ಹುಸಿಯಾಯ್ತು ನಿರೀಕ್ಷೆ: ಅಜ್ಞಾತ ಸ್ಥಳಕ್ಕೆ ಬಾಲಾಪರಾಧಿ
ನವದೆಹಲಿ: ಬಾಲಾಪರಾಧಿಯ ಬಿಡುಗಡೆ ಮಾಡಕೂಡದು ಎಂದು ದೆಹಲಿಯ ಮಹಿಳಾ ಆಯೋಗ ಸಲ್ಲಿಸಿದ್ದ ತುರ್ತು ಅರ್ಜಿಯ ಕುರಿತಂತೆ ಶನಿವಾರ ಮಧ್ಯರಾತ್ರಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಜಾ ಅವಧಿಯ ಪೀಠ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆತ ಬಿಡುಗಡೆ ಹೊಂದಿದ್ದಾನೆ.
ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದರಿಂದ ದೆಹಲಿ ಪೊಲೀಸರು ಆತನನ್ನು ಬಿಡುಗಡೆ ಮಾಡಲಾರರು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಳ್ ಹಾಗೂ ಜ್ಯೋತಿ ಸಿಂಗ್ ಪೊಷಕರು ನಿರೀಕ್ಷಿಸಿದ್ದರು. ಪೊಷಕರು, ಮಹಿಳಾ ಸಂಘಟನೆಗಳಿಂದ ಭಾರಿ ಪ್ರತಿಭಟನೆ ನಿರ್ಭಯಾ ಪೊಷಕರೊಂದಿಗೆ ಹಲವರು ಶನಿವಾರ ಸಂಜೆಯೇಧರಣಿ ಆರಂಭಿಸಿದ್ದರು. ಧರಣಿ ನಿರತರನ್ನು ಕೆಲ ಕಾಲ ವಶಕ್ಕೆ ಪಡೆದಿದ್ದ ಪೊಲೀಸರು ಆ ಬಳಿಕ ಬಿಡುಗಡೆ ಮಾಡಿದ್ದರು.
ಭಾನುವಾರ ಬೆಳಗ್ಗೆಯಿಂದಲೇ ಇಂಡಿಯಾ ಗೇಟ್ ಬಳಿ ಮತ್ತೆ ನಿರ್ಭಯಾ ಪೊಷಕರು ಸಾವಿರಾರು ಮಂದಿಯ ಬೆಂಬಲದೊಂದಿಗೆ ಭಾರಿ ಪ್ರತಿಭಟನೆ ಆರಂಭಿಸಿದರು. ಸಂಜೆ 5 ಗಂಟೆಗೆ ಅತ್ತ ಬಾಲಾಪರಾಧಿ ಬಿಡುಗಡೆಯಾಗುತ್ತಲೇ ಇತ್ತ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ನಿರ್ಭಯಾ ತಾಯಿಗೆ ಗಾಯಗಳಾದವು.
ಆತ ಬಿಡುಗಡೆಯಾಗುತ್ತಾನೆಂಬುದು ಎಲ್ಲರಿಗೂ ಗೊತ್ತಿತ್ತು. ಅದು ಗೊತ್ತಿದ್ದರೂ ಅದನ್ನು ತಡೆಯಲು ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳಲಿಲ್ಲ. ನಮ್ಮ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದವು.
-ಆಶಾ ದೇವಿ
ನಿರ್ಭಯಾ ತಾಯಿ
ನೀವು ಪ್ರತಿಭಟನೆ ಮಾಡಿ, ಲಾಠಿ ಏಟು ತಿಂದಾಗಲೇ ನಮ್ಮ ಸರ್ಕಾರಗಳು ನಿಮ್ಮ ದನಿಗೆ ಕಿವಿಗೊಡುವುದು. ಇಲ್ಲವಾದರೆ ನಿಮ್ಮ ನೋವನ್ನು ಕೇಳಲಾರರು. ಹಾಗಾಗಿ ನಾವು ಈಗ ಅಸಹಾಯಕರು.
-ಬದ್ರಿ ಸಿಂಗ್ ನಿರ್ಭಯಾ ತಂದೆ