'ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್' ನಿಂದ 'ಚಡ್ಡಿ ಬ್ಯೂರೋ ಆಫ್ ಇನ್ವೆಸ್ಟಿಗೇಶನ್': ಟ್ವಿಟ್ಟರಾಟಿ ಲೇವಡಿ
ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಸಂಸ್ಥೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಚೇರಿ ಮೇಲೆ ದಾಳಿ ನಡೆಸಿದೆ ಎಂಬ ಆರೋಪ ಪ್ರತ್ಯೋರೋಪ ಮಂಗಳವಾರ ಬೆಳಗ್ಗಿನಿಂದಲೂ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು ಸಾಮಾಜಿಕ ಅಂತರ್ಜಾಲ ತಾಣ ತನ್ನದೇ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದೆ.
ಟ್ವಿಟ್ಟರ್ ಮತ್ತು ಫೇಸ್ಬುಕ್ ಗಳಲ್ಲಿ ಹಲವು ಬಳಕೆದಾರರು ಸಿಬಿಐ ಸಂಸ್ಥೆ 'ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್' ನಿಂದ 'ಚಡ್ಡಿ ಬ್ಯೂರೋ ಆಫ್ ಇನ್ವೆಸ್ಟಿಗೇಶನ್' ಆಗಿದೆ ಎಂದು ಲೇವಡಿ ಮಾಡಿದ್ದಾರೆ. ಹಿಂದೆ ಸಿಬಿಐ ಕಾಂಗ್ರೆಸ್ ಹಿಡಿತದಲ್ಲಿದೆ ಆದುದರಿಂದ ಅದು 'ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್' ಅಲ್ಲ ಬದಲಾಗಿ 'ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್' ಎಂದು ಬಿಜೆಪಿ ಪಕ್ಷ ಹಲವಾರು ಬಾರಿ ಕುಟುಕಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಆದರೆ ಈಗಿನ ಕೇಂದ್ರ ಸರ್ಕಾರ 'ಆರ್ ಎಸ್ ಎಸ್' ಹಿಡಿತದಲ್ಲಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹಲವರು ಆರ್ ಎಸ್ ಎಸ್ ಸಮವಸ್ತ್ರವಾದ ಚಡ್ಡಿಯನ್ನು ಸಿಬಿಐನ ಮೊದಲ ಅಕ್ಷರಕ್ಕೆ ವಿಸ್ತರಣೆಯಾಗಿ ಬಳಸಿ ತನ್ನದೇ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಸಿಬಿಐ ಅರವಿಂದ್ ಕೆಜ್ರಿವಾಲ್ ಅವರ ಕಚೇರಿಯ ಮೇಲೆ ದಾಳಿ ನಡೆಸಿಲ್ಲ ಎಂಬ ಸ್ಪಷ್ಟನೆ ನೀಡಿದ್ದರೂ ಇದನ್ನು ಅಲ್ಲಗೆಳೆದಿರುವ ಕೇಜ್ರಿವಾಲ್, ಇದು ಪ್ರಧಾನಿ ಮೋದಿ ಅವರು ರಾಜಕೀಯ ದುರುದ್ದೇಶದಿಂದ ಮಾಡಿಸಿರುವ ಕೃತ್ಯ ಮತ್ತು ಅವರು ಹೇಡಿ, ಸೈಕೋಪಾತ್ ಎಂದು ಬೆಳಗ್ಗೆ ಟ್ವೀಟ್ ಮಾಡಿದ್ದರು. ಇದಕ್ಕೆ ಬಿಜೆಪಿ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ