ಮ್ಯಾನ್‍ಹೋಲ್‍ಗಿಳಿದ ಇಬ್ಬರ ಸಾವು

ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರ ಮನೆ ಪಕ್ಕದಲ್ಲೇ ಒಳಚರಂಡಿ ಗುಂಡಿ ಸ್ವಚ್ಛಗೊಳಿಸಲು ಒಳಗೆ ಇಳಿದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ...
ಮ್ಯಾನ್ ಹೋಲ್ ನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದ ಕಾರ್ಮಿಕರನ್ನು ಸಿಬ್ಬಂದಿಗಳು ಹೊರ ತೆಗೆಯುತ್ತಿರುವುದು
ಮ್ಯಾನ್ ಹೋಲ್ ನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದ ಕಾರ್ಮಿಕರನ್ನು ಸಿಬ್ಬಂದಿಗಳು ಹೊರ ತೆಗೆಯುತ್ತಿರುವುದು
Updated on

ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರ ಮನೆ ಪಕ್ಕದಲ್ಲೇ ಒಳಚರಂಡಿ ಗುಂಡಿ ಸ್ವಚ್ಛಗೊಳಿಸಲು ಒಳಗೆ ಇಳಿದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಜೆ.ಸಿ. ನಗರದ ಜಯಮಹಲ್ ರಸ್ತೆಯಲ್ಲಿರುವ ಕೇಂದ್ರ ಲೋಕೋಪಯೋಗಿ ಇಲಾಖೆ ವಸತಿಗೃಹದ (ಸಿಪಿಡಬ್ಲ್ಯೂಡಿ) ಮುಂದೆ ಈ ದುರ್ಘಟನೆ ಸಂಭವಿಸಿದೆ. ವಿದ್ಯಾರಣ್ಯಪುರ ಸಮೀಪದ ಸಿಂಗಾಪುರ ನಿವಾಸಿ ಪ್ರಸನ್ನ (24) ಹಾಗೂ ಬಾಗಲೂರಿನ ಸೇತು (21) ಮೃತ ದುರ್ದೈವಿಗಳು. ಈ ಸಂಬಂಧ ಖಾಸಗಿ ಗುತ್ತಿಗೆದಾರ ನಾಗರಾಜು ಹಾಗೂ ಸಿಪಿಡಬ್ಲ್ಯೂಡಿ ಕಿರಿಯ ಎಂಜಿನಿಯರ್ ಬಾಲರೆಡ್ಡಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ: ಸಿಪಿಡಬ್ಲ್ಯೂಡಿ ನಿರ್ಮಿಸಿ ನಿರ್ವಹಿಸುತ್ತಿರುವ ಕೇಂದ್ರ ಆದಾಯ ತೆರಿಗೆ ಮತ್ತು ಅಬಕಾರಿ ಇಲಾಖೆ ವಸತಿಗೃಹಗಳು ಜಯಮಹಲ್ ರಸ್ತೆಯಲ್ಲಿವೆ. ಈ ಪೈಕಿ ಒಂದು ಮನೆಯ ಮೋರಿ ಕಟ್ಟಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಸಿಪಿಡಬ್ಲ್ಯೂಡಿ ಎಂಜಿನಿಯರ್ ಬಾಲಕೃಷ್ಣ ಅವರು ಖಾಸಗಿ ಗುತ್ತಿಗೆದಾರ ನಾಗರಾಜ್ ಮೂಲಕ ಕೆಲಸ ಮಾಡಿಸುತ್ತಿದ್ದರು. 11 ಗಂಟೆ ಸುಮಾರಿಗೆ ಕಾರ್ಮಿಕರು ಮನೆ ಪೈಪ್ ಸಂಪರ್ಕ ಪರಿಶೀಲಿಸಿ ಬಳಿಕ ಒಳಚರಂಡಿ ಮೋರಿಯಲ್ಲಿ ಏನಾದರೂ ಸಮಸ್ಯೆ ಇರುವ ಬಗ್ಗೆ ಪರಿಶೀಲನೆ ನಡೆಸಲು ಮುಂದಾಗಿದ್ದರು. ಪಾಲನೆಯಾಗದ ನಿಯಮ: ನಿಯಮದ ಪ್ರಕಾರ
ಜೆಟ್ಟಿಂಗ್ ಯಂತ್ರದ ಮೂಲಕವೇ ಒಳಚರಂಡಿ ಗುಂಡಿ ಪರಿಶೀಲನೆ ಹಾಗೂ ಸ್ವಚ್ಛಗೊಳಿಸುವುದನ್ನು ಮಾಡಬೇಕು. ಅದರ ಬದಲು, ಗುತ್ತಿಗೆದಾರ ನಾಗರಾಜ್ ತರಾತುರಿಯಲ್ಲಿ ಬಲವಂತ ಮಾಡಿ ಸೇತುನನ್ನು ಒಳಗೆ ಇಳಿಸಿದ್ದಾನೆ. ಸುಮಾರು 6 ಅಡಿಗೂ ಹೆಚ್ಚು ಆಳವಿರುವ ಗುಂಡಿಯೊಳಗೆ ವಿಷಾನಿಲ ತುಂಬಿಕೊಂಡಿದ್ದರಿಂದ, ಕೆಳಗಿಳಿಯುತ್ತಿದ್ದಂತೆ ಆಮ್ಲಜನಕದ ಕೊರತೆಯಿಂದ ಸೇತು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.

ಈತನನ್ನು ಮೇಲಕ್ಕೆತ್ತಲು ಒಳಗಿಳಿದ ಪ್ರಸನ್ನ ಕೂಡಾ ಆಮ್ಲಜನಕದ ಕೊರತೆಯಿಂದ ಕುಸಿದು ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರೂ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಕಂಡ
ಗುತ್ತಿಗೆದಾರ ನಾಗರಾಜ್ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ಇಬ್ಬರನ್ನೂ ಮೇಲಕ್ಕೆ ಎತ್ತಿದ್ದಾರೆ. ಅಷ್ಟೊತ್ತಿಗಾಗಲೇ ಇಬ್ಬರ ಉಸಿರಾಟವೂ ನಿಂತು ಹೋಗಿತ್ತು. ಎರಡನೆಯವನಾಗಿ ಕೆಳಗಿಳಿದಿದ್ದ ಪ್ರಸನ್ನಗೆ ಉಸಿರಾಟದ ಪ್ರಥಮ ಚಿಕಿತ್ಸೆ (ಸಿಪಿಆರ್) ಮಾಡಿ ಬದುಕಿಸಲು ಯತ್ನಿಸಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ. ಬಳಿಕ ಆಂಬುನೆಲ್ಸ್ ಮೂಲಕ ಇಬ್ಬರನ್ನು ಜೈನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

15 ಲಕ್ಷ ಪರಿಹಾರ:
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ `ಕೈಯಿಂದ ಒಳಚರಂಡಿ ಗುಂಡಿ ಸ್ವಚ್ಛಗೊಳಿಸುವುದು ನಿಷೇಧ ಮತ್ತು ಪುನರ್ವಸತಿ ಕಾಯ್ದೆ' ಅನ್ವಯ ಪ್ರಕರಣ ದಾಖಲಿಸಲಾಗಿದೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ರು.5 ಲಕ್ಷ ಪರಿಹಾರ ಹಾಗೂ ಸಿಪಿಡಬ್ಲ್ಯೂಡಿಯಿಂದ ರು.10 ಲಕ್ಷ ಪರಿಹಾರ ನೀಡಬೇಕಾಗುತ್ತದೆ ಎಂದು ಸಫಾಯಿ
ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com