ಹುಸಿಯಾಯ್ತು ನಿರೀಕ್ಷೆ: ಘೋಷಣೆ ಆಗದ ಪಿಂಚಣಿ ಯೋಜನೆ

ಭಾರತ-ಪಾಕ್ ಯುದ್ಧದ ಸುವರ್ಣ ಮಹೋತ್ಸವ ನಡೆದುಹೋಯ್ತು, ಆದರೆ `ಸಮಾನ ಹುದ್ದೆ, ಸಮಾನ ಪಿಂಚಣಿ'ಯೋಜನೆ ಘೋಷಣೆಯಾಗಲೇ ಇಲ್ಲ...
ಭಾರತ-ಪಾಕ್ ಯುದ್ಧದ ಸುವರ್ಣ ಮಹೋತ್ಸವ
ಭಾರತ-ಪಾಕ್ ಯುದ್ಧದ ಸುವರ್ಣ ಮಹೋತ್ಸವ

ನವದೆಹಲಿ: ಭಾರತ-ಪಾಕ್ ಯುದ್ಧದ ಸುವರ್ಣ ಮಹೋತ್ಸವ ನಡೆದುಹೋಯ್ತು, ಆದರೆ `ಸಮಾನ ಹುದ್ದೆ, ಸಮಾನ ಪಿಂಚಣಿ'ಯೋಜನೆ ಘೋಷಣೆಯಾಗಲೇ ಇಲ್ಲ. ಹೌದು. 1965ರ ಯುದ್ಧ  ನಡೆದು 50 ವರ್ಷ ತುಂಬುವ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಒಆರ್‍ಒಪಿ ಜಾರಿ ಘೋಷಿಸುತ್ತಾರೆ ಎಂದು ಕಾದಿದ್ದ ಲಕ್ಷಾಂತರ ನಿವೃತ್ತ ಂಯೋಧರ ನಿರೀಕ್ಷೆ ಸುಳ್ಳಾಗಿದೆ.

ಗುರುವಾರ ರಾತ್ರಿ ಒಆರ್‍ಒಪಿಗೆ ಸಂಬಂಧಿಸಿ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಶುಕ್ರವಾರ ಸರ್ಕಾರ ಯಾವ ಘೋಷಣೆಯನ್ನೂ ಮಾಡಲಿಲ್ಲ. ಇದರಿಂದ ನಿರಾಸೆಗೊಂಡ ನಿವೃತ್ತ  ಸೇನಾನಿಗಳು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಬಹಿಷ್ಕರಿಸಿದರು.

ನಿರಶನ ಸ್ಥಳದಲ್ಲೇ ಹುತಾತ್ಮರಿಗೆ ನಮನ
ಸರ್ಕಾರದ ನಿರ್ಧಾರದಿಂದ ಆಕ್ರೋಶಗೊಂಡಿರುವ ಸೇನಾನಿಗಳು ಶುಕ್ರವಾರ ಸಭೆ ನಡೆಸಿ, ತಮ್ಮ ಮುಂದಿನ ಹಂತದ ಪ್ರತಿಭಟನೆ ಬಗ್ಗೆ ಚರ್ಚಿಸಿದರು. ಜತೆಗೆ, ಜಂತರ್ ಮಂತರ್‍ನ ನಿರಶನ ಸ್ಥಳದಲ್ಲೇ ಕುಳಿತು 1965ರ ಹುತಾತ್ಮರಿಗೆ ಗೌರವ ಸಮರ್ಪಿಸಿದರು.

2 ದಶಕಗಳ ಬೇಡಿಕೆ ಈಡೇರಲಿಲ್ಲ

ಗುರುವಾರ ರಾತ್ರಿ ನಿವೃತ್ತ ಯೋಧರ ಗುಂಪು ಮತ್ತು ಸರ್ಕಾರದ ನಡುವೆ ದೀರ್ಘಕಾಲ ಒಆರ್‍ಒಪಿ ಕುರಿತ ಚರ್ಚೆ ನಡೆಯಿತು. ಆದರೆ, ಯೋಧರ ಕೆಲವು ಬೇಡಿಕೆಗಳಿಗೆ ಸರ್ಕಾರ ಒಪ್ಪಲಿಲ್ಲ.  ಯೋಧರೂ ತಮ್ಮ ಪಟ್ಟು ಸಡಿಲಿಸದ ಕಾರಣ ಸಭೆ ವಿಫಲವಾಯಿತು. ಹೀಗಾಗಿ 2 ದಶಕಗಳಿಂದ ಒಆರ್ ಒಪಿ ಜಾರಿಗಾಗಿ ಕಾಯುತ್ತಿದ್ದ ಯೋಧರಿಗೆ ಮತ್ತೊಮ್ಮೆ ನಿರಾಸೆಯಾಯಿತು. ಇದೇ ವೇಳೆ,  ಶುಕ್ರವಾರ ನಿವೃತ್ತ ಯೋಧರ ನಿಂಯೋಗವೊಂದು ಗೃಹ ಸಚಿವ ರಾಜನಾಥ್ ರನ್ನು ಭೇಟಿಯಾಗಿ ಮತ್ತೊಮ್ಮೆ ತಮ್ಮ ಬೇಡಿಕೆಯನ್ನು ಮುಂದಿಟ್ಟಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಆದಷ್ಟು ಬೇಗನೆ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇದೇ ವೇಳೆ, ಸರ್ಕಾರ ಒಆರ್‍ಒಪಿ ಜಾರಿಗೆ ಇನ್ನಷ್ಟು ಕಾಲಾವಕಾಶ ಕೋರಿದೆ.

ಸುವರ್ಣಮಹೋತ್ಸವದಲ್ಲಿ ಹುತಾತ್ಮರಿಗೆ ನಮನ
ದೆಹಲಿಯಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 1965ರ ಯುದ್ಧದ ಸುವರ್ಣಮಹೋತ್ಸವ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೀರಯೋಧರಿಗೆ ಗೌರವ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ, ``ಭಾರತದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸುವ ಸಲುವಾಗಿ ಯೋಧರು ಎಲ್ಲ  ಅಡ್ಡಿ ಆತಂಕಗಳನ್ನು ಎದುರಿಸಿ ಗೆದ್ದರು.

1965ರ ಯುದ್ಧದ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ನಾನು ನಮ್ಮ ತಾಯಿನಾಡಿಗಾಗಿ ಹೋರಾಡಿದ ಎಲ್ಲ ವೀರ ಯೋಧರಿಗೆ ತಲೆಬಾಗಿ ನಮಿಸುತ್ತೇನೆ'' ಎಂದರು. ಇದೇ ವೇಳೆ, ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ನಾಯ ಕತ್ವವನ್ನೂ ಮೋದಿ ಕೊಂಡಾಡಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರೂ ಯೋಧರಿಗೆ  ಗೌರವ ಸಮರ್ಪಿಸಿದರು.

ಜಾರಿಗೆ ಅಡ್ಡಿಯಾಗಿರುವ ಅಂಶಗಳೇನು?

ಒಆರ್‍ಒಪಿ ವಿಚಾರದಲ್ಲಿ ಸರ್ಕಾರ ಮತ್ತು ಸೇನಾನಿಗಳ ನಡುವೆ ಸಂಧಾನ ಮೂಡದೇ ಇರಲು `ಯೋಜನೆಯ ಘೋಷಣೆ' ಮಾತ್ರ ಕಾರಣವಲ್ಲ. ಇಲ್ಲಿ ಸರ್ಕಾರಕ್ಕೆ ತಲೆನೋವಾಗಿರುವುದು ನಿವೃತ್ತ ಸೇನಾನಿಗಳು ಇಟ್ಟಿರುವ `ರೋಲಿಂಗ್ ಪೆನ್ಶನ್ ಅಡ್ಜೆಸ್ಟ್‍ಮೆಂಟ್ ಪ್ಲ್ಯಾನ್'. ಅಂದರೆ, ಪ್ರತಿ ವರ್ಷ ಪಿಂಚಣಿಯನ್ನು ಪರಿಷ್ಕರಿಸುವುದು.

ಇದಕ್ಕೆ ಉದಾಹರಣೆ ಇಲ್ಲಿದೆ
1 ಒಬ್ಬ ಕರ್ನಲ್ 2005ರಲ್ಲಿ ನಿವೃತ್ತನಾಗುತ್ತಾನೆ. ಮತ್ತೊಬ್ಬ 2015ರ ಆ.27ರಂದು ನಿವೃತ್ತನಾಗುತ್ತಾನೆ. ಈತನಿಗೆ ಸಿಗುವ ಪಿಂಚಣಿ ಸಹಜವಾಗಿ 2005ರಲ್ಲಿ ನಿವೃತ್ತನಾದವನಿಗಿಂತ ಹೆಚ್ಚಿರುತ್ತದೆ.
2 ಈಗ ಸೇನಾನಿಗಳ ಬೇಡಿಕೆಯೇನೆಂದರೆ, 2015ರಲ್ಲಿ ನಿವೃತ್ತನಾದವನಿಗೆ ಎಷ್ಟು ಪಿಂಚಣಿ ಸಿಗುತ್ತದೋ, ಅಷ್ಟೇ ಮೊತ್ತವನ್ನು ಆ ಹಿಂದೆ ನಿವೃತ್ತರಾದ(ಎಷ್ಟೇ ವರ್ಷದ ಹಿಂದಿನವರಾಗಿದ್ದರೂ ಸರಿ)  ಎಲ್ಲ ಸೇನಾನಿಗಳಿಗೂ ನೀಡಬೇಕು. ಇನ್ನು ಕೆಲವು ತಿಂಗಳ ಬಳಿಕ ಮತ್ತೊಬ್ಬ ಕರ್ನಲ್ ನಿವೃತ್ತನಾದರೆ, ಆಗ ಅವನಿಗೆ ಸಿಗುವ ಪಿಂಚಣಿಯ ಮೊತ್ತವನ್ನೇ ಮತ್ತೆ ಎಲ್ಲರಿಗೂ ಅನ್ವಯಿಸುವಂತೆ  ಪರಿಷ್ಕರಿಸಬೇಕು.
3 ಸೇನಾನಿಗಳ ಈ ಬೇಡಿಕೆ ಅಪ್ರಾಯೋಗಿಕ  ಎನ್ನುವುದು ಸರ್ಕಾರದ ವಾದ. ಆದರೂ, ಸರ್ಕಾರ ಒತ್ತಡಕ್ಕೆ ಮಣಿದು, 5 ವರ್ಷಗಳಿಗೊಮ್ಮೆ ಪಿಂಚಣಿ ಪರಿಷ್ಕರಿಸುವುದಾಗಿ ಹೇಳಿದೆ.
4 ಆದರೆ, ಪ್ರತಿ ವರ್ಷಕ್ಕೊಮ್ಮೆ ಪಿಂಚಣಿ ಪರಿಷ್ಕರಣೆಯಾಗಬೇಕು ಎನ್ನುವುದು ಸೇನಾನಿಗಳ ಪಟ್ಟು. ಇತರೆ ಎಲ್ಲ ಸರ್ಕಾರಿ ಪಿಂಚಣಿದಾರರ ಪಿಂಚಣಿಯು 10 ವರ್ಷಗಳಿಗೊಮ್ಮೆ  ಪರಿಷ್ಕರಣೆಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com