
ಖಟ್ಮಂಡು: ಭಾರತ ಮತ್ತು ನೇಪಾಳದ ಗಡಿಗೆ ಹತ್ತಿರವಿರುವ ಬುದ್ಧನ ಜನ್ಮ ಪ್ರದೇಶ ಲುಂಬಿಣಿಯನ್ನು ಆಕರ್ಷಕ ಪ್ರವಾಸೋದ್ಯಮ ತಾಣ ಹಾಗೂ ತೀರ್ಥಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲು ಚೈನಾ ನೆರವು ನೀಡಲು ಮುಂದಾಗಿದೆ. ಅಂತರಾಷ್ಟ್ರೀಯ ಸಂಬಂಧಗಳ ರಾಜಕೀಯದಲ್ಲಿ ನೇಪಾಳವನ್ನು ತನ್ನತ್ತ ಸೆಳೆಯುವ ನಡೆ ಇದು ಎನ್ನಲಾಗಿದೆ.
ಮೂರು ದಿನಗಳ ನೇಪಾಳದ ಪ್ರವಾಸದಲ್ಲಿರುವ ಚೈನಾದ ಧಾರ್ಮಿಕ ವ್ಯವಹಾರಗಳ ಇಲಾಖೆಯ ನಿರ್ದೇಶಕ ವ್ಯಾಂಗ್ ಜುಆನ್, ನೇಪಾಳ ಅಧ್ಯಕ್ಷ ರಾಮ್ ಬರನ್ ಯಾದವ್ ಅವರೊಂದಿಗಿನ ಭಾನುವಾರದ ಭೇಟಿಯ ವೇಳೆಯಲ್ಲಿ ಲುಂಬಿನಿ ಅಭಿವೃದ್ಧಿಗೆ ಚೈನಾ ಸಹಾಯಹಸ್ತ ಚಾಚುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸೌದಿಯ ಮೆಕ್ಕಾ ಮಾದರಿಯಲ್ಲಿ ಲುಂಬಿಣಿಯನ್ನು ತೀರ್ಥ ಕ್ಷೇತ್ರವಾಗಿ ಹಾಗೂ ಅಧ್ಯಯನ ಕೇಂದ್ರವಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಲು ನೇಪಾಳ ಮುಂದಾಗಿದೆ. ಲುಂಬಿನಿ ಉದ್ಯಾನವನದಲ್ಲಿ ೬೨೩ ಬಿಸಿಯಲ್ಲಿ ಬುದ್ಧ (ಸಿದ್ಧಾರ್ಥ) ಜನಿಸಿದ್ದ ಎಂಬುದು ಪ್ರತೀತಿ. ಇದನ್ನು ವಿಶ್ವಸಂಸ್ಥೆಯ ಪರಂಪರಾ ತಾಣವಾಗಿ ಘೋಷಿಸಿಲಾಗಿದೆ.
ಚೈನಾದ ಅಧೀನಕ್ಕೆ ಒಳಪಟ್ಟಿರುವ ಟಿಬೆಟ್ ಕೂಡ ನೇಪಾಳದ ಗಡಿಯಲ್ಲಿದ್ದು, ಎರಡು ದೇಶಗಳ ನಡುವೆ ರಸ್ತೆ ಮತ್ತು ರೈಲು ಸಂಪರ್ಕಕ್ಕೆ ಕೂಡ ಚೈನಾ ಪ್ರಧಾನಿ ನೇಪಾಳದ ಜೊತೆ ಈ ಹಿಂದೆ ಮಾತುಕತೆ ನಡೆಸಿದ್ದರು.
Advertisement