
ಬೆಂಗಳೂರು: ಬಿಬಿಎಂಪಿಯನ್ನು ಮೂರು ಭಾಗ ಮಾಡುವ ಉದ್ದೇಶದಿಂದ ಸರ್ಕಾರ ಕರೆದಿರುವ ತುರ್ತು ವಿಧಾನಮಂಡಲ ಅಧಿವೇಶನ ಸೋಮವಾರ ನಡೆಯಲಿದ್ದು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲು ಬಿಜೆಪಿ-ಜೆಡಿಎಸ್ ಸಜ್ಜಾಗಿವೆ.
ಈ ಮೊದಲು ಬಹಿಷ್ಕಾರದ ಮಾತನಾಡಿದ್ದ ಜೆಡಿಎಸ್ ಸದನದಲ್ಲೇ ಹೋರಾಟ ಮಾಡಲು ನಿರ್ಧರಿಸಿದೆ. ಹೀಗಾಗಿ, ಬಿಜೆಪಿ-ಜೆಡಿಎಸ್ ಒಂದಾದರೆ ಮೇಲ್ಮನೆಯಲ್ಲಿ ಸರ್ಕಾರಕ್ಕೆ ಸೋಲಾಗುವುದು ಖಚಿತವಾಗಲಿದೆ. ಪಾಲಿಕೆ ಚುನಾವಣೆಯನ್ನು ಏನಾದರೂ ಮಾಡಿ ಮುಂದೂಡಲೇಬೇಕು ಎಂದು ಪಣತೊಟ್ಟಿರುವ ರಾಜ್ಯ ಸರ್ಕಾರ, ಕೇವಲ ನಾಲ್ಕು ದಿನದ ಅವಧಿ ಹೊಂದಿದ್ದ ಬಿಬಿಎಂಪಿಯನ್ನು ಆರ್ಥಿಕ ಅಶಿಸ್ತಿನ ಕಾರಣವೊಡ್ಡಿ ವಿಸರ್ಜಿಸಿದೆ. ಆಡಳಿತಾಧಿಕಾರಿ ನೇಮಿಸಿ ಚುನಾವಣೆಗೆ ಸಮಯಾವಕಾಶವಾಗುವಂತೆ ನೋಡಿಕೊಂಡಿದೆ. ಈ ಮಧ್ಯೆ ಮೂರು ಭಾಗ ಮಾಡಲು ಕಾಯ್ದೆ ತಂದರೆ ಎಲ್ಲ ಪ್ರಕ್ರಿಯೆ ಮುಗಿಯಲು ಕನಿಷ್ಠ ಆರು ತಿಂಗಳು ಸಮಯ ಸಿಗುತ್ತದೆ. ಬೇಕಾದರೆ ಅದನ್ನು ಇನ್ನೂ ಆರು ತಿಂಗಳು ವಿಸ್ತರಿಸಿಕೊಳ್ಳಬಹುದು. ಹೀಗಾಗಿ, ಹೊಸ ಕಾಯ್ದೆಯತ್ತ ಸರ್ಕಾರ ಮುಖ ಮಾಡಿ ತುರ್ತು ಅಧಿವೇಶನ ಕರೆದಿದೆ.
-ಹೈಕೋರ್ಟ್‍ನಲ್ಲಿ ಭವಿಷ್ಯ
ಹೈಕೋರ್ಟ್‍ನಲ್ಲೂ ಸೋಮವಾರವೇ ಬಿಬಿಎಂಪಿ ಚುನಾವಣೆ ಮತ್ತು ಮೀಸಲು ಪಟ್ಟಿಯ ವಿವಾದ ಪ್ರಕರಣದ ವಿಚಾರಣೆ ನಡೆಯಲಿದೆ. ಬಿಬಿಎಂಪಿ ಚುನಾವಣೆ ನಡೆಸಬೇಕೆಂಬ ಏಕಪೀಠದ ತೀರ್ಪನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿ ಅದಕ್ಕೆ ತಡೆ ನೀಡಬೇಕೆಂದು ಸರ್ಕಾರ ಕೋರಿದೆ. ಈ ಪ್ರಕರಣದ ವಿಚಾರಣೆ ವಿಧಾನಸಭೆ ಆರಂಭಕ್ಕೆ ಮುನ್ನ ಅಂದರೆ ಬೆಳಗ್ಗೆ 10.30ಕ್ಕೇ ಆರಂಭವಾಗಲಿದೆ. ಕಲಾಪ 11ಕ್ಕೆ ಪ್ರಾರಂಭವಾಗಲಿದ್ದು, ಹೈಕೋರ್ಟ್ ನಲ್ಲಿ ಏನಾಗಲಿದೆ ಎಂಬ ಕುತೂಹಲವೂ ಇದೆ. ಇದಾದ ಮೇಲೆಯೇ ಮುಂದಿನ ಎಲ್ಲ ಪ್ರಕ್ರಿಯೆಗಳು ಅವಲಂಬಿತವಾಗಿವೆ.
ಶಾಸಕಾಂಗ ಸಭೆ
ಬಿಜೆಪಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ಸೋಮವಾರ ಬೆಳಗ್ಗೆ ನಡೆಸಿ, ಸರ್ಕಾರ ವಿರುದಟಛಿದ ಹೋರಾಟವನ್ನು ಅಂತಿಮಗೊಳಿಸಲಿವೆ. ಒಂದು ವೇಳೆ ಸರ್ಕಾರ ವಿಧಾನಮಂಡಲದಲ್ಲಿ ವಿಧೇಯಕಕ್ಕೆ ಒಪ್ಪಿಗೆ ಪಡೆದುಕೊಂಡಿದ್ದೇ ಆದಲ್ಲಿ ಅದನ್ನು ಸಮ್ಮತಿಸಬಾರದು ಎಂದು ರಾಜ್ಯಪಾಲರಿಗೆ ಮನವಿ ನೀಡಲೂ ನಿರ್ಧರಿಸಿವೆ. ಯಾವ ರೀತಿಯಲ್ಲಿ ಮುಂದಿನ ಹೋರಾಟ ಆಗಬೇಕು ಎಂಬುದು ವಿಧೇಯಕ ಮಂಡನೆ, ಅನುಮೋದನೆ, ಹೈಕೋರ್ಟ್ ನ ತೀರ್ಪಿನ ನಂತರವಷ್ಟೇ ಸ್ಪಷ್ಟ ರೂಪ ಪಡೆದುಕೊಳ್ಳಲಿದೆ.
ಮುಖ್ಯಮಂತ್ರಿಯಿಂದ ವಿಧೇಯಕ ಮಂಡನೆ
ಸಿದ್ದರಾಮಯ್ಯ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತ್ರಿಭಜನೆ ಉದ್ದೇಶ ದಿಂದ 2015ನೇ ಸಾಲಿನ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕವನ್ನು
ವಿಧಾನಸಭೆಯಲ್ಲಿ ಸೋಮವಾರ ಬೆಳಗ್ಗೆ ಮಂಡಿಸಲಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಲಾಗುತ್ತದೆ ಎಂದೂ ಹೇಳಲಾಗಿದೆ. ಆದರೆ, ಬಿಬಿಎಂಪಿಯನ್ನು ಮೂರು ಭಾಗ ಮಾಡಲು ಬಿಜೆಪಿ-ಜೆಡಿಎಸ್ ವಿರೋಧಿಸಿವೆ. ವಿಧಾನಸಭೆ ಯಲ್ಲಿ 123 ಸದಸ್ಯರ ಬಲ ಹೊಂದಿರುವ ಕಾಂಗ್ರೆಸ್‍ಗೆ ಇಲ್ಲಿ ಪ್ರತಿಪಕ್ಷಗಳೆಲ್ಲ ಒಂದು ಗೂಡಿ ವಿರೋಧಿಸಿ ಮತ ಚಲಾಯಿಸಿದರೂ ವಿಧೇಯಕಕ್ಕೆ ಒಪ್ಪಿಗೆ ಪಡೆಯುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ವಿಧಾನ ಪರಿಷತ್‍ನಲ್ಲಿ ಈ ಸ್ಥಿತಿ ಇಲ್ಲ.
ತಕ್ಕ ಉತ್ತರ ನೀಡಲು ಪ್ರತಿಪಕ್ಷಗಳು ಸಿದ್ಧ
ಬಿಬಿಎಂಪಿ ತ್ರಿಭಜನೆ ಮಾಡಲೆಂದೇ ಸರ್ಕಾರ ಅಧಿವೇಶನ ಕರೆದಿದ್ದು, ಇದಕ್ಕೆ ತಕ್ಕ ಉತ್ತರ ನೀಡಲು ಪ್ರತಿಪಕ್ಷಗಳು ನಿರ್ಧರಿಸಿವೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ ಬಹುಬಲದಿಂದ ವಿಧೇಯಕಕ್ಕೆ ಒಪ್ಪಿಗೆ ಪಡೆದುಕೊಳ್ಳಬಹುದು. ಆದರೆ, ವಿಧಾನಪರಿಷತ್‍ನಲ್ಲಿ ಬಿಜೆಪಿ-ಜೆಡಿಎಸ್ ಒಗ್ಗೂಡಿದರೆ ಕಾಂಗ್ರೆಸ್‍ಗೆ 12 ಮತಗಳ ಕೊರತೆ ಇದೆ. ಹೀಗಾಗಿ, ಸಾಕಷ್ಟು ಲೆಕ್ಕಾಚಾರಗಳು ನಡೆದಿದ್ದು, ಪರಿಷತ್‍ನಲ್ಲಿ ಒಂದೊಮ್ಮೆ ಸೋಲಾದರೂ ಮತ್ತೆ ನಾಳೆಯೇ ವಿಧಾನಸಭೆಯಲ್ಲಿ ಅದನ್ನು ಮಂಡಿಸಿ ಸಮ್ಮತಿ ಪಡೆಯಲು ಸರ್ಕಾರ ತಂತ್ರ ರೂಪಿಸಿದೆ. ಇಷ್ಟಾದ ಮೇಲೂ ರಾಜ್ಯಪಾಲರು ಈ ವಿಧೇಯಕಕ್ಕೆ ಸಮ್ಮತಿ ಸೂಚಿಸಬೇಕು. ಇದಾದ ನಂತರವಷ್ಟೇ ಅಧಿಸೂಚನೆ ಹೊರಬೀಳುತ್ತದೆ. ಆದರೆ, ವಿಧೇಯಕಕ್ಕೆ ಒಪ್ಪಿಗೆ ಕೊಡಬೇಡಿ ಎಂದು ರಾಜ್ಯಪಾಲರಿಗೆ ಸೋಮವಾರವೇ ಬಿಜೆಪಿ ಮನವಿ ಮಾಡಲು ನಿರ್ಧರಿಸಿದೆ. ಈ ನಡುವೆ ನಗರದಲ್ಲಿ ಸಂಘಸಂಸ್ಥೆಗಳಿಂದ ಬಿಬಿಎಂಪಿ ವಿಭಜನೆ ವಿರೋಧಿ ಹೋರಾಟಗಳೂ ಹೆಚ್ಚುತ್ತಿವೆ.
ವಿಧಾನಪರಿಷತ್ತೇ ನಿರ್ಣಾಯಕ
ವಿಧಾನಪರಿಷತ್‍ನಲ್ಲಿ ಒಟ್ಟು 75 ಸದಸ್ಯರಲ್ಲಿ ಕಾಂಗ್ರೆಸ್ ಬಲ 28. ಆದರೆ ಬಿಜೆಪಿಯ ಬಲವೇ 30. ಇದಕ್ಕೆ ಜೆಡಿಎಸ್ ನ 12 ಸದಸ್ಯರಬಲವೂ ಸೇರಿಕೊಂಡರೆ 42 ಆಗುತ್ತದೆ. ಹೀಗಾಗಿ ಪಕ್ಷೇತರರು ಕಾಂಗ್ರೆಸ್ ನೊಂದಿಗೆ ಸೇರಿಕೊಂಡರೂ ಸರ್ಕಾರಕ್ಕೆ ಸೋಲು ಖಚಿತ. ಹೀಗಾಗಿ, ಇಲ್ಲಿ ವಿಧೇಯಕಕ್ಕೆ ಸೋಲು ಉಂಟಾದರೆ, ಅದನ್ನೇ ಮತ್ತೆ ವಿಧಾನಸಭೆಯಲ್ಲಿ ಮಂಡಿಸಿ ಸಮ್ಮತಿ ಪಡೆದುಕೊಳ್ಳುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲು ಸರ್ಕಾರ ಆಲೋಚಿಸಿದೆ. ಹೀಗಾಗಿ ವಿಧಾನಪರಿಷತ್ ಕಲಾಪ ಮಧ್ಯಾಹ್ನ 2ಕ್ಕೆ ನಿಗದಿಯಾಗಿದೆ. ಬಿಬಿಎಂಪಿ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಈಗ ನಡೆಸಬಾರದು ಎಂದು ತೀರ್ಮಾನಿಸಿರುವ ಸರ್ಕಾರ ಅದಕ್ಕಾಗಿ ಎಲ್ಲ ಬಗೆಯ ತಂತ್ರಗಳನ್ನೂ ಅನುಸರಿಸಲು ನಿರ್ಧರಿಸಿದೆ. ಈ ನಡುವೆ ಅವುಗಳನ್ನು ವಿಫಲಗೊಳಿಸಲು ಪ್ರತಿಪಕ್ಷಗಳು ಪ್ರತಿತಂತ್ರ ರೂಪಿಸಿವೆ. ಇಷ್ಟಾದರೂ ಅಂತಿಮವಾಗಿ ಹೈಕೋರ್ಟ್ ಹಾಗೂ ರಾಜ್ಯಪಾಲರ ಆದೇಶದ ಮೇಲೆಯೇ ಎಲ್ಲವೂ ಅವಲಂಬಿತ.
Advertisement