
ನವದೆಹಲಿ: ರಾಷ್ಟ್ರ ರಾಜಕೀಯದ ದಿಕ್ಕು ದೆಸೆ ಬದಲಿಸುತ್ತೇವೆ ಎಂಬ ಹಂಬಲದಿಂದ ವಿಲೀನವಾಗಿವೆ ಅರ್ಧ ಡಜನ್ ಪಕ್ಷಗಳು! ಈ ವಿಲೀನಕ್ಕೆ ಹಿರಿಯ ಮುತ್ಸದ್ಧಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಾಕ್ಷಿ.
ಜನತಾ ಪರಿವಾರದ ಮುಲಾಯಂ ಸಿಂಗ್ ಯಾದವ್, ಶರದ್ ಯಾದವ್, ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ಸೇರಿದಂತೆ ಎಲ್ಲ ನಾಯಕರ ಸಾಂಗತ್ಯದಲ್ಲಿ ಆರೂ ಪಕ್ಷಗಳು ಒಂದೇ ಚಿಹ್ನೆ, ಒಂದೇ ಹೆಸರಿನಲ್ಲಿ ಸ್ಪರ್ಧಿಸಲು, ಮುಂದಡಿ ಇಡಲು ನಿರ್ಧರಿಸಿವೆ. ಈ ಬಗ್ಗೆ ಜನತಾ ಪರಿವಾರದ ನಾಯಕರೆಲ್ಲರೂ ಒಟ್ಟಾಗಿ ಘೋಷಣೆ ಮಾಡಿದ್ದಾರೆ. ತತ್‍ಕ್ಷಣಕ್ಕೆ ಈ ವಿಲೀನ ಅಂಥದ್ದೇನೂ ಪರಿಣಾಮ ಬೀರಲ್ಲ ಎಂದೇ ಹೇಳಬಹುದು. ಆದರೆ ಕಳೆದ 20 ವರ್ಷಗಳಲ್ಲಿ ಹೋಳಾಗಿ ಕಳೆದುಕೊಂಡದ್ದರ ಅರಿವು ಈ ಎಲ್ಲ ಪಕ್ಷಗಳಿಗಿದೆ. ಹೀಗಾಗಿಯೇ ಬಿಹಾರ, ಉತ್ತರ ಪ್ರದೇಶದಲ್ಲಿ ಒಟ್ಟಾಗಿಯೇ ಚುನಾವಣೆ ಎದುರಿಸಲು ಹೊರಟಿವೆ. ಇದು ಈ ಪಕ್ಷಗಳಿಗೆ ದೊಡ್ಡ ಸುದ್ದಿ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಶಾಕಿಂಗ್ ನ್ಯೂಸ್!
ಚಿಹ್ನೆ, ಹೆಸರು ನಿರ್ಧಾರವಾಗಿಲ್ಲ
ಸಮಾಜವಾದಿ ಜನತಾ ಪಕ್ಷ ಅಥವಾ ಸಮಾಜವಾದಿ ಜನತಾದಳ ಎಂಬ ಹೆಸರು ಫೈನಲ್ ಆಗಬಹುದಾದ ಎಲ್ಲ ಸಾಧ್ಯತೆಗಳಿವೆ. ಈ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿತ್ತಾದರೂ, ಅಂತಿಮವಾಗಿ ನಿರ್ಧಾರಕ್ಕೆ ಬರಲಾಗಿಲ್ಲ. ಚಿಹ್ನೆ ವಿಚಾರದಲ್ಲೂ ಅಷ್ಟೇ, ಸೈಕಲ್ ಅನ್ನೇ ಅಂತಿಮ ಮಾಡಬೇಕೋ, ಮೂಲ ಜನತಾದಳದ ಚಕ್ರ ಚಿಹ್ನೆಯನ್ನು ಉಳಿಸಿಕೊಳ್ಳಬೇಕೋ ಎಂಬ ಗೊಂದಲದಲ್ಲಿ ಈ ಬಗೆಗಿನ ಘೋಷಣೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ನಿರ್ಧಾರಕ್ಕಾಗಿ ದೇವೇಗೌಡರನ್ನೂ ಸೇರಿ 6 ಮಂದಿಯ ಸಮಿತಿಯನ್ನು ನೇಮಕ ಮಾಡಲಾಗಿದೆ. ಅಂತೆಯೇ ಎಸ್ಪಿಯ ಮುಲಾಯಂ ಸಿಂಗ್ ಯಾದವ್ ಹೊಸ ಪಕ್ಷದ ಮೊದಲ ಅಧ್ಯಕ್ಷ. ಜತೆಗೆ ಸಂಸದೀಯ ಮಂಡಳಿ ಕಾರ್ಯಾಧ್ಯಕ್ಷರಾಗಿಯೂ ಇವರೇ ಕಾರ್ಯ ನಿರ್ವಹಿಸಲಿದ್ದಾರೆ.
ಎಲ್ಲಾಯ್ತು ಘೋಷಣೆ?
ಮುಲಾಯಂ ಸಿಂಗ್ ಅವರ ನಿವಾಸದಲ್ಲಿ ಬುಧವಾರ ಸಭೆ ಸೇರಿದ್ದ ಎಸ್ಪಿಯ ಮುಲಾಯಂ, ಜೆಡಿಎಸ್‍ನ ಎಚ್.ಡಿ.ದೇವೇಗೌಡ, ಆರ್ ಜೆಡಿಯ ಲಾಲೂಪ್ರಸಾದ್ ಯಾದವ್, ಜೆಡಿಯು ನಾಯಕರಾದ ಶರದ್ ಯಾದವ್ ಮತ್ತು ನಿತೀಶ್‍ಕುಮಾರ್ ಹಾಗೂ ಐಎನ್‍ಎಲ್ ಡಿಯ ಅಜಯ್ ಚೌಟಾಲ ಅವರು ಜನತಾ ಪರಿವಾರ ವಿಲೀನಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಸಭೆ ನಂತರ ಹೊರಗೆ ಬಂದವರೇ ಮೊದಲು ಹೇಳಿದ ಮಾತೇ, ನಾವು ವಿಲೀನವಾಗಿದ್ದೇವೆ ಎಂಬುದು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಶರದ್ ಯಾದವ್ ಮತ್ತು ದೇವೇಗೌಡ. ಪಕ್ಷದ ರೂಪುರೇಷೆಗಳ ಬಗ್ಗೆ ವಿವರ ಕೊಟ್ಟ ಶರದ್ ಯಾದವ್, ಮುಲಾಯಂ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ವಿಚಾರ ಬಹಿರಂಗ ಮಾಡಿದರು. ಜತೆಗೆ ಪಕ್ಷದ ಚಿಹ್ನೆ ಮತ್ತು ಹೆಸರಿಗಾಗಿ ದೇವೇಗೌಡ, ಲಾಲು, ಶರದ್ ಯಾದವ್, ರಾಮಗೋಪಾಲ್ ಯಾದವ್ ಸೇರಿದ್ದಂತೆ ಆರು ಸದಸ್ಯರನ್ನೊಳಗೊಂಡ ಸಮಿತಿ ಯನ್ನು ನೇಮಕ ಮಾಡಲಾಗಿದೆ ಎಂದರು.
ಬಿಹಾರಕ್ಕೆ ನಿತೀಶ್ ಸಿಎಂ ಅಭ್ಯರ್ಥಿ
ವರ್ಷಾಂತ್ಯದಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯುವುದು ನೂತನ ಪಕ್ಷದ ಸದ್ಯದ ಗುರಿ. ಈಗಾಗಲೇ ಸಂಘಟಿತವಾಗಿ ಚುನಾವಣೆ ಎದುರಿಸಲು ಹಾಗೂ ಹಾಲಿ ಸಿಎಂ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ನಿರ್ಧರಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಜೆಡಿಯು ಮತ್ತು ಆರ್‍ಜೆಡಿ ಬಿಜೆಪಿಗಿಂತಲೂ ಹೆಚ್ಚು ಮತಗಳನ್ನು ಗಳಿಸಿದ್ದವು. ಆದರೆ ಮತ ಹಂಚಿಕೆಯಿಂದಾಗಿ ಬಿಜೆಪಿ ಪ್ರಚಂಡ ಜಯಗಳಿಸಿತ್ತು. ಈಗ ಒಗ್ಗಟ್ಟಾಗಿ ಹೋರಾಟ ಮಾಡಿ ಬಿಜೆಪಿಯನ್ನು ಅ„ಕಾರದಿಂದ ದೂರ ಇಡುವ ಪ್ರಯತ್ನ ಪರಿವಾರದ ನಾಯಕರದ್ದು.
ಏಕೆ ವಿಲೀನ?
ದೇಶಾದ್ಯಂತ ಬಿಜೆಪಿ ಪಾರಮ್ಯ ಹೆಚ್ಚುತ್ತಿರುವುದೇ ಈ ವಿಲೀನಕ್ಕೆ ಪ್ರಮುಖ ಕಾರಣ ಎಂಬ ವಿಶ್ಲೇಷಣೆ ಇದೆ. ಇದನ್ನು ತಡೆಯಬೇಕಾದರೆ ಜನತಾಪರಿವಾರದಿಂದ ಸಿಡಿದು ಹೋಗಿರುವ ಎಲ್ಲರೂ ಒಟ್ಟಾಗಬೇಕು ಎಂಬ ಉದ್ದೇಶದಿಂದ ವಿಲೀನವಾಗಿದ್ದಾರೆ.
ವಿಲೀನ ಅಂದರೆ ವಿಲೀನ. ಒಂದೇ ಚಿನ್ಹೆಯಡಿ ನಾವು ಮುಂದುವರೆಯುತ್ತೇವೆ. ಬೇರೆ ಬೇರೆ ಚಿಹ್ನೆಯಿದ್ದರೆ ಜನರಿಗೆ ಗೊಂದಲವಾಗುತ್ತದೆ. ಕೋಮುವಾದಿ ಶಕ್ತಿಗಳನ್ನು ಮಣಿಸಲು ನಮ್ಮೊಂದಿಗೆ ಕೈಜೋಡಿಸಿ ಎಂದು ನಾವು ಎಲ್ಲಾ ಜಾತ್ಯತೀತ ಪಕ್ಷಗಳಿಗೂ ಆಹ್ವಾನ ನೀಡುತ್ತೇವೆ.
- ಲಾಲು ಪ್ರಸಾದ್ ಯಾದವ್, ಆರ್‍ಜೆಡಿ ನಾಯಕ
Advertisement