
ರಾಯಪುರ: ಶನಿವಾರದಿಂದ ನಡೆದದ ಮೂರನೆ ಗುಂಡಿನ ದಾಳಿಯಲ್ಲಿ ನಕ್ಸಲ್ ಪೀಡಿತ ಚತ್ತೀಸ್‌ಗಡದ ಕಾಂಕೇರ್ ಜಿಲ್ಲೆಯಲ್ಲಿ ನಕ್ಸಲರು ಬಿಎಸ್ಎಫ್ ಸೈನಿಕನೊಬ್ಬನನ್ನು ಕೊಂದುಹಾಕಿದ್ದಾರೆ.
ಬಂಡೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಚೊಟ್ಟೆ ಬೈಟಿಯ ಬಿಎಸ್ಎಫ್ ಶಿಬಿರದ ಬಳಿ ಕಳೆದ ರಾತ್ರಿ ಭದ್ರತಾ ಪಡೆ ಗಸ್ತು ಹೊಡೆಯುವಾಗ ಮಾವೋವಾದಿಗಳ ಗುಂಪೊಂದು ಭದ್ರತಾ ಪಡೆಯ ಮೇಲೆ ಅಪ್ರಚೋದಿತ ದಾಳಿ ನಡೆಸಿದೆ ಎಂದು ಕಾಂಕೇರ್ ಪೊಲೀಸ್ ಮಹಾನಿರ್ದೇಶಕ ಸಿಂಗ್ ಮೀನಾ ಪಿಟಿಐಗೆ ತಿಳಿಸಿದ್ದಾರೆ.
ಆಗ ಭದ್ರತಾ ಪಡೆಗಳ ಮತ್ತು ಮಾವೋವಾದಿ ಉಗ್ರರ ನಡುವೆ ಗುಂಡಿನ ದಾಳಿ ತೀವ್ರಗೊಂಡು, ಉಗ್ರರು ಕಾಡಿನತ್ತ ಓಡಿ ಹೋಗಿದ್ದರೆ. "ಗುಂಡಿನ ದಾಳಿಯಲ್ಲಿ ಬಿಎಸ್ಎಫ್ ಕಾಂಸ್ಟೇಬಲ್ ಒಬ್ಬರು ಗುಂಡೇಟಿನಿಂದ ತೀವ್ರ ಗಾಯಗೊಂಡು ಹತ್ತಿರದ ಪ್ರಾದೇಶಿಕ ಆಸ್ಪತ್ರೆಗೆ ಸೇರಿಸಲು ಕೊಂಡೊಯ್ಯುವಾಗ ಮೃತಪಟ್ಟಿದ್ದಾರೆ" ಎಂದು ಅವರು ತಿಳಿಸಿದ್ದಾರೆ. ಈ ಘಟನೆಯ ನಂತರ ಹೆಚ್ಚುವರಿ ಭದ್ರತಾ ಪಡೆಯನ್ನು ಸ್ಥಳಕ್ಕೆ ರವಾನಿಸಲಾಗಿದ್ದು ದಾಳಿಕೋರರನ್ನು ಹಿಡಿಯಲು ಶೋಧ ಕಾರ್ಯಾಚರಣೆ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
ಶನಿವಾರದ ನಕ್ಸಲ್ ದಾಳಿಯಲ್ಲಿ ಏಳು ಜನ ಎಸ್ ಟಿ ಎಫ್ ಸಿಬ್ಬಂದಿ ಮೃತಪಟ್ಟಿದ್ದರು ಹಾಗು ಹತ್ತು ಜನ ಗಾಯಗೊಂಡಿದ್ದರು. ನೆನ್ನೆಯ ನಕ್ಸಲ್ ದಾಳಿಯಲ್ಲಿ ಗಣಿಗಾರಿಕೆಯ ೧೭ ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದರು. ಆದರೆ ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ.
Advertisement