ಬಿಬಿಎಂಪಿ: ಬಿಜೆಪಿಗೆ ಮೋದಿಯೇ ಬ್ರಹ್ಮಾಸ್ತ್ರ

ಬಿಬಿಎಂಪಿಯಲ್ಲಿ ಹೇಗಾದರೂ ಬಿಜೆಪಿಯನ್ನು ದೂರ ಇಡಬೇಕೆಂದು ಕಾಂಗ್ರೆಸ್ ಹೋರಾಟ ನಡೆಸುತ್ತಿರುವಾಗಲೇ, ಬಿಜೆಪಿ ಸಹ ತಾನು ಮೇಯರ್ ಗಿರಿ ಉಳಿಸಿಕೊಳ್ಳಲು ಎಲ್ಲಾ ರೀತಿಯ ರಣತಂತ್ರಗಳನ್ನೂ ರೂಪಿಸುತ್ತಲೇ ಇದೆ...
ಬಿಬಿಎಂಪಿ: ಬಿಜೆಪಿಗೆ ಮೋದಿಯೇ ಬ್ರಹ್ಮಾಸ್ತ್ರ (ಸಂಗ್ರಹ ಚಿತ್ರ)
ಬಿಬಿಎಂಪಿ: ಬಿಜೆಪಿಗೆ ಮೋದಿಯೇ ಬ್ರಹ್ಮಾಸ್ತ್ರ (ಸಂಗ್ರಹ ಚಿತ್ರ)

ಬೆಂಗಳೂರು: ಬಿಬಿಎಂಪಿಯಲ್ಲಿ ಹೇಗಾದರೂ ಬಿಜೆಪಿಯನ್ನು ದೂರ ಇಡಬೇಕೆಂದು ಕಾಂಗ್ರೆಸ್ ಹೋರಾಟ ನಡೆಸುತ್ತಿರುವಾಗಲೇ, ಬಿಜೆಪಿ ಸಹ ತಾನು ಮೇಯರ್ ಗಿರಿ ಉಳಿಸಿಕೊಳ್ಳಲು
ಎಲ್ಲಾ ರೀತಿಯ ರಣತಂತ್ರಗಳನ್ನೂ ರೂಪಿಸುತ್ತಲೇ ಇದೆ.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ಶನಿವಾರ ಬೆಳಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೆಗೌಡರನ್ನು ಅವರ ನಿವಾಸದಲ್ಲೇ ಭೇಟಿಯಾಗಿದ್ದು ಅದರ ಮೊದಲ ಹಂತವಾಗಿತ್ತು. ಆದರೆ, ಗೌಡರು ಸ್ಪಷ್ಟ ಭರವಸೆ ನೀಡಲಿಲ್ಲ. ಈ ಕುರಿತು ನಂತರ, ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ನಾಯಕರ ಸಭೆಯಲ್ಲಿ ಪರೋಕ್ಷ ಆಕ್ರೋಶವೂ ವ್ಯಕ್ತವಾಯಿತು.

ಎರಡನೇ ಹಂತದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ನೇರವಾಗಿ ದೇವೇಗೌಡರಿಗೆ ಕರೆ ಮಾಡಿದ್ದಾರೆ. ಭವಿಷ್ಯದ ಚುನಾವಣೆ ದೃಷ್ಟಿಯಿಂದ ಮತ್ತು ಅವಕಾಶಗಳ ಬಗ್ಗೆ ಚರ್ಚಿಸಿದ್ದಾರೆ. ಈ ಹಂತದಲ್ಲಾದರೂ ಜೆಡಿಎಸ್ ಕಡೆಯಿಂದ ಧನಾತ್ಮಕ ಪ್ರತಿಕ್ರಿಯೆ ಬರುತ್ತದೆಂದು ನಿರೀಕ್ಷಿಸಿದ್ದರು. ಆದರೂ ಜೆಡಿಎಸ್ ತನ್ನ ಕಾರ್ಪೊಟರ್‍ಗಳನ್ನು ರೆಸಾರ್ಟ್‍ಗೆ ಕರೆದೊಯ್ದಿರುವ ಹಿನ್ನೆಲೆಯಲ್ಲಿ ಆ ಪ್ರಯತ್ನ ಕೂಡ ಯಶಸ್ಸು ಸಿಗದೇ ಹೋಯಿತು.

ಹಾಗಂತ ಬಿಜೆಪಿ ಸುಮ್ಮನೇ ಕೂತಿಲ್ಲ. ಕೊನೆಯ ಅಸ್ತ್ರವಾಗಿ ಮೋದಿ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸಲು ನಿರ್ಧರಿಸಿದೆ. ಈ ಅಸ್ತ್ರ ಪ್ರಯೋಗವಾದರೆ ಈವರೆಗೆ ನಡೆದಿರುವ ಎಲ್ಲಾ ಬೆಳವಣಿಗೆಗಳೂ ಬದಲಾಗಲಿವೆ ಎಂಬ ನಂಬಿಕೆ ಅದಕ್ಕಿದೆ. ಅಂದರೆ, ಬಿಬಿಎಂಪಿಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಗೆ ಕರೆ ಮಾಡುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.

ಶನಿವಾರವೇ ಮೋದಿಯವರ ಕರೆ ಬರಬಹುದೆಂದು ಊಹಿಸಲಾಗಿತ್ತು. ಆದರೆ, ರಾತ್ರಿಯವರೆಗೆ ಮೋದಿಯವರ ಕರೆ ಬಂದಿಲ್ಲ ಎಂದು ಜೆಡಿಎಸ್ ಮೂಲಗಳು ಖಚಿತಪಡಿಸಿವೆ. ಆ ಒಂದು ಫೋನ್ ಕರೆ, ಇದುವರೆಗಿನ ಎಲ್ಲಾ ಲೆಕ್ಕಾಚಾರಗಳನ್ನು ಬದಲಿಸಲಿದೆ ಎಂಬ ನಂಬಿಕೆ ಬಿಜೆಪಿಗೆ ಮಾತ್ರವಲ್ಲ, ಜೆಡಿಎಸ್‍ನ ಕೆಲ ನಾಯಕರಲ್ಲೂ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com