ತೆಲಂಗಾಣದಲ್ಲಿ ಶಂಕಿತ ಸಿಮಿ ಕಾರ್ಯಕರ್ತರು ಗುಂಡೇಟಿಗೆ ಬಲಿ
ಹೈದರಾಬಾದ್: ತೆಲಂಗಾಣದ ನಲಗೊಂದ ಜಿಲ್ಲೆಯಲ್ಲಿ ಏಪ್ರಿಲ್ ೨ ರಂದು ಇಬ್ಬರು ಪೊಲೀಸರನ್ನು ಗುಂಡಿನ ದಾಳಿ ನಡೆಸಿ ಕೊಂದು, ಮೂವರನ್ನು ಗಾಯಗೊಳಿಸಿದ್ದ ಇಬ್ಬರನ್ನು ಪೊಲೀಸ್ ಎನ್ಕೌಂಟರ್ ನಲ್ಲಿ ಕೊಲ್ಲಲಾಗಿದೆ. ಈ ಗುಂಡಿನ ಕಾಳಗದಲ್ಲಿ ಒಬ್ಬ ಪೊಲೀಸ್ ಕಾನ್ಸ್ಟೆಬಲ್ ಕೂಡ ಮೃತಪಟ್ಟಿದ್ದಾನೆ.
ಏಪ್ರಿಲ್ ೨ ರ ಸೂರ್ಯಪೇಟ್ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಮೊತ್ಕೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಜಾನಕಿಪುರಂ ಬಳಿ ಎನ್ಕೌಂಟರ್ ನಲ್ಲಿ ಕೊಲ್ಲಲಾಗಿದೆ ಈ ಗುಂಡಿನ ಕಾಳಗದಲ್ಲಿ ಒಬ್ಬ ಪೊಲೀಸ್ ಪೇದೆ ಸಾವನ್ನಪ್ಪಿದ್ದು, ಒಬ್ಬ ಇನ್ಸ್ಪೆಕ್ಟರ್ ಮತ್ತು ಒಬ್ಬ ಎಸ್ ಐ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ಲಭ್ಯವಾದ ಆಧಾರದ ಮೇಲೆ ಇವರಿಬ್ಬರನ್ನು ಪೊಲೀಸ್ ತಂಡಗಳು ಅಟ್ಟಿಸಿಕೊಂಡು ಹೋದಾಗ, ಬೈಕಿನ ಮೇಲೆ ಹೋಗುತ್ತಿದ್ದ ಅವರು ಪೋಲಿಸರ ಮೇಲೆ ಗುಂಡು ಹಾರಿಸಿದ್ದರಿಂದ ನಾಗರಾಜ್ ಎಂಬ ಪೇದೆ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ ತಂಡ ಅವರಿಬ್ಬರನ್ನೂ ಕೊಂದು ಹಾಕಿದೆ" ಎಂದು ತೆಲಂಗಾಣ ಡಿಜಿಪಿ ಅನುರಾಗ್ ಶರ್ಮಾ ತಿಳಿಸಿದ್ದಾರೆ.
ಅವರು ಸಿಮಿ ಕಾರ್ಯಕರ್ತರೇ ಎಂಬ ಪ್ರಶ್ನೆಗೆ, ಇನ್ನು ಧೃಢೀಕರಣ ಸಿಕ್ಕಿಲ್ಲ.. ಅವರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ತೆಲಂಗಾಣ ಪೋಲಿಸ್ ಅಧ್ಯಕ್ಷ ತಿಳಿಸಿದ್ದಾರೆ. ಇವರಿಬ್ಬರು ಉತ್ತರಪ್ರದೇಶದ ಗ್ಯಾಂಗಿಗೆ ಸೇರಿದ್ದವರು ಹಾಗು ಸೂರ್ಯಪೇಟ್ ಕೊಲೆಗಳಲ್ಲಿ ತಲೆಮರೆಸಿಕೊಂಡಿದ್ದವರು ಎಂಬ ಮಾಹಿತಿ ನಮಗೆ ತಿಳಿದುಬಂದಿತ್ತು ಎಂದಷ್ಟೇ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ