
ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಅವರು ತಮ್ಮ ಸ್ಥಾನಕ್ಕೆ ನೀಡಿದ್ದ ರಾಜಿನಾಮೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಗೀಕರಿಸಬಾರದಿತ್ತು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರು ಮಂಗಳವಾರ ಹೇಳಿದ್ದಾರೆ.
ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಸಂಬಂಧ ಇಂದು ತಮ್ಮ ಸ್ಥಾನಕ್ಕೆ ನ್ಯಾ.ಭಾಸ್ಕರರಾವ್ ರಾಜಿನಾಮೆ ನೀಡಿದ್ದರು. ಅದನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ನ್ಯಾ,ಸಂತೋಷ್ ಹೆಗ್ಡೆ ಅವರು, ರಾಜ್ಯಪಾಲರು ವೈ.ಭಾಸ್ಕರರಾವ್ ರಾಜಿನಾಮೆಯನ್ನು ಅಂಗೀಕರಿಸಬಾರದಿತ್ತು. ಈ ಸಮಯದಲ್ಲಿ ರಾಜಿನಾಮೆ ನೀಡಿ ಭಾಸ್ಕರ ರಾವ್ ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದರು.
ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಲೋಕಾಯುಕ್ತ ಪದಚ್ಯುತಿ ನಿರ್ಣಯವನ್ನು ಮಂಡನೆ ಮಾಡಿ ಸದನದ ಒಪ್ಪಿಗೆ ಪಡೆಯಲಾಗಿದೆ. ಹೈಕೋರ್ಟ್ ಈ ನಿರ್ಣಯದ ಆಧಾರದ ಮೇಲೆ ತನಿಖೆಗೆ ಸಮಿತಿಯನ್ನು ರಚನೆ ಮಾಡಬೇಕಾಗಿತ್ತು. ಇಂತಹ ಸಮುದಲ್ಲಿ ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ರಾಜಿನಾಮೆ ನೀಡಿದ್ದಾರೆ ಎಂದು ನಿವೃತ್ತ ಲೋಕಾಯುಕ್ತರು ಹೇಳಿದ್ದಾರೆ.
Advertisement