
ಕಾರವಾರ: 205 ಕನ್ನಡಿಗ ಕುಟುಂಬಗಳಿಗೆ ೪೮ ಘಂಟೆಗಳಲ್ಲಿ ಗೋವಾವನ್ನು ತೊರೆಯುವಂತೆ ಗೋವಾ ಸರ್ಕಾರ ಆದೇಶಿಸಿರುವುದರಿಂದ ದೇವರ ಹಿಪ್ಪರಗಿ ಕ್ಷೇತ್ರದ ಎ ಎಸ್ ಪಾಟಿಲ್ ನಾಡಹಳ್ಳಿ ಅವರು ಭಾನುವಾರ ಅನಿರ್ಧಿಷ್ಟ ಕಾಲದವರೆಗೆ ಧರಣಿ ಪ್ರಾರಂಭಿಸಿದ್ದಾರೆ.
ವಾಸ್ಕೋದಾ ಬಿನಾ ಬೀಚಿನಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಗೋವಾ ಸರ್ಕಾರವನ್ನು ಆಗ್ರಹಿಸಿರುವುದಲ್ಲದೆ, ಈ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ತೊಂದರೆ ಪರಿಹರಿಸುವಂತೆ ಹೇಳಿದ್ದಾರೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಂದ ವಲಸೆ ಹೋಗಿ ೪೦ ವರ್ಷಗಳಿಂದ ಬದುಕುತ್ತಿರುವ ಕನ್ನಡಿಗ ಕುಟುಂಬಗಳಿಗೆ ಗೋವಾ ಸರ್ಕಾರ ನೋಟಿಸ್ ನೀಡಿದೆ ಎಂದು ಎ ಎಸ್ ಪಾಟಿಲ್ ತಿಳಿಸಿದ್ದಾರೆ.
"ಗೋವಾದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಮತ್ತು ಈ ಸಾಗರದ ಗಡಿಯಲ್ಲಿ ೫೦೦೦ ಕನ್ನಡಿಗ ಕುಟುಂಬಗಳು ವಾಸ ಮಾಡುತ್ತದೆ. ಇವರಿಗೆ ಪುನರ್ವಸತಿ ಕಲ್ಪಿಸದೆ ಗೋವಾ ಸರ್ಕಾರ ಇವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿದೆ" ಎಂದು ಅವರು ದೂರಿದ್ದಾರೆ.
ಯಾವುದೇ ಪರಿಹಾರ ನೀಡದೆ ೨೦೦೪ ರಲ್ಲಿ ಗೋವಾ ಸರ್ಕಾರ ಕನ್ನಡಿಗರಿಗೆ ಸೇರಿದ್ದ ೩೦೯ ಮನೆಗಳನ್ನು ಧ್ವಂಸ ಮಾಡಿತ್ತು ಹಾಗು ೨೦೧೪ರಲ್ಲಿ ೬೭ ಮನೆಗಳನ್ನು ಕೆಡವಿತ್ತು. ಗೋವಾದ ಕಾನೂನಿನ ಪ್ರಕಾರ ೩೦-೪೦ ವರ್ಷದ ಕೆಳಗೆ ಗೋವಾ ಸರ್ಕಾರದ ಜಮೀನಿನಲ್ಲಿ ಕಟ್ಟಿರುವ ಮನೆಗಳನ್ನು ಕೆಡವಬೇಕಾದರೆ ಅಗತ್ಯ ಪುನರ್ವಸತಿ ಕಲ್ಪಿಸಬೇಕು. ಕನ್ನಡಿಗರೂ ಈ ಪರಿಹಾರಕ್ಕೆ ಅರ್ಹರು. ಆದರೆ ಗೋವಾ ಸರ್ಕಾರ ಇದನ್ನು ನಿರಾಕರಿಸಿದೆ ಎಂದಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಸಚಿವ ಆರ್ ವಿ ದೇಶಪಾಂಡೆ ಅವರನ್ನು ದೂಷಿಸಿದ ಶಾಸಕ "ಸಚಿವ ದೇಶಪಾಂಡೆ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರ್ರಿಕರ್ ಅವರನ್ನು ಭೇಟಿಯಾಗಿ ೬೭ ಕನ್ನಡಿಗ ಕುಟುಂಬಗಳಿಗೆ ಪರಿಹಾರ ಯಾಚಿಸಿದ್ದರು. ಸಹಾಯವನ್ನು ಮಾಡುವುದಾಗಿ ಹಾಗು ಮನೆಗಳನ್ನು ಕೆಡುವುವುದನ್ನು ನಿಲ್ಲಿಸುವುದಾಗಿ ಪರ್ರಿಕರ್ ವಚನ ನೀಡಿದ್ದರು ಕೂಡ. ಆದರ ಈ ಯಾವ ವಚನಗಳನ್ನು ಉಳಿಸಿಕೊಳ್ಳಲಿಲ್ಲ. ದೇಶಪಾಂಡೆ ಅವರು ಅಲ್ಲಿನ ಯಾವ ಕನ್ನಡಿಗ ಕುಟುಂಬವನ್ನು ಭೇಟಿ ಮಾಡಿಲ್ಲ" ಎಂದಿದ್ದಾರೆ.
Advertisement