
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯನ್ನು ಮೂರು ಭಾಗವಾಗಿ ವಿಭಜಿಸುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಈ ಕುರಿತು ಚರ್ಚಿಸಲು ವಿಧಾನ ಮಂಡಲ ವಿಶೇಷ ಅಧಿವೇಶನ ಕರೆದಿದೆ.
ಏಪ್ರಿಲ್ 20ರಂದು ಒಂದು ದಿನದ ವಿಶೇಷ ಅಧಿವೇಶನ ಕರೆಯಲು ಸರ್ಕಾರ ನಿರ್ಧರಿಸಿದ್ದು, ಬಿಬಿಎಂಪಿ ವಿಭಜನೆ ವಿಧೇಯಕವನ್ನು ಉಭಯ ಸದನಗಳಲ್ಲಿ ಮಂಡಿಸಿ, ಚರ್ಚಿಸಿ, ಅಂಗೀಕರಿಸುವ ಸಾಧ್ಯತೆ ಇದೆ.
ಬಿಬಿಎಂಪಿ ಮೂರು ಭಾಗದ ಸುಗ್ರೀವಾಜ್ಞೆ ಪ್ರಸ್ತಾಪದಲ್ಲಿ ಹಿನ್ನಡೆ ಅನುಭವಿಸಿರುವ ರಾಜ್ಯ ಸರ್ಕಾರ, ಇದೀಗ ಉಭಯ ಸದನಗಳ ವಿಶೇಷ ಅಧಿವೇಶನ ಕರೆದು ಮಸೂದೆ ಮಂಡಿಸಿ ಕಾಯ್ದೆ ರೂಪಿಸಲು ಮುಂದಾಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ ವಿಧಾನ ಪರಿಷತ್‍ನಲ್ಲಿ ಬಹುಮತ ಇಲ್ಲ. ಹೀಗಾಗಿ ಅಧಿವೇಶನದಲ್ಲಿ ಮಸೂದೆ ಮಂಡಿಸಿ ರಾಜ್ಯಪಾಲರಿಗೆ ಕಳುಹಿಸಿದರೆ ವಿಭಜನೆ ಸಾಧ್ಯ ಎನ್ನುವ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಒಂದು ವೇಳೆ ಈ ಮಸೂದೆಗೆ ರಾಜ್ಯಪಾಲರು ಸಹಿ ಹಾಕದೇ ಪುನಃ ಹಿಂದಕ್ಕೆ ಕಳುಹಿಸಬಹುದು. ಆದರೆ ಮತ್ತೆ ರಾಜ್ಯ ಸರ್ಕಾರ ಯಾವುದೇ ತಿದ್ದುಪಡಿ ಮಾಡದೇ ಅದನ್ನು ರಾಜ್ಯಪಾಲರಿಗೆ ಕಳುಹಿಸಿದರೆ ರಾಜ್ಯಪಾಲರು ಮಸೂದೆ ಸಹಿ ಹಾಕಲೇಬೇಕಾಗುತ್ತದೆ. ರಾಜ್ಯಪಾಲರು ಸಹಿ ಹಾಕಿದರೆ ಅದು ಕಾಯ್ದೆಯಾಗುವುದರಿಂದ ಬಿಬಿಎಂಪಿ ವಿಭಜನೆ ಕಾರ್ಯ ಸುಲಭವಾಗುತ್ತದೆ. ಇದಕ್ಕೆ ನ್ಯಾಯಾಲಯ ಅಡ್ಡಿಯಾಗುವ ಸಾಧ್ಯತೆ ತೀರಾ ಕಡಿಮೆ.
ಈ ಮಧ್ಯೆ, ಬಿಬಿಎಂಪಿ ಚುನಾವಣೆಗೆ ತಡೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಏಪ್ರಿಲ್ 20ಕ್ಕೆ ಮುಂದೂಡಿದೆ.
Advertisement