
ನವದೆಹಲಿ: ನಿರ್ಭಯಾ ಗ್ಯಾಂಗ್‍ರೇಪ್ ಪ್ರಕರಣದ ಬಾಲಾಪರಾಧಿ ನಿಗದಿಯಂತೆ ಭಾನುವಾರ ಸಂಜೆ ವೀಕ್ಷಣಾಲಯದಿಂದ ಬಿಡುಗಡೆಯಾಗಿದ್ದು, ಭದ್ರತಾ ದೃಷ್ಟಿಯಿಂದ ಆತನನ್ನು ಸರ್ಕಾರೇತರ ಸಂಸ್ಥೆಯೊಂದರ (ಎನ್ಜಿಒ) ಸುಪರ್ದಿಗೆ ನೀಡಿ, ರಹಸ್ಯ ಸ್ಥಳಕ್ಕೆ ಕಳಿಸಲಾಗಿದೆ.
ಗ್ಯಾಂಗ್‍ರೇಪ್‍ಗೆ ಬಲಿಯಾದ ಯುವತಿ ಜ್ಯೋತಿ ಸಿಂಗ್ ಅಲಿಯಾಸ್ ನಿರ್ಭಯಾಳ ಪೊಷಕರು ಹಾಗೂ ಸಾವಿರಾರು ಮಂದಿ ಮಹಿಳಾ ಪರ ಹೋರಾಟಗಾರರ ವಿರೋಧದ ನಡುವೆಯೂ ಅತ್ಯಾಚಾರಿ, 3 ವರ್ಷಗಳ ವೀಕ್ಷಣಾಲಯ ವಾಸ ಮುಗಿಸಿ ಬಂಧಮುಕ್ತನಾಗಿ ಹೊರ ಜಗತ್ತಿಗೆ ಕಾಲಿಟ್ಟಿದ್ದಾನೆ. ಆತನ ಜೀವಕ್ಕೆ ಅಪಾಯವಿದೆ ಎಂಬ ಹಿನ್ನೆಲೆಯಲ್ಲಿ ಹಾಗೂ ಭದ್ರತಾ ಕಾರಣಕ್ಕಾಗಿ ಎನ್‍ಜಿಒ ವಶಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ. ``ಬಾಲಾಪರಾಧಿಯನ್ನು ಎನ್‍ಜಿಒ ವಶಕ್ಕೆ ವಹಿಸಿದ್ದೇವೆ, ನಮ್ಮ ಬಳಿ ಆತ ಇಲ್ಲ,'' ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ: 2012ರ ಡಿಸೆಂಬರ್ 16ರಂದು ದೆಹಲಿಯ ಬಸ್‍ನಲ್ಲಿ ನಡೆದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಜ್ಯೋತಿ ಸಿಂಗ್ ಗ್ಯಾಂಗ್‍ರೇಪ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅತ್ಯಾಚಾರ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿ ಆಕೆಯ ಸಾವಿಗೂ ಕಾರಣರಾದ ಆರು ಮಂದಿ ಅಪರಾಧಿಗಳ ಪೈಕಿ ಅಂದು ಅಪ್ರಾಪ್ತನಾಗಿದ್ದ ಬಾಲಾಪರಾಧಿಗೆ ಈಗ 20 ವರ್ಷ. ಇತರ ಐವರಲ್ಲಿ ಒಬ್ಬ ತಿಹಾರ್ ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದ. ಉಳಿದ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಪ್ರಕರಣದ ಪ್ರಮುಖ ಆರೋಪಿ ಬಾಲಾಪರಾಧಿಯನ್ನು ಬಿಡುಗಡೆ ಮಾಡದಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಕೋರ್ಟ್ ಈಗಿರುವ ಕಾನೂನು ಅಡಿಯಲ್ಲಿ ಅದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಬಿಡುಗಡೆಗೆ ತಡೆಯೊಡ್ಡಲು ನಿರಾಕರಿಸಿತ್ತು.
ಈ ನಡುವೆ ಬಿಡುಗಡೆಗೆ ಮುನ್ನಾ ದಿನ ಶನಿವಾರ ರಾತ್ರಿ ಬಾಲಾಪರಾಧಿಯನ್ನು ಬಿಡುಗಡೆ ಮಾಡದಂತೆ ಕೋರಿ ದೆಹಲಿ ಮಹಿಳಾ ಆಯೋಗ ಕೋರ್ಟ್‍ಗೆ ತುರ್ತು ಅರ್ಜಿ ಸಲ್ಲಿಸಿತ್ತು. ರಾತ್ರಿ 2ಗಂಟೆಗೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಬಿಡುಗಡೆಗೆ ತಡೆ ನೀಡಲು ನಿರಾಕರಿಸಿ, ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು. ಈ ನಡುವೆ ಮಹಿಳಾ ಆಯೋಗ ರಾಷ್ಟ್ರಪತಿ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ, ಬಾಲಾಪರಾಧ ನ್ಯಾಯಮಂಡಳಿಗೆ ಪತ್ರ ಬಿಡುಗಡೆ ವಿರೋಧಿಸಿ ಬರೆದಿದ್ದಾರೆ.
ಬಾಲಾಪರಾಧ ನ್ಯಾಯ ಕಾಯ್ದೆ ಪ್ರಕಾರ ಬಾಲಾಪರಾಧ ನ್ಯಾಯ ಮಂಡಳಿಯ ವಶದಿಂದ ಆತ ಬಿಡುಗಡೆಗೊಳ್ಳಬಹುದು. ಆದರೆ, ಆತನ ಮಾನಸಿಕ ಸ್ಥಿತಿ, ಸುಧಾರಣೆ ಕುರಿತು ಪುನರ್ವಸತಿ ಸಮಿತಿ ತನ್ನ ತೀರ್ಮಾನ ತಿಳಿಸುವವರೆಗೆ ಆತನ್ನು ಮುಕ್ತವಾಗಿ ಬಿಡಲಾಗದು.
-ಸುಬ್ರಮಣಿಯನ್ ಸ್ವಾಮಿ
ಬಿಡುಗಡೆ ವಿರುದ್ಧ ಅರ್ಜಿದಾರ, ಬಿಜೆಪಿ ನಾಯಕ
ನಮ್ಮ ವ್ಯವಸ್ಥೆ ಸುಧಾರಿಸಲು ಇನ್ನೂ ಎಷ್ಟು ಮಂದಿ ನಿರ್ಭಯಾರು ಜೀವ ತೆರಬೇಕು. ಅತ್ಯಾಚಾರಿಯನ್ನು ಯಾವ ಕಾರಣಕ್ಕೂ ಬಿಡುಗಡೆ ಮಾಡಬಾರದಿತ್ತು.
-ಸ್ವಾತಿ ಮಲಿವಾಳ್
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ
Advertisement