
ದರ್ಭಾಂಗ/ಪಾಟ್ನಾ: ದರ್ಭಾಂಗ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ(ಡಿ ಎಂ ಸಿ ಎಚ್) ಭೂಕಂಪನದಿಂದ ಗಾಯಗೊಂಡ ವ್ಯಕ್ತಿಗಳ ಹಣೆಯ ಮೇಲೆ ಭೂಕಂಪನ ಎಂದು ಬರೆದ ಚೀಟಿಗಳನ್ನು ಅಂಟಿಸಿದ್ದು ಈಗ ತೀವ್ರ ವಿವಾದ ಎಬ್ಬಿಸಿದ್ದು ಈ ಪ್ರಕರಣದ ತನಿಖೆಗೆ ಬಿಹಾರ ಸರ್ಕಾರ ಆದೇಶಿಸಿದೆ.
ಸಂತ್ರಸ್ತರ ಹಣೆಗಳ ಮೇಲೆ ಭೂಕಂಪನ ಎಂದು ಬರೆದ ಚೀಟಿಗಳನ್ನು ಅಂಟಿಸಲಾಗಿದೆ ಎಂಬ ಸುದ್ದಿ ಬಿತ್ತರವಾದ ಹಿನ್ನಲೆಯಲ್ಲಿ ಕಳೆದ ಸಂಜೆ ಡಿ ಎಂ ಸಿ ಎಚ್ ಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬೈದ್ಯನಾಥ್ ಸಹನಿ ತನಿಖೆ ನಡೆಸಲು ಜಿಲ್ಲಾ ಮೆಜೆಸ್ಟ್ರೆಟ್ ಅವರಿಗೆ ಆದೇಶ ನೀಡಿದ್ದಾರೆ.
ತನಿಖೆಯ ವರದಿಯ ನಂತರ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ತಾವು ಆಸ್ಪತ್ರೆಗೆ ತೆರಳುವ ವೇಳೆಗೆ ಚೀಟಿಗಳನ್ನು ತೆಗೆದುಹಾಕಲಾಗಿತ್ತು ಎಂದು ಸಹನಿ ತಿಳಿಸಿದ್ದಾರೆ. ಆದರೆ ಗಾಯಗೊಂಡವರೊಬ್ಬರು ಸ್ಟಿಕ್ಕರ್ ಅಂಟಿಸಿದ್ದರಿಂದ ತಮಗಾದ ನೋವನ್ನು ವಿವರಿಸಿದರು ಎಂದು ಅವರು ತಿಳಿಸಿದ್ದಾರೆ.
ಡಿ ಎಂ ಸಿ ಎಚ್ ಆಯುಕ್ತ ಈ ಪ್ರಕರಣಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಅವಮಾನಕಾರಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಡಿ ಎಂ ಸಿ ಎಚ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
"ಅವರು ಭೂಕಂಪನದ ಸಂತ್ರಸ್ತರು, ಟ್ಯಾಗ್ ಹಾಕಲು ಜೈಲು ಖೈದಿಗಳಲ್ಲ" ಎಂದು ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತಿಳಿಸಿದ್ದಾರೆ.
Advertisement