ರನ್‌ವೇಯಲ್ಲಿ ಎಮ್ಮೆ; ಇದೇನಾ ಅಭಿವೃದ್ಧಿ? : ಮೋದಿಗೆ ನಿತೀಶ್ ಸವಾಲು

ಸೂರತ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಸ್ಪೈಸ್ ಜೆಟ್ ಟೇಕಾಫ್ ಆಗುವ ವೇಳೆ ಎಮ್ಮೆಯೊಂದಕ್ಕೆ ಡಿಕ್ಕಿ...
ನಿತೀಶ್ ಕುಮಾರ್ ಅವರ   ಫೇಸ್‌ಬುಕ್ ಪೇಜ್‌
ನಿತೀಶ್ ಕುಮಾರ್ ಅವರ ಫೇಸ್‌ಬುಕ್ ಪೇಜ್‌

ಪಾಟ್ನಾ: ಸೂರತ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಸ್ಪೈಸ್ ಜೆಟ್ ಟೇಕಾಫ್ ಆಗುವ ವೇಳೆ ಎಮ್ಮೆಯೊಂದಕ್ಕೆ ಡಿಕ್ಕಿ ಹೊಡೆದ ಘಟನೆಯ ಬಗ್ಗೆ ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಲೇವಡಿ ಮಾಡಿದ್ದಾರೆ.

ಪ್ರಸ್ತುತ ಘಟನೆಯ ಬಗ್ಗೆ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿರುವ ಅವರು ಪ್ರಧಾನಿ ನರೇಂದ್ರ ಮೋದಿಯರಲ್ಲಿ, ಇದೇನಾ ನಿಮ್ಮ ಗುಜರಾತ್ ಮಾದರಿಯ ಅಭಿವೃದ್ಧಿ ?ಎಂದು ಪ್ರಶ್ನಿಸಿದ್ದಾರೆ.

ಮೋದಿಯವರು ಲೋಕಸಭಾ ಚುನಾವಣೆ ವೇಳೆ ಗುಜರಾತ್ ಮಾದರಿಯ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿ ಗುಜರಾತ್‌ನ ನಗರಗಳನ್ನು ಜಪಾನ್‌ಗೆ ಹೋಲಿಸಿ ಯುವಜನಾಂಗವನ್ನು ಮೆಚ್ಚಿಸಿದ್ದರು.

ಆದರೆ ಗುರುವಾರ ಸೂರತ್‌ನಲ್ಲಿ 146 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನಕ್ಕೆ ಎಮ್ಮೆ ಡಿಕ್ಕಿ ಹೊಡೆದಿದೆ. ದೇವರ ದಯೆಯಿಂದ ದೊಡ್ಡದೊಂದು ಅಪಘಾತದಿಂದ ಎಲ್ಲರೂ ಪಾರಾಗಿದ್ದಾರೆ ಎಂದು ನಿತೀಶ್ ಹೇಳಿದ್ದಾರೆ.

ಅದೇ ವೇಳೆ ಗುಜರಾತ್ ಪ್ರವಾಸೋದ್ಯಮದ ರಾಯಭಾರಿಯಾಗಿರುವ ಅಮಿತಾಬ್ ಬಚ್ಚನ್‌ರನ್ನು ಕೂಡಾ ತಮ್ಮ ಫೇಸ್‌ಬುಕ್ ಸ್ಟೇಟಸ್‌ನಲ್ಲಿ ನಿತೀಶ್ ಉಲ್ಲೇಖಿಸಿದ್ದಾರೆ.

ಸಾರ್ವತ್ರಿಕ ಚುನಾವಣೆಯ ವೇಳೆ ಗುಜರಾತ್ ಅಭಿವೃದ್ಧಿಯಾಗಿದೆ ಎಂದು ನಗರದ ಚಿತ್ರವನ್ನು ಫೋಟೋಶಾಪ್ ಮಾಡಿ ಜನರನ್ನು ಪೆದ್ದು ಮಾಡಲಾಗಿದೆ.

ಅಭಿವೃದ್ಧಿ ಹೊಂದಿರುವ ರಾಜ್ಯದ ವಿಮಾನ ನಿಲ್ದಾಣದಲ್ಲಿ ಎಮ್ಮೆ ಏನು ಮಾಡುತ್ತಿತ್ತು? ಚುನಾವಣೆಯ ಸಮಯದಲ್ಲಿ ಗುಜರಾತ್‌ನಲ್ಲಿ ಅತ್ಯಾಧುನಿಕ ಸಜ್ಜೀಕರಣವಿರುವ ವಿಮಾನ ನಿಲ್ದಾಣವಿದೆ ಎಂದು ಫೇಸ್ ಬುಕ್ ಮತ್ತು ಟ್ವಿಟರ್‌ನಲ್ಲಿ ಬಿಂಬಿಸಿದ್ದು ಇದೇನಾ? ಅಂದರೆ  ಇಲ್ಲಿ ಎಮ್ಮೆ ಕೂಡಾ ವಿಮಾನ ಹಾರಾಟ ಮಾಡಬಲ್ಲದು ಎಂದು ಹೇಳುತ್ತಿದ್ದಾರಾ? ಅಥವಾ ಹಾರುತ್ತಿರುವ ವಿಮಾನವನ್ನು ನಿಲ್ಲಿಸಲು ಜೆನೆಟಿಕ್ ಇಂಜಿನಿಯರಿಂಗ್ ನಿಂದ ಮೋದಿಯವರೇ ಎಮ್ಮೆಯೊಂದನ್ನು ಸೃಷ್ಟಿ ಮಾಡಿದರೆ?

ಗುಜರಾತ್ ಪ್ರವಾಸೋದ್ಯಮದ ಬಗ್ಗೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್‌ರ ಜಾಹೀರಾತು ಸಾಮಾಜಿಕ ತಾಣದಲ್ಲಿ ಇನ್ಮುಂದೆ ಹೇಗಿರುತ್ತೆ ಅಂದೆರ ಬಚ್ಚನ್ ಸೂರತ್‌ನಿಂದ ಎಮ್ಮೆ ಮೇಲೆ ಕುಳಿತುಕೊಂಡು ಬರುತ್ತಾರೆ. ಬಂದು ಹೇಳ್ತಾರೆ " ಉಡ್ ಕೇ ದೇಖೋ ಬೈಸ್ ಕೇ ಸಾಥ್, ಕುಚ್ ದಿನ್ ಗುಜಾರೋ ಗುಜರಾತ್ ಮೇ  (ಎಮ್ಮೆ ಮೇಲೇರಿ ಹಾರಾಟ ಮಾಡಿ, ಸ್ವಲ್ಪ ದಿನ ಕಳೆಯಿರಿ ಗುಜರಾತ್‌ನಲ್ಲಿ ) ಎಂದು ನಿತೀಶ್ ವ್ಯಂಗ್ಯವಾಡಿದ್ದಾರೆ.

ಇನ್ನು ಮುಂದೆ ಮೋದಿ ವಿಮಾನ ಇಳಿದಾಕ್ಷಣ ತಾಜಾ ಹಾಲು ಸಿಗುವಂತೆ, ಅದರಿಂದ ಮಾಡಿದ ಟೀ ಸಿಗುವಂತೆ ಯೋಜನೆಯನ್ನು ಹಮ್ಮಿಕೊಂಡಿದ್ದೇನೆ ಎಂದು ಹೇಳಬಹುದು ಎಂದು ಹೇಳಿದ ನಿತೀಶ್ ಎಮ್ಮೆಯೊಂದರ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com