ದೆಹಲಿಯಲ್ಲಿ ಐಶಾರಾಮಿ ಕಾರು, 10 ವರ್ಷ ಹಳೆಯ ಟ್ರಕ್ ಗೆ ನಿಷೇಧ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಹತ್ವದ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ರಾಷ್ಟ್ರ ರಾಜಧಾನಿಯಲ್ಲಿ 2000 ಸಿಸಿಗಿಂತ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಹತ್ವದ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ರಾಷ್ಟ್ರ ರಾಜಧಾನಿಯಲ್ಲಿ 2000 ಸಿಸಿಗಿಂತ ಮೇಲಿನ ಡೀಸೆಲ್ ಎಸ್‍ಯುವಿಗಳ ನೋಂದಣಿ ಹಾಗೂ 10 ವರ್ಷ ಹಳೆಯ ಟ್ರಕ್ ಗಳ ಓಡಾಟ ನಿಷೇಧಿಸಿದೆ.

ಡೀಸೆಲ್ ಕಾರುಗಳನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು  ನ್ಯಾಯಾಧಿಕರಣ ಹೊರಡಿಸಿದ ಆದೇಶದ ವಿರುದ್ಧ ಕಾರು ಡೀಲರ್ಗಳು ಸಲ್ಲಿಸಿದ್ಧ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, 2016ರ ಮಾರ್ಚ್ 31ರವರೆಗೆ ಐಶಾರಾಮಿ ಕಾರುಗಳ ನೋಂದಣಿ ಹಾಗೂ 10 ವರ್ಷ ಹಳೆಯ ಟ್ರಕ್ ಗಳ ಸಂಚಾರಕ್ಕೆ ನಿರ್ಬಂದ ಹೇರಿದೆ. ಅಲ್ಲದೆ ಈ ನಿರ್ಧಾರದಿಂದ ಸಾಮಾನ್ಯ ಜನಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

ವಾಯುಮಾಲಿನ್ಯದಿಂದ ಜನರ ಬದುಕೇ ದುಸ್ತರವಾಗಿದೆ. ಆದರೆ, ನೀವು ಕಾರುಗಳ ಮಾರಾಟದಲ್ಲೇ  ಆಸಕ್ತಿ ವಹಿಸುತ್ತಿದ್ದೀರಿ ಎಂದು ನಿನ್ನೆ ಡೀಲರ್‍ಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಕೋರ್ಟ್, ಶ್ರೀಮಂತರು ವಾತಾವರಣವನ್ನು ಮಲಿನಗೊಳಿಸುತ್ತಾ ಎಸ್‍ಯುವಿಗಳಲ್ಲಿ ಸಂಚರಿಸುವ ಅಗತ್ಯವಿಲ್ಲ ಎಂದಿತ್ತು.

ಟ್ರಕ್‍ಗಳಿಗೂ ನಿಷೇಧ: 2005ಕ್ಕಿಂತ ಹಿಂದೆ ನೋಂದಣಿಯಾದ ಟ್ರಕ್ಗಳ ದೆಹಲಿ ಪ್ರವೇಶ ನಿಷೇಧಕ್ಕೂ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ರಾಷ್ಟ್ರ ರಾಜಧಾನಿ ಪ್ರವೇಶಿಸುವ ಟ್ರಕ್ಗಳ ಹಸಿರು  ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾಪಕ್ಕೂ ಒಪ್ಪಿಗೆ ಸೂಚಿಸಿದೆ. ಅದರಂತೆ, ಲಘು ವಾಣಿಜ್ಯ ವಾಹನಗಳ ಪರಿಸರ ಪರಿಹಾರ ಸೆಸ್ ಅನ್ನು ರು.700 ರಿಂದ ರು.1400ಕ್ಕೆ, ಭಾರಿ ವಾಣಿಜ್ಯ ವಾಹನಗಳ  ಸೆಸ್ ಅನ್ನು ರು.1300ರಿಂದ ರು.2600ಕ್ಕೆ ಏರಿಕೆ ಮಾಡಲಾಗಿದೆ. ಕೇವಲ ಸಿಎನ್‍ಜಿ ಆಧರಿತ ಟ್ಯಾಕ್ಸಿಗಳಷ್ಟೇ ದೆಹಲಿಯಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳಿ. ದೆಹಲಿ ಮತ್ತು ರಾಷ್ಟ್ರೀಯ  ಹೆದ್ದಾರಿಗಳಲ್ಲಿ ಯೂರೋ 4 ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡಿ. ನಿರ್ಮಾಣ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದೂ ಸುಪ್ರೀಂ ಸೂಚಿಸಿದೆ.

ಇದೇ ವೇಳೆ, ದೆಹಲಿ ಸರ್ಕಾರದ ಸಮಬೆಸ ಸಂಖ್ಯೆಯ ಯೋಜನೆಗೆ ಬೆಂಬಲ ವ್ಯಕ್ತಪಡಿಸಿರುವ ನ್ಯಾಯಾಲಯ, ``ಈ ನಿಯಮದಿಂದ ಸಹಾಯವಾಗುವುದಾದರೆ ನಿಶ್ಚಿಂತೆಯಿಂದ ಜಾರಿ ಮಾಡಿ.  ಆದರೆ, ಮೊದಲು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿ, ನಂತರ ಭವಿಷ್ಯದ ಕಾರ್ಯಯೋಜನೆ ಬಗ್ಗೆ ನಿರ್ಧರಿಸಿ'' ಎಂದಿದೆ. ನೀವೇ ನಿಯಮಾವಳಿಗಳನ್ನು ರಚಿಸುತ್ತೀರಿ. ನೀವೇ ಆಡಳಿತ  ನಡೆಸುತ್ತೀರಿ. ಹೀಗಿರುವಾಗ ದೆಹಲಿಯ ಮಾಲಿನ್ಯವನ್ನು ನಿಯಂತ್ರಿಸಿ, ನೀವೇ ಅದರ ಕ್ರೆಡಿಟ್ ತೆಗೆದುಕೊಳ್ಳಬಾರದೇಕೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com