ನಿರಾಶ್ರಿತರ ಸಮಸ್ಯೆ ಬಗೆಹರಿಸಲು ಬಿಜೆಪಿ ಬದ್ಧ: ಮೋದಿ

ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಮಂತ್ರವನ್ನು ಪಠಿಸಿದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಿಶ್‌ತ್ವಾರ್‌ನಲ್ಲಿ ಬಿಜೆಪಿ...
ನರೇಂದ್ರ ಮೋದಿ
ನರೇಂದ್ರ ಮೋದಿ

ಕಿಶ್‌ತ್ವಾರ್: ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಮಂತ್ರವನ್ನು ಪಠಿಸಿದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಿಶ್‌ತ್ವಾರ್‌ನಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ನವೆಂಬರ್ 25ರಿಂದ ಡಿಸೆಂಬರ್ 20ರ ವರೆಗೆ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 23ಕ್ಕೆ ಮತ ಎಣಿಕೆ ನಡೆಯಲಿದೆ.
ನವೆಂಬರ್ 25ಕ್ಕೆ ಮೊದಲನೇ ಹಂತದ ಚುನಾವಣೆ ನಡೆಯಲಿದೆ.

ನಾನ್ಯಾಕೆ ಜಮ್ಮು ಕಾಶ್ಮೀರವನ್ನು ಅಷ್ಟೊಂದು ಇಷ್ಟಪಡುತ್ತಿದ್ದೇನೆ ಎಂದು ಎಲ್ಲರಿಗೂ ಕುತೂಹಲವಿರಬಹುದು. ನಾನಿಲ್ಲಿ ಅಟಲ್ ಜಿ ಮಾಡಿದ ಕಾರ್ಯಗಳನ್ನು ಮುಂದುವರಿಸಲು ಬಂದಿದ್ದೇನೆ.

ನಾನು ಕಾಶ್ಮೀರಕ್ಕೆ ಬಂದಾಗಲೆಲ್ಲಾ ಇಲ್ಲಿನ ಅಭಿವೃದ್ಧಿ ಬಗ್ಗೆ ಮಾತನಾಡುತ್ತೇನೆ. ನನ್ನ ರಾಜ್ಯ ಗುಜರಾತ್‌ನಲ್ಲಿರುವ ಕಚ್‌ನಲ್ಲಿ ಅಭಿವೃದ್ಧಿ ಸಾಧ್ಯವಾಗುವುದಾದರೆ ಕಾಶ್ಮೀರದಲ್ಲಿ ಯಾಕಿಲ್ಲ?
ಕಚ್‌ಗೆ ಯಾರಾದರೂ ವರ್ಗಾವಣೆಯಾಗಿ ಬಂದರೆ ಅದು ಅವರಿಗೆ ಶಿಕ್ಷೆಯಾಗಿತ್ತು. ಆದರೆ ಈಗ ಕಚ್ ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುವ ಜಿಲ್ಲೆಯಾಗಿ ಮಾರ್ಪಾಡಾಗಿದೆ ಎಂದು ಮೋದಿ ಹೇಳಿದ್ದಾರೆ.

ಏತನ್ಮಧ್ಯೆ, ಕಾಶ್ಮೀರದ ಅಭಿವೃದ್ಧಿಗೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಮುತುವರ್ಜಿ ವಹಿಸಿಲ್ಲ ಎಂದು ಮೋದಿ ಆರೋಪಿಸಿದ್ದಾರೆ.

ಇಲ್ಲಿರುವ ಎರಡು ಕುಟುಂಬಗಳು ಕಾಶ್ಮೀರದಲ್ಲಿ ಅಧಿಕಾರವನ್ನು ಚಲಾಯಿಸುತ್ತಿವೆ. ಇವೆರಡು ಒಪ್ಪಂದ ಮಾಡಿಕೊಂಡು 5 ವರ್ಷ ಒಬ್ಬರು, ಮುಂದಿನ 5 ವರ್ಷ ಮತ್ತೊಬ್ಬರು ಎಂಬಂತೆ ಅಧಿಕಾರ ನಡೆಸಿ ಕಾಶ್ಮೀರವನ್ನು ಲೂಟಿ ಮಾಡುತ್ತಿದ್ದಾರೆ.
ಇಲ್ಲಿ ಲೂಟಿ ಮಾಡುತ್ತಿರುವ ಈ ಕುಟುಂಬಕ್ಕೆ ನೀವು ಶಿಕ್ಷೆ ನೀಡದೇ ಇದ್ದರೆ ಅವರು ಇನ್ನೊಂದು ರೂಪದಲ್ಲಿ ಬರುತ್ತಾರೆ ಎಂದು ಮೋದಿ ಟೀಕಾ ಪ್ರಹಾರ ಮಾಡಿದ್ದಾರೆ.

ಪ್ರವಾಹ ಬಂದಾಗಲೆಲ್ಲಾ ರಾಜ್ಯ ಸರ್ಕಾರ ಜನರನ್ನು ಚೆನ್ನಾಗಿ ಲೂಟಿ ಮಾಡುತ್ತದೆ ಎಂದು ಒಮರ್ ಅಬ್ದುಲ್ಲಾ ಸರ್ಕಾರದ ಮೇಲೆ ಕಿಡಿ ಕಾರಿದ ಮೋದಿ, ಕಳೆದ 50 ವರ್ಷಗಳಲ್ಲಿ ಇಲ್ಲಿನ ನಿರಾಶ್ರಿತರ ಸಮಸ್ಯೆಗಳು ಬಗೆ ಹರಿದಿಲ್ಲ ಎಂದಿದ್ದಾರೆ.

ಇಲ್ಲಿನ ನಿರಾಶ್ರಿತರ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ. ಅದಕ್ಕಾಗಿ ನಮಗೆ ಮತ ನೀಡಿ, ಬಿಜೆಪಿ ಗೆಲ್ಲಿಸಿ ಎಂದು ಮೋದಿ ಜನರಲ್ಲಿ ವಿನಂತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com