
ನವದೆಹಲಿ: ರಾಜ್ಯ ಸರ್ಕಾರ ಕಡೆಗೂ ಮಹದಾಯಿ ನ್ಯಾಯಾಧಿಕರಣಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಬರಪೀಡಿತ ಉತ್ತರ ಕರ್ನಾಟಕ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸಲು ಮಹದಾಯಿ ನದಿಯಿಂದ ಮಲಪ್ರಭಾ ಕಣಿವೆಗೆ ಏತನೀರಾವರಿ ಮೂಲಕ 7ಟಿಎಂಸಿ ನೀರು ಹರಿಸುವ ತಾತ್ಕಾಲಿಕ ಯೋಜನೆಗೆ ಅನುಮತಿ ನೀಡಿ ಮಧ್ಯಂತರ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದೆ. ಆದರೆ, ಮಹದಾಯಿ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾ.ಪಾಂಚಾಲ್ ರಜೆ ಪಡೆದಿದ್ದಾರೆ. ಸುದೀರ್ಘ ಅನಾರೋಗ್ಯದಿಂದಾಗಿ ಸದ್ಯ ಕಲಾಪ ನಡೆಸುವ ಸಾಧ್ಯತೆ ಇಲ್ಲ. ಮುಂದಿನ ನ್ಯಾಯಾಧಿಕರಣದ ಕಲಾಪ ಫೆ.23ಕ್ಕೆ ನಿಗದಿಯಾಗಿದೆ. ಆದರೆ ಮಧ್ಯಂತರ ಅರ್ಜಿಗೆ ಉತ್ತರಿಸುವಂತೆ ಗೋವಾ ಮತ್ತು ಮಹಾರಾಷ್ಟ್ರಕ್ಕೆ ನೋಟಿಸ್ ಜಾರಿ ಮಾಡಬಹುದು.
ಫೆ.23ಕ್ಕೆ ಮುನ್ನ ಆ ರಾಜ್ಯಗಳು ಉತ್ತರಿಸಿದರೆ ತ್ವರಿತವಾಗಿ ವಿಚಾರಣೆ ನಡೆದು ಮುಂದಿನ ಬೇಸಿಗೆ ವೇಳೆಗೆ ಆದೇಶ ಬರುವ ನಿರೀಕ್ಷೆ ಇದೆ. ಮಹದಾಯಿ ಕಣಿವೆ ಕೋಟ್ನಿ ಎಂಬಲ್ಲಿಂದ 7 ಟಿಎಂಸಿ ನೀರನ್ನು ಮಲಪ್ರಭೆಗೆ ಹರಿಸಬೇಕು ಎಂಬುದು ರಾಜ್ಯದ ಬೇಡಿಕೆ. 7 ಟಿಎಂಸಿ ಪೈಕಿ ಮೊದಲ ಹಂತದಲ್ಲಿ 3 ಟಿಎಂಸಿ ಬಳಸಿಕೊಳ್ಳುವ ಉದ್ದೇಶ ರಾಜ್ಯ ಸರ್ಕಾರದ್ದು. ಉಳಿದ 4 ಟಿಎಂಸಿ ನೀರನ್ನು ನಂತರ ಬಳಸಿಕೊಳ್ಳುವ ಯೋಜನೆ ಇದೆ. ಮಧ್ಯಂತರ ಅರ್ಜಿಯ ಪ್ರಮುಖ ಅಂಶ ಇದು. ರಾಜ್ಯ ಕೇಳುತ್ತಿರುವ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುತ್ತಿದೆ. ಉಭಯ ರಾಜ್ಯಗಳು ಈ ನೀರನ್ನು ಬಳಸುತ್ತಿಲ್ಲ. ಆದ್ದರಿಂದ ನಮಗೆ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ರಾಜ್ಯ ನ್ಯಾಯಾಧಿಕರಣಕ್ಕೆ ಮನವರಿಕೆ ಮಾಡಿಕೊಡಬೇಕಿದೆ.
ರಾಜ್ಯದ ಬೇಡಿಕೆಗೆ ಸಮ್ಮತಿಸಿದರೆ ರಾಜ್ಯಕ್ಕೆ ದಕ್ಕುವ ಒಟ್ಟು 24.15 ಟಿಎಂಸಿ ಪೈಕಿ 7 ಟಿಎಂಸಿ ನೀರು ಮರುಹೊಂದಿಕೆ ಮಾಡಿಕೊಳ್ಳಬಹುದು. ವಾಸ್ತವವಾಗಿ ಮಹದಾಯಿಯಲ್ಲಿ ಲಭ್ಯವಿರುವ ನೀರಿನ ಪ್ರಮಾಣದ ಬಗ್ಗೆಯೂ ತಕರಾರು ಇದೆ. 2001 ,2003ರಲ್ಲಿ ಕೇಂದ್ರ ಜಲ ಆಯೋಗ ಪ್ರಕಟಿಸಿದ ಮಾಹಿತಿ ಪ್ರಕಾರ ಮಹದಾಯಿಯಲ್ಲಿ ಲಭ್ಯ ನೀರು 199 ಟಿಎಂಸಿ. ಇದನ್ನು ಕರ್ನಾಟಕ ಮತ್ತು ಗೋವಾ ಉಭಯ ರಾಜ್ಯಗಳೂ ಒಪ್ಪಿಲ್ಲ. ಕೇವಲ 108 ಟಿಎಂಸಿ ಎಂಬುದು ಗೋವಾದ ವಾದ.
Advertisement