ಭಾರತಿ ಅರಸು ನಿರಪರಾಧಿ: ಹೈ

ರಾಜ್ಯಾದ್ಯಂತ ತೀವ್ರ ಕುತೂಹಲ ಸೃಷ್ಟಿಸಿದ್ದ ವಕೀಲೆ ಚಿತ್ರಲೇಖಾ ಅರಸ್ ಕೊಲೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರ ಪುತ್ರಿ ಭಾರತಿ...
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಸೃಷ್ಟಿಸಿದ್ದ ವಕೀಲೆ ಚಿತ್ರಲೇಖಾ ಅರಸ್ ಕೊಲೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರ ಪುತ್ರಿ ಭಾರತಿ ಅರಸು ಸೇರಿದಂತೆ ಮೂವರನ್ನು ನಿರಪರಾಧಿ ಎಂದು ಅಧೀನ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ.

ಪ್ರಕರಣದ ಆರೋಪಿಗಳಾದ ಭಾರತಿ ಅರಸ್, ಅವರ ಸಹಚರರಾದ ಟಿ. ಮಧುಕುಮಾರ್ ಹಾಗೂ ಐ.ಎನ್.ಚಂದ್ರಕಾಂತ್ ಅವರನ್ನು ನಗರದ ಒಂದನೇ ತ್ವರಿತ ನ್ಯಾಯಾಲಯ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ 2010ರ ಮೇ 27ರಂದು ನಿರಪರಾಧಿಗಳು ಎಂದು ಘೋಷಿಸಿತ್ತು. ಅಧೀನ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಚಿತ್ರಲೇಖಾ ಅವರ ತಾಯಿ ಶಾರದಾ ಅರಸ್ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಚ್. ಬಿಳ್ಳಪ್ಪ ಮತ್ತು ನ್ಯಾ. ಕೆ.ಎನ್.ಫಣೀಂದ್ರ ಅವರಿದ್ದ ವಿಭಾಗೀಯ ಪೀಠ, ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಮೇಲ್ಮನವಿ ಅರ್ಜಿ ವಜಾಗೊಳಿಸಿದೆ. ಚಿತ್ರಲೇಖಾ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳು ಸಂಗ್ರಹಿಸಿದ ದಾಖಲೆಗಳು ಹಾಗೂ ಸಾಕ್ಷಿಗಳ ಹೇಳಿಕೆಗಳು, ಮೃತದೇಹದ ಫೋಟೋ ಹಾಗೂ ವಿಡಿಯೋ
ತುಣುಕುಗಳನ್ನು ಆಧರಿಸಿ ಅಧೀನ ನ್ಯಾಯಾಲಯ ಭಾರತಿ ಅರಸ್ ಹಾಗೂ ಇತರೆ ಆರೋಪಿಗಳನ್ನು ಖುಲಾಸೆ ಮಾಡಿತ್ತು. 'ಈ ಆದೇಶದಲ್ಲಿ ಹೈಕೋರ್ಟ್ ಏಕೆ ಮಧ್ಯ ಪ್ರವೇಶ ಮಾಡಬೇಕು? ಎಂಬುದರ ಕುರಿತು ಸಕಾರಾತ್ಮಕ ಅಂಶಗಳು ನಮಗೆ ಕಂಡುಬಂದಿಲ್ಲ. ಹೀಗಾಗಿ ಅಧೀನ ನ್ಯಾಯಾಲಯದ ತೀರ್ಪಿನಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ,'' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

'ಸಾಕ್ಷ್ಯಗಳಲ್ಲಿ ಲೋಪವಿದೆ': 'ಪ್ರಕರಣದ ತನಿಖೆಯಲ್ಲಿ ಅಧಿಕಾರಿಗಳು ಸಂಗ್ರಹಿಸಿದ ಸಾಕ್ಷ್ಯಾಧಾರಗಳಲ್ಲಿ ಲೋಪವಿದೆ. ಸಾಕ್ಷಿಗಳ ಹೇಳಿಕೆಗಳು ಪ್ರಾಸಿಕ್ಯೂಷನ್‍ಗೆ ಪೂರಕವಾಗಿಲ್ಲ ಎಂಬ ನಿರ್ಧಾರಕ್ಕೆ ಅಧೀನ ನ್ಯಾಯಾಲಯ ಬಂದಿರುವುದು ಸೂಕ್ತವಾಗಿದೆ ಎಂದು ವಿಭಾಗೀಯ ಪೀಠ ಹೇಳಿತು. ಅಲ್ಲದೆ, ರಾಜ್ಯ ಸರ್ಕಾರ ಹಾಗೂ ಶಾರದಾ ಅರಸ್ ಅವರ ಮೇಲ್ಮನವಿಯನ್ನು ವಜಾಗೊಳಿಸಿತು.

ಏನಿದು ಪ್ರಕರಣವೇನು?: ನಿವೃತ್ತ ನ್ಯಾಯಮೂರ್ತಿ ಎಂ.ಪಿ. ಚಂದ್ರಕಾಂತ ರಾಜ್ ಅರಸ್ ರ ಪುತ್ರಿ ಚಿತ್ರಲೇಖಾ ಅರಸ್ 2004 ಜನವರಿ  9 ರಂದು ನಿಗೂಢವಾಗಿ ಕಣ್ಮರೆಯಾಗಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡದ್ದ ಪೊಲೀಸರಿಗೆ ಘಟನೆ ನಡೆದ 2 ತಿಂಗಳ ಬಳಿಕ ಶಿರಾಡಿ ಘಾಟ್‍ನ ಮಾರನಹಳ್ಳಿ ಕೆಂಪುಹೊಳೆ ಪ್ರಪಾತದ ಬಂಡೆ ಮೇಲೆ ಅಸ್ಥಿ ಪಂಜರ ಪತ್ತೆಯಾಗಿದ್ದವು. ಇದರ ಆಧಾರದ ಮೇಲೆ ತನಿಖೆ ಮುಂದುವರಿಸಿದ ಪೊಲೀಸರು ಪ್ರಕರಣದಲ್ಲಿ ಭಾರತಿ ಅರಸ್  ಕೈವಾಡ ಶಂಕಿಸಿ ಬಂಧಿಸಿದ್ದರು. ಆಸ್ತಿ ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಚಿತ್ರಲೇಖ ಸಹೋದರ ಸಂಬಂಧಿ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಪುತ್ರಿ ಭಾರತಿ ಅರಸ್ ಕೊಲೆ ಮಾಡಿದ್ದಾರೆ ಎಂದು ಸಾಂದರ್ಭಿಕ ಸಾಕ್ಷಿ ಆಧರಿಸಿ ಭಾರತಿ ಅರಸ್ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. 6 ವರ್ಷಗಳ ಕಾಲ ಸುಧೀರ್ಘ ವಿಚಾರಣೆ ನಡೆಸಿದ ಒಂದನೇ ತ್ವರಿತ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಭಾರತಿ ಮತ್ತು ಅವರ ಇಬ್ಬರು ಸಹಚರರಾದ ಮಧುಕುಮಾರ್ ಹಾಗೂ ಚಂದ್ರಕಾಂತ್ ರನ್ನು ನಿರಪರಾಧಿ ಎಂದು 2010ರ ಮೇ 27ರಂದು ಘೋಷಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com