ಜೈಲಿನಲ್ಲಿ 'ಬಾಡಿಗೆ' ಕೊಟ್ರೆ ಐಷಾರಾಮಿ ಸೆಲ್!

ಜೈಲುವಾಸ ಅಂದರೆ ಜೈಲಿನ ಪುಟ್ಟ ಕೋಣೆಯೊಳಗೆ ಕಷ್ಟ ಪಡುತ್ತಾ ಕಾಲ ಕಳೆಯಬೇಕು ಎಂದು ನಾವಂದುಕೊಂಡಿದ್ದೀವಿ. ಆದರೆ...
ಪರಪ್ಪನ ಅಗ್ರಹಾರ
ಪರಪ್ಪನ ಅಗ್ರಹಾರ

ಬೆಂಗಳೂರು: ಜೈಲುವಾಸ ಅಂದರೆ ಜೈಲಿನ ಪುಟ್ಟ ಕೋಣೆಯೊಳಗೆ ಕಷ್ಟ ಪಡುತ್ತಾ ಕಾಲ ಕಳೆಯಬೇಕು ಎಂದು ನಾವಂದುಕೊಂಡಿದ್ದೀವಿ. ಆದರೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನೀವು ಜೈಲಿನಲ್ಲಿ ಬಾಡಿಗೆ ಕೊಡುವುದಾದರೆ 'ಐಷಾರಾಮಿ' ಸೆಲ್ ನಿಮ್ಮದಾಗುತ್ತದೆ!

ಪರೋಲ್‌ನಲ್ಲಿ ಹೊರಗೆ ಬಂದಿರುವ ಕೈದಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಬಹಿರಂಗ ಪಡಿಸಿದ ವಿಷಯವಿದು.

ಜೈಲು ಅಧಿಕಾರಿಗಳಿಗೆ ರು. 20,000 ಮುಂಗಡ ಹಣ ನೀಡಿ ಮಾಸಿಕ ಬಾಡಿಗೆ ರು.10,000 ನೀಡಿದರೆ ಕೈದಿಗಳಿಗೆ ಪ್ರತ್ಯೇಕ ಕೊಠಡಿ ಸೌಲಭ್ಯ ಸಿಗುತ್ತದೆ. ಇಲ್ಲಿಗೆ ಬರುವ ದೊಡ್ಡ ದೊಡ್ಡ ಕುಳಗಳು, ಧಣಿಗಳು ತಾವೆಷ್ಟೇ ದೊಡ್ಡ ಅಪರಾಧ ಮಾಡಿದ್ದರೂ ಮುಂಗಡವಾಗಿ ಸೆಲ್ ಬುಕ್ ಮಾಡಿಸಿರುತ್ತಾರೆ. ಅವರಿರುವ ಸೆಲ್‌ಗಳಲ್ಲಿ ಪ್ರತ್ಯೇಕ ಸ್ನಾನದ ಕೋಣೆಯೂ ಇರುತ್ತದೆ.

100 ರು. ನೀಡಿದರೆ ಮಲಗುವ ಕೋಣೆ ಸಿಗುತ್ತದೆ. ಗುಂಪುಗಳಾಗಿ ಬರುವ ಅಪರಾಧಿಗಳು ಹಲವಾರು ಸೆಲ್‌ಗಳನ್ನು ಒಟ್ಟಿಗೆ ಪಡೆದು, ಒಟ್ಟೊಟ್ಟಿಗೆ ಇರುತ್ತಾರೆ. ಈ ಮೂಲಕ ಅವರು ಮೊಬೈಲ್ ಫೋನ್‌ಗಳನ್ನು ಬಳಸಿ ತಮ್ಮ ಕಾರ್ಯಗಳ ಸಂಚು ರೂಪಿಸುತ್ತಾರೆ ಎಂದು ಬಲ್ಲಮೂಲಗಳು ಹೇಳಿವೆ.

ಕೆಲವೊಬ್ಬ ಕೈದಿಗಳು ಜೈಲಧಿಕಾರಿಗಳೊಂದಿಗೆ ಹೆಚ್ಚಿನ ಆತ್ಮೀಯತೆ ಬೆಳೆಸಿಕೊಂಡಿರುತ್ತಾರೆ. ಈ ಬಗ್ಗೆ ವಿಚಾರಿಸಿದಾಗ ಜೈಲಧಿಕಾರಿಗಳು ನೀಡುವ ಸ್ಪಷ್ಟನೆ ಹೀಗಿದೆ " ನಾವು ಅವರನ್ನು ನಮ್ಮ  ಗೆಳೆಯರಂತೆ ಕಾಣುತ್ತೇವೆ. ಯಾಕೆಂದರೆ ಕೈದಿಗಳು ಒಂಟಿತನದಿಂದ ಆತ್ಮಹತ್ಯೆ ಮಾಡಿಕೊಳ್ಳಬಾರದು ಅಲ್ವಾ? ಎಂದು ಜೈಲಿನ ಅಡಿಷನಲ್ ಇನ್ಸ್‌ಪೆಕ್ಟರ್ ಜನರಲ್ ವಿ.ಎಸ್ ರಾಜಾ ಹೇಳಿದ್ದಾರೆ. ಕೆಲ ವ್ಯಕ್ತಿಗಳು ಜೈಲಿನ ಹೊರಗೆ ನಿಂತು ಅಪರಾಧಿಗಳ ಜತೆ ಮಾತನಾಡಿ, ಇಲ್ಲಿ ನಿಮಗೆ ಆಹಾರ, ನೀರು, ಸಿಗರೇಟ್ ಅಥವಾ ಗಾಂಜಾ ಕೂಡಾ ಸಿಗುತ್ತದೆ. ಅದಕ್ಕೆ ಇಂತಿಷ್ಟು ಹಣ ಕೊಡಬೇಕು ಎಂದು ವ್ಯವಹಾರ ಕುದುರಿಸುತ್ತಾರೆ.


ರೆಡ್ಡಿಗೂ ಇದೆ 'ಜಿಮ್‌'

ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಜನಾರ್ಧನ ರೆಡ್ಡಿ ಅವರಿಗೆ ಪರಪ್ಪನ ಅಗ್ರಹಾರದಲ್ಲಿ 'ಜಿಮ್‌' ಸೌಲಭ್ಯವಿದ್ದು, ಎಲ್ಲ ಉಪಕರಣಗಳು ಅಲ್ಲಿವೆ. ಮಾತ್ರವಲ್ಲದೆ ರೆಡ್ಡಿ ಅಲ್ಲಿ ಒಬ್ಬ ಸಹಾಯಕನನ್ನೂ ಇಟ್ಟುಕೊಂಡಿದ್ದಾರೆ.
ಅವರಿಗೆ ಪ್ರತ್ಯೇಕವಾಗಿ ಊಟ ತಯಾರಿಸಲಾಗುತ್ತದೆ. ಅವರ ಸಹಾಯಕ ಅವರಿಗೆ ಜ್ಯೂಸ್ ತಯಾರಿಸಿ, ಪ್ರೋಟೀನ್‌ಯುಕ್ತ ಆಹಾರಗಳನ್ನೇ ಕೊಡುತ್ತಾರೆ. ಅವರಿಗೆ ಅಡಿಗೆ ಮಾಡಲು ಗ್ಯಾಸ್ ಸಿಲಿಂಡರ್‌ನ್ನೂ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜಾ, ರೆಡ್ಡಿಯವರಿಗೆ ಇಬ್ಬರು ಸಹಾಯಕರಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಈ ಸೌಲಭ್ಯ ನೀಡಿರುವುದು ಕೋರ್ಟ್ ಆದೇಶದ ಮೇರೆಗೆ ಎಂದು ಹೇಳಿದ್ದಾರೆ.

ಜೈಲಿನ ನಿಯಮ ಪ್ರಕಾರ, 6 ವರ್ಷದಿಂದ ಕೆಳಗಿನ ಬಾಲ ಅಪರಾಧಿಗಳು ಮಾತ್ರ ಅವರ ಅಮ್ಮನೊಂದಿಗೆ ಜೈಲಿನಲ್ಲಿರಬಹುದು. ಯಾವುದೇ ಕಾರಣಕ್ಕೂ ಅಪರಾಧಿಗಳಲ್ಲದವರು ಜೈಲಿನೊಳಗೆ ಇರುವಂತಿಲ್ಲ.

ಗಾಂಜಾ ಯಥೇಚ್ಛ ಬಳಕೆ: ಕಳೆದ ಆಗಸ್ಟ್ ತಿಂಗಳಲ್ಲಿ ಪರಪ್ಪನ ಅಗ್ರಹಾರಕ್ಕೆ ಪೊಲೀಸ್ ದಾಳಿ ನಡೆಸಿ 10 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದರು. ಜೈಲಾಧಿಕಾರಿಗಳಿಗೆ ಓರ್ವ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಿದ್ದ, ಆತನಿಗೆ ಸರಿಯಾಗಿ ಹಣ ಕೊಡದೇ ಕಾರಣ ಆತ ಸಿಟ್ಟಿಗೆದ್ದಿದ್ದ ಎಂದು ಹೇಳಲಾಗುತ್ತಿದೆ.

ಆದರೆ ಈ ಬಗ್ಗೆ ಜೈಲು ಅಧಿಕಾರಿಗಳಲ್ಲಿ ವಿಚಾರಿಸಿದಾಗ, ಆಗಂತುಕರೊಬ್ಬರು ಗಾಂಜಾ ತುಂಬಿದ ಚೀಲವನ್ನು ಜೈಲಿನ ಗೇಟು ಬಳಿ ಬಿಸಾಡಿ ಹೋಗಿದ್ದರು ಎಂಬ ಉತ್ತರ ಸಿಕ್ಕಿದೆ. ಆದಾಗ್ಯೂ, ಈ ಬಗ್ಗೆ ಕೇಸು ಯಾಕೆ ದಾಖಲಿಸಿಲ್ಲ ಎಂದು ಕೇಳಿದಾಗ ಉತ್ತರಿಸಲು ಅವರು ತಯಾರಾಗಲಿಲ್ಲ.

ಇಲ್ಲಿ ಸಿಸಿಟಿವಿ ಅಳವಡಿಸಿದ್ದರೂ, ಗಾಂಜಾ ತಂದವರು ಯಾರು ಎಂಬುದರ ಬಗ್ಗೆ ಯಾವುದೇ ಸಾಕ್ಷ್ಯಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.

ಗಾಂಜಾ ಮಾತ್ರ ಅಲ್ಲ, ಕೆಲವು ತಿಂಗಳ ಹಿಂದೆ 200 ಸಿಮ್ ಕಾರ್ಡ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಇಲ್ಲಿ ಸಿಕ್ಕಿ ಬಿದ್ದಿದ್ದರು. ಆದರೆ ಜೈಲಾಧಿಕಾರಿಗಳು ಈ ಬಗ್ಗೆ ಪೊಲೀಸ್‌ಗೆ ದೂರು ನೀಡಲೇ ಇಲ್ಲ!

ಜೈಲಿನ ಒಳಗೆ ಹೋಗುವ ಪ್ರತಿ ವ್ಯಕ್ತಿ ಮತ್ತು ವಸ್ತುವನ್ನು ವಿಚಾರಣೆ ಮಾಡಿಯೇ ಒಳಗೆ ಬಿಡಬೇಕು ಎಂದು ಅಡಿಷನಲ್ ಕಮಿಷನರ್ ಆಫ್ ಪೊಲೀಸ್ (ನಿಯಮ ಮತ್ತು ಆದೇಶ) ಅಲೋಕ್ ಕುಮಾರ್ ಆದೇಶಿಸಿದ್ದರು. ಆದರೆ ಜೈಲು ಇಲಾಖೆಯ ಸಹಕಾರವಿಲ್ಲದೆ ನಾವೇನೂ ಮಾಡುವಂತಿಲ್ಲ. 3 ತಿಂಗಳ ಹಿಂದೆ ಗಾಂಜಾ ವಶಪಡಿಸಿದ್ದರೂ ನಮಗೆ ಅಲ್ಲಿಂದ ಯಾವುದೇ ವರದಿಗಳ ಇಲ್ಲಿವರೆಗೆ ಸಿಕ್ಕಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜೈಲಲ್ಲೂ ಮೊಬೈಲ್ ರಿಂಗಣ: ಜೈಲಲ್ಲಿ 5,000 ರು. ಕೊಟ್ಟರೆ ನಿಮಗೆ ಮೊಬೈಲ್ ಸಿಗುತ್ತದೆ. ಮೊಬೈಲ್‌ಗೆ ಹಣ ಕೊಟ್ಟರೆ ಸಾಲದು, ಜೈಲಿನೊಳಗಿನ ಸಮಯಕ್ಕೆ ತಕ್ಕಂತೆ ಮೊಬೈಲ್ ಜಾಮರ್‌ನ್ನು ಸ್ವಿಚ್ ಆಫ್ ಮಾಡಲು ಜೈಲಾಧಿಕಾರಿಗಳಿಗೆ ಲಂಚವನ್ನೂ ಕೊಡಬೇಕು.

ಮೊಬೈಲ್ ಬಳಸುವುದಕ್ಕೆ ತಿಂಗಳಿಗೆ ರು. 5000 ಬಾಡಿಗೆ ಕೊಡುವುದು ವಿಳಂಬವಾದರೆ, ಕೈದಿಗಳಿಂದ ಮೊಬೈಲ್ ಕಸಿದುಕೊಳ್ಳಲಾಗುತ್ತದೆ. ಜೈಲಿನಲ್ಲಿ ಮೊಬೈಲ್ ಫೋನ್  ಬಳಕೆ ಮಾಡಲಾಗುತ್ತಿದೆ ಎಂಬುದನ್ನು ಒಪ್ಪಿಕೊಂಡ ರಾಜಾ, ನಮಗೆ ಅಲ್ಲಿನ ಎಲ್ಲ ಕಾರ್ಯಗಳತ್ತ ನಿಗಾ ವಹಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಇಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎಂದು ಹೇಳುತ್ತಿದ್ದಾರೆ.


ಮೂರು ಗೇಟ್‌ಗಳು: ಜೈಲಿಗೆ ಪ್ರವೇಶಿಸಬೇಕಾದರೆ ಮೂರು ಗೇಟ್‌ಗಳಿವೆ. ಅದನ್ನು ದಾಟಿ ಮುಂದೆ ಬರಲು ಯಾರಿಗೆ ಸಾಧ್ಯವಾಗುತ್ತದೆ? ಎಂದು ರಾಜಾ ಪ್ರಶ್ನಿಸಿದ್ದಾರೆ. ಇತ್ತ ಡಿಐಜಿ(ಜೈಲು) ಪಿಎಂ ಜೈಸಿಂಹ ಅವರು ಈ ಅವಾಂತರಗಳಿಗೆಲ್ಲಾ  ಹಿಂದಿನ ಡಿಐಜಿ ಅವರನ್ನೇ ದೂರುತ್ತಾರೆ. ಈ ಎಲ್ಲ ಘಟನೆಗಳ ನಡೆದಾಗ ವಿಶ್ವನಾಥ್ ಅವರು ಡಿಐಜಿ ಆಗಿದ್ದರು. ಆದ್ದರಿಂದ ಈ ಬಗ್ಗೆ ನನಗೇನೂ ಗೊತ್ತಿಲ್ಲ ಅಂತಾರೆ.

ಜಾಮರ್ ಇದ್ರೂ ವರ್ಕ್ ಆಗುತ್ತೆ ಮೊಬೈಲ್: ಜೈಲಿನೊಳಗೆ ಜಾಮರ್‌ಗಳ ವ್ಯಾಪ್ತಿ ಎರಡು ಕಿ.ಮೀ ಇದ್ದರೂ, ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪೊಲೀಸ್ ಹೇಳುತ್ತಿದ್ದಾರೆ. ಜೈಲಾಧಿಕಾರಿಗಳೆ ಕರೆ ಮಾಡಿದರೆ, ಜಾಮರ್ ಪ್ರಭಾವದಿಂದ ಕರೆಗಳು ಹೋಗುತ್ತಿಲ್ಲ. ಇಂತಿರುವಾಗ ಬೆದರಿಕೆ ಕರೆಗಳು ಹೇಗೆ ಬರುತ್ತವೆ? ನಮ್ಮ ಮೊಬೈಲ್‌ಗೆ ಕರೆಗಳು ಬರುವುದಾದರೂ ಹೇಗೆ? ಎಂದು ಪೊಲೀಸರೇ ಗೊಂದಲಕ್ಕೊಳಗಾಗಿದ್ದಾರೆ.
 








ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com