
ಇಂಫಾಲ್: ರಾಜ್ಯ ವಿಧಾನಸಭೆ ಮೂರು ಕಾಯ್ದೆಗಳನ್ನು ಮಂಜೂರು ಮಾಡಿದ ಹಿನ್ನಲೆಯಲ್ಲಿ ಮಣಿಪುರದಲ್ಲು ಗುಂಪು ಘರ್ಷಣೆ ಹಿಂಸಾಚಾರಕ್ಕಿಳಿದು ಮೂವರು ಮೃತಪಟ್ಟಿರುವ ವರದಿಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಚೂರಚಂದಾಪುರದಲ್ಲಿ ಸೋಮವಾರ ರಾತ್ರಿ ಈ ಗಲಭೆಗಳಾಗಿದ್ದು ಕಾನೂನು ಸುವ್ಯವಸ್ಥೆ ಕಾಪಾಡಲು ಅನಿರ್ಧಿಷ್ಟ ಕಾಲಾವಧಿಯವರೆಗೆ ಅಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಮಣಿಪುರ ಜನರ ಸುರಕ್ಷತೆ ಕಾಯ್ದೆ ೨೦೧೫, ಮಣಿಪುರ ಭೂ ಕಂದಾಯ ಮತ್ತು ಜಮೀನು ಸುಧಾರಣೆ ಕಾಯ್ದೆ (ಏಳನೇ ತಿದ್ದುಪಡಿ) ೨೦೧೫ ಮತ್ತು ಮಣಿಪುರ ಅಂಗಂಡಿ ಮುಂಗಟ್ಟು ಕಾಯ್ದೆ (ಎರಡನೇ ತಿದ್ದುಪಡಿ) ೨೦೧೫ ಈ ಕಾಯ್ದೆಗಳನ್ನು ವಿಧಾನಸಭೆಯಲ್ಲಿ ಮಂಜೂರಾದ ನಂತರ ಇದರ ವಿರುದ್ಧ ಬುಡಕಟ್ಟು ವಿದ್ಯಾರ್ಥಿಗಳನ್ನು ಒಳಗೊಂಡ ಗುಂಪು ಪ್ರತಿಭಟನೆ ನಡೆಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಅಭಿವೃದ್ಧಿ ಸಚಿವ ತೋನ್ಸಿಂಗ್ ಅವರನ್ನೂ ಒಳಗೊಂಡಂತೆ ಈ ಗುಂಪು ಐದು ಜನ ಕಾಂಗ್ರೆಸ್ ರಾಜಕಾರಿಣಿಗಳ ಮನೆಗಳ ಮೇಲೆ ದಾಳಿ ಮಾಡಿದೆ. ಅಲ್ಲದೆ ಚೂರಚಂದಾಪುರ ಉಪಾಯುಕ್ತ ಅವರ ವಾಹನಕ್ಕೂ ಬೆಂಕಿ ಹಚ್ಚಿದ್ದು, ಗುಂಪನ್ನು ಚದುರಿಸಲು ಪೊಲೀಸ ಪಡೆಗಳು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಮಯದಲ್ಲಿ ಯಾವ ರಾಜಕಾರಿಣಿಯೂ ಅವರ ಮನೆಗಳಲ್ಲಿ ಇರಲಿಲ್ಲ. ಅವರೆಲ್ಲರೂ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಲು ಇಂಫಾಲ್ ಗೆ ತೆರಳಿದ್ದರು.
ಈ ಮಂಜೂರಾದ ಕಾಯ್ದೆಗಳು, ಬುಡಕಟ್ಟು ಜನರ ರಕ್ಷಣೆಗಾಗಿ ಇರುವ ಮಣಿಪುರ ಬುಡಕಟ್ಟು ನಿರ್ದೇಶನ ಕಾಯ್ದೆ ೧೯೪೭ ಕ್ಕೆ ವಿರುದ್ಧವಾಗಿವೆ ಎಂದು ದೂರಿ ಬುಡಕಟ್ಟು ನಾಗರಿಕ ಸಮಿತಿ ಗುಂಪುಗಳು ಇವನ್ನು ವಿರೋಧಿಸಿದ್ದವು.
Advertisement