
ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಇದ್ದಲ್ಲಿ `ಆಪರೇಷನ್ ಹಸ್ತ' ನಡೆಸುವ ಕುರಿತು ಕೈ ಪಾಳಯದಲ್ಲಿ ಸದ್ದಿಲ್ಲದೇ ಚರ್ಚೆ ನಡೆಯುತ್ತಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಫಲಿತಾಂಶವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಒಂದೊಮ್ಮೆ ಫಲಿತಾಂಶದಲ್ಲಿ ಕಾಂಗ್ರೆಸ್ ಮಾ್ಯಜಿಕ್ ಸಂಖ್ಯೆಯನ್ನು ಮುಟ್ಟದೇ ಹೋದರೆ ಬೇರೆ ಪಕ್ಷಗಳಿಗೆ ಆಪರೇಷನ್ ನಡೆಯುವುದು ಖಚಿತ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಪಕ್ಷಾಂತರ ನಿಷೇಧದ ಗುಮ್ಮ: ಆದರೆ, ಬಿಬಿಎಂಪಿ ಸದಸ್ಯರು ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧಿಸಿ ಗೆಲ್ಲುವುದರಿಂದ ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ. ಹೀಗಾಗಿ ಇಂಥ ಕಾನೂನಿನ ಸುಳಿಯಲ್ಲಿ ಸಿಲುಕದ ರೀತಿಯಲ್ಲಿ ಆಪರೇಷನ್ ನಡೆಸುವ ಇಕ್ಕಟ್ಟು ಸೃಷ್ಟಿಯಾಗಬಹುದು. ಒಂದು ವೇಳೆ ಪಾಲಿಗೆ ಫಲಿತಾಂಶ ಅತಂತ್ರ ಸ್ಥಿತಿ ತಂದರೆ, ಸಹಜವಾಗಿಯೇ ಆಡಳಿತ ಪಕ್ಷದ ಕಣ್ಣು ಪಕ್ಷೇತರರು ಹಾಗೂ ಜೆಡಿಎಸ್ ಮೇಲೆ ಬೀಳಲಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾದ ಸಚಿವರೊಬ್ಬರಿಗೆ ಆಪರೇಷನ್ ನಡೆಸುವ `ಮಹಾ'ಭಾರವನ್ನು ಒಪ್ಪಿಸಲಾಗಿದ್ದು, ಫಲಿತಾಂಶವನ್ನು ಆಧರಿಸಿ ಕಾರ್ಯತಂತ್ರ ನಡೆಸಿ `ಹೌದಪ್ಪ' ಎನ್ನಿಸಿಕೊಳ್ಳಲು ಆ ಸಚಿವರು ಪ್ರಯತ್ನ ನಡೆಸುವ ಸಾಧ್ಯತೆ ಇದೆ.
Advertisement