
ನವದೆಹಲಿ: ವಿಚಾರವಾದಿಗಳಾದ ಡಾ. ಎಂ ಎಂ ಕಲಬುರ್ಗಿ, ಗೋವಿಂದ ಪನ್ಸಾರೆ ಮತ್ತು ನರೇಂದ್ರ ದಾಭೋಲ್ಕರ್ ಹತ್ಯೆ ನಡುವೆ ಪರಸ್ಪರ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
``ಈ ಮೂವರ ಹತ್ಯೆ ನಡುವೆ ಪರಸ್ಪರ ಸಂಬಂಧವಿದೆ ಎನ್ನುವುದನ್ನು ನಿರೂಪಿಸುವ ಯಾವುದೇ ಸಾಕ್ಷ್ಯಗಳು ಈವರೆಗೆ ಸಿಕ್ಕಿಲ್ಲ'' ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಬುಧವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಬಲಪಂಥೀಯ ಸಂಘಟನೆಯಾಗಿರುವ ಸನಾತನ ಸಂಸ್ಥೆಯನ್ನು ನಿಷೇಧಿಸುವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ರಿಜಿಜು ಉತ್ತರಿಸಿದ್ದಾರೆ. `ಶಾಖೋಪಶಾಖೆಗಳನ್ನು ಹೊಂದಿರುವ ಎಲ್ಲ ಸಂಘಟನೆಗಳ ಮೇಲೆಯೂ ಶಾಂತಿ ಮತ್ತು ಕೋಮುಸೌಹಾರ್ದತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಕಣ್ಗಾವಲು ಇಡಲಾಗುತ್ತದೆ ಮತ್ತು ಅಗತ್ಯ ಬಿದ್ದಾಗ ಕ್ರಮ ಕೈಗೊಳ್ಳಲಾಗುತ್ತದೆ'' ಎಂದು ತಿಳಿಸಿದ್ದಾರೆ.
ಪನ್ಸಾರೆ ಹತ್ಯೆ ಹಿನ್ನಲೆಯಲ್ಲಿ ಸನಾತನ ಸಂಸ್ಥೆ ಕಾರ್ಯಕರ್ತನೊಬ್ಬನನ್ನು ಬಂಧಿಸಲಾಗಿತ್ತು. ಆರೋಪಿ ತನ್ನ ಕಾರ್ಯಕರ್ತ ಎಂದು ಒಪ್ಪಿಕೊಂಡಿದ್ದ ಸಂಸ್ಥೆ, ಹತ್ಯೆಯಲ್ಲಿ ಅವರ ಪಾತ್ರ ತಳ್ಳಿಹಾಕಿತ್ತು. ಎಡಪಂಥೀಯ ಲೇಖಕ ಪನ್ಸಾರೆ ಅವರ ಮೇಲೆ ಕಳೆದ ಫೆ.16ರಂದು ದುಷ್ಕರ್ಮಿಗಳು ಗುಂಡಿನದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರು ಐದು ದಿನಗಳ ನಂತರ ಮೃತಪಟ್ಟಿದ್ದರು. ದಾಭೋಲ್ಕರ್ ಅವರನ್ನು 2013ರ ಆ.20ರಂದು ಪುಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಹಿರಿಯ ಸಂಶೋಧಕ ಡಾ ಎಂ ಎಂ ಕಲಬುರ್ಗಿ ಅವರನ್ನು ಧಾರವಾಡದ ಅವರ ನಿವಾಸದಲ್ಲಿ ಕಳೆದ ಆ.30ರಂದು ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ.
ರಿಜಿಜು ಹೇಳಿದ್ದು
-ರಾಜ್ಯಸಭೆಯಲ್ಲಿ ಲಿಖಿತ ಉತ್ತರ ಕೊಟ್ಟ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ
-ಮೂವರ ಹತ್ಯೆ ನಡುವೆ ಸಾಮ್ಯತೆ ಇದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ
-ಸನಾತನ ಸೇರಿದಂತೆ ಎಲ್ಲ ಸಂಸ್ಥೆಗಳ ಮೇಲೆ ಸರ್ಕಾರದ ಕಣ್ಗಾವಲು
Advertisement