
ಪಣಜಿ: ಸದರಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕೇಂದ್ರ ರಕ್ಷಣಾ ಸಚಿವರಾಗಿ ಬಡ್ತಿ ಪಡೆಯಲಿದ್ದಾರೆ ಎಂಬ ಸುದ್ದಿ ಹರಡಿರುವ ಹಿನ್ನಲೆಯಲ್ಲಿ ಬಿಜೆಪಿ ಪ್ರಾದೇಶಿಕ ಘಟಕ ಇಂದು ಸಭೆ ಸೇರಿ ರಾಜ್ಯದ ಅತ್ಯುನ್ನತ ಹುದ್ದೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಸದ್ಯಕ್ಕೆ ದೆಹಲಿಯಲ್ಲಿರುವ ಪರಿಕ್ಕರ್ ಅವರು ಪಕ್ಷದ ಗೋವಾ ಅಧ್ಯಕ್ಷ ವಿನಯ್ ತೆಂಡುಲ್ಕರ್ ಮತ್ತು ಸಾಮಾನ್ಯ ಕಾರ್ಯದರ್ಶಿ ಸತೀಶ್ ದೊಂಡ್ ಅವರೊಂದಿಗೆ ಇಂದು ಮಧ್ಯಾಹ್ನ ಸಭೆಗೆ ಬರಲಿದ್ದಾರೆ ಎಂದು ತಿಳಿಯಲಾಗಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರೊಂದಿಗೆ ಗೋವಾ ಮುಖ್ಯಮಂತ್ರಿ ನೆನ್ನೆ ಸಭೆ ನಡೆಸಿದ್ದು, ಮುಂದಿನ ಸಂಪುಟ ವಿಸ್ತರಣೆಯಲ್ಲಿ ಪರಿಕ್ಕರ್ ಅವರಿಗೆ ರಕ್ಷಣಾ ಖಾತೆ ಸಿಗಲಿದೆ ಎನ್ನಲಾಗಿದೆ. ನಂತರ ರಾತ್ರಿ ಪ್ರಧಾನಿ ಮೋದಿಯವರೊಂದಿಗೆ ಭೇಟಿ ನಡೆಸಿದ ಮನೋಹರ್, ಗೋವಾದ ವಿಷಯಗಳ ಬಗ್ಗೆಯಷ್ಟೇ ಚರ್ಚೆ ಮಾಡಲಾಯಿತು ಎಂದು ವರದಿಗಾರರಿಗೆ ತಿಳಿಸಿದ್ದಾರೆ.
ಮುಂದಿನ ಗೋವಾ ಮುಖ್ಯಮಂತ್ರಿಯ ಆಯ್ಕೆಯ ಬಗ್ಗೆ ಹಾಗೂ ಪರಿಕ್ಕರ್ ರಾಜೀನಾಮೆಯ ನಂತರ ತೆರವಾಗಲಿರುವ ಪಣಜಿ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕು ಎಂಬ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು" ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಕಾರ್ಯಕರ್ತರ ಮತ್ತು ವರದಿಗಾರರ ಗಮನಕ್ಕೆ ಬಾರದಿರಲು ಸಭೆ ನಡೆಯುವ ಸ್ಥಳವನ್ನು ಪಕ್ಷ ಗೋಪ್ಯವಾಗಿಟ್ಟಿದೆ.
ಇಬ್ಬರು ಪ್ರಮುಖ ಬಿಜೆಪಿ ನಾಯಕರಾದ ಆರೋಗ್ಯ ಸಚಿವ ಲಕ್ಷ್ಮಿಕಾಂತ್ ಪರ್ಸೇಕರ್ ಮತ್ತು ವಿದಾನಸಭೆಯ ಸ್ಪೀಕರ್ ರಾಜೇಂದ್ರ ಆರ್ಲೇಕರ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.
ಇಬ್ಬರೂ ಆರ್ ಎಸ್ ಎಸ್ ಮೂಲದವರಾಗಿದ್ದು, ಈ ಹಿಂದೆ ಗೋವಾದಲ್ಲಿ ಪಕ್ಷವನ್ನು ಮುನ್ನಡೆಸಿದ್ದಾರೆ.
"ನಾನು ಸ್ಪರ್ಧೆಯಲ್ಲಿಲ್ಲ. ಪಕ್ಷದ ನಿರ್ಣಯವನ್ನು ಗೌರವಿಸುತ್ತೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ರೇಸ್ ಇರುವುದಿಲ್ಲ. ಪಕ್ಷವೇ ನಿರ್ಣಯ ಮಾಡುತ್ತದೆ" ಎಂದು ಪರ್ಸೇಕರ್ ತಿಳಿಸಿದ್ದಾರೆ.
ಇನ್ನೊಂದೆಡೆ ಆರ್ಲೇಕರ್ ಅವರು ಸಿ ಎಂ ಸ್ಥಾನದ ಬಗ್ಗೆ ನನಗೆ ಯಾವುದೇ ರೀತಿಯ ಸಂದೇಶ ಪಕ್ಷದಿಂದ ಬಂದಿಲ್ಲ ಎಂದಿದ್ದಾರೆ.
Advertisement