ ವಿಮಾನ ಕಣ್ಮರೆಯಾದಾಗಿನಿಂದ ನಿರಂತರ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಇದೀಗ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಸುಮಾತ್ರಾ ಮತ್ತು ಬರ್ನಿಯೋ ದ್ವೀಪಗಳ ನಡುವಿನ ಜಾವಾ ಸಮುದ್ರದಲ್ಲಿ ಅವಶೇಷವೊಂದು ಪತ್ತೆಯಾಗಿದೆ ಎಂದು ಇಂಡೋನೇಷ್ಯಾದ ಶೋಧ ಕಾರ್ಯಾಚರಣೆ ತಂಡದ ಮುಖ್ಯಸ್ಥ ಸೋಯಿಲಿಸ್ಟಿಯೋ ಹೇಳಿದ್ದಾರೆ. ಆದರೆ ಪತ್ತೆಯಾಗಿರುವ ಅವಶೇಷಗಳು ಏರ್ ಏಷ್ಯಾ ವಿಮಾನದ್ದೇ ಎಂದು ಶಂಕಿಸಲಾಗುತ್ತಿದ್ದು, ಇಲ್ಲಿಯವರೆಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ.
ಹುಡುಕಾಟ ನಡೆಸಲಾಗುತ್ತಿರುವ ಪ್ರದೇಶದಲ್ಲಿ ಎರಡು ಕಡೆ ತೈಲ ತೇಲುತ್ತಿರುವುದು ಕಂಡು ಬಂದಿದೆ ಎಂದು ಸೋಮವಾರ ಮಧ್ಯಾಹ್ನ ಇಂಡೋನೇಷ್ಯಾದ ಅಧಿಕಾರಿಗಳು ತಿಳಿಸಿದ್ದರು. ಇದೀಗ ಇಂಡೋನೇಷ್ಯಾದ ಬರ್ನಿಯೋದ ಕರಾವಳಿ ಮತ್ತು ಇನ್ನಿತರ ಪುಟ್ಟ ದ್ವೀಪಗಳಲ್ಲಿಯೂ ಶೋಧ ಕಾರ್ಯಗಳನ್ನು ಆರಂಭಿಸಲಾಗಿದೆ. ಶೋಧ ಕಾರ್ಯಕ್ಕೆ ಸಹಕರಿಸಲು ಸಂಯುಕ್ತ ರಾಷ್ಟ್ರಗಳು ಯುದ್ಧನೌಕೆಯನ್ನು ಕಳುಹಿಸಿಕೊಡುವುದಾಗಿ ಹೇಳಿವೆ.
ಭಾನುವಾರ ಸಿಂಗಾಪೂರ್‌ನ ಸುರಬಯಾದಿಂದ ಹೊರಟ ಇಂಡೋನೇಷ್ಯಾ ಏರ್ ಏಷ್ಯಾದ QZ 8501 ಜೆಟ್ ವಿಮಾನ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿತ್ತು. ಏತನ್ಮಧ್ಯೆ, ಈಗ ಪತ್ತೆಯಾಗಿರುವ ಅವಶೇಷಗಳು ಅದೇ ವಿಮಾನದ್ದು ಎಂದು ಎಂದು ಇಲ್ಲಿಯವರೆಗೆ ದೃಢೀಕರಿಸಲ್ಪಟ್ಟಿಲ್ಲ.
ಇಂಡೋನೇಷ್ಯಾದ ಕೋಂಪಾಸ್ ಟಿವಿ ಸಮುದ್ರದಲ್ಲಿ ತೇಲುತ್ತಿರುವ ಬೃಹತ್ ಗಾತ್ರದ ವಸ್ತುವೊಂದರ ದೃಶ್ಯವನ್ನು ಪ್ರಸಾರ ಮಾಡಿದೆ. ಬೃಹತ್ ಗಾತ್ರದ ವಸ್ತುವೊಂದರ ಬಣ್ಣ ಆರೆಂಜ್ ಆಗಿ ಕಾಣಿಸಿದ್ದು, ಇನ್ನೊಂದು ಬೂದು ಅಥವಾ ಕಂದುಬಣ್ಣದ್ದು ಎಂದು ಟೀವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ.
ಇಷ್ಟೆಲ್ಲಾ ಶೋಧ ಕಾರ್ಯಗಳ ನಂತರ ನಾವು ಖಂಡಿತ ಏನಾದರೊಂದು ಸುಳಿವನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದ ವಿಮಾನಯಾನ ಅಧಿಕಾರಿಯೊಬ್ಬರು ಸದ್ಯಕ್ಕೆ ನಮಗೇನೂ ಸುಳಿವು ಸಿಕ್ಕಿಲ್ಲ ಎಂದಿದ್ದಾರೆ.
Advertisement