
ನವದೆಹಲಿ : ದೆಹಲಿ ಆಡಳಿತಾರೂಢ ಪಕ್ಷವಾದ ಆಮ್ ಆದ್ಮಿ ಪಕ್ಷ (ಆಪ್)ಕ್ಕೆ ಅಕ್ರಮವಾಗಿ ವಿದೇಶದಿಂದಲೂ ಹಣ ಹರಿದು ಬಂದಿದೆ ಎಂಬ ಆರೋಪವನ್ನಾಧರಿಸಿ ಕೇಂದ್ರ ಸರ್ಕಾರ ನಿಯೋಜಿಸಿದ ತನಿಖಾ ತಂಡ ತನಿಖೆ ನಡೆಸಿ ವರದಿ ಸಲ್ಲಿಸಿದೆ.
ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿದೇಶಗಳಿಂದ ಹಣವನ್ನು ಪಡೆಯುವ ವೇಳೆ ವಿದೇಶಿ ಹಣ ಸಂಗ್ರಹ ನಿಬಂಧನೆ ಕಾಯ್ದೆಯ ಉಲ್ಲಂಘನೆ ಆಗಿದೆ ಎಂಬ ಆರೋಪ ಆಪ್ ಮೇಲಿತ್ತು. ವಿದೇಶದಿಂದ ಆಪ್ ಹಣ ಸಂಗ್ರಹಿಸುತ್ತಿದೆ ಎಂದು ಆರೋಪಿಸಿ ನ್ಯಾಯವಾದಿ ಎಂ.ಎಲ್ ಶರ್ಮಾ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸೇರಿದಂತೆ ಇನ್ನಿತರರ ವಿರುದ್ಧ್ಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಆರೋಪ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಪಕ್ಷದ ಅಕೌಂಟ್ ಬುಕ್‌ಗಳ ಪರಿಶೀಲನೆ ನಡೆಸಲು ಆದೇಶ ನೀಡಿಸಿತ್ತು.
ಆದಾಗ್ಯೂ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಪೀಠ ಕಾಯ್ದಿರಿಸಿ, ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶ ನೀಡಿತ್ತು.
ಈ ಬಗ್ಗೆ ತನಿಖೆ ನಡೆಸಿದ ನಂತರ ತನಿಖಾ ತಂಡ ವರದಿಯನ್ನು ವಿಭಾಗೀಯ ಪೀಠದ ಮುಖ್ಯ ನ್ಯಾಯಾಧೀಶ ಜಿ ರೋಹಿಣಿ ಮತ್ತು ನ್ಯಾಯಾಧೀಶ ಆರ್.ಎಸ್ ಎಂಡ್‌ಲೋ ಅವರಿಗೆ ಬುಧವಾರ ಸಲ್ಲಿಸಿತ್ತು. ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ ತನಿಖಾ ತಂಡ ಆಪ್ ವಿದೇಶಿ ಹಣ ಸಂಗ್ರಹ ಮಾಡಿದರಲ್ಲಿ ಯಾವುದೇ ನಿಯಮ ಉಲ್ಲಂಘನೆ ನಡೆದಿಲ್ಲ ಎಂದು ಹೇಳಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಆಪ್‌ನಿಂದ ಹೊರಬಂದ ಕೆಲವು ಕಾರ್ಯಕರ್ತರು ಆಪ್ ವಾಲೆಂಟಿಯರ್ ಆ್ಯಕ್ಷನ್ ಮಂಚ್ (ಎವಿಎಎಂ) ಎಂಬ ಸಂಘ ಕಟ್ಟಿಕೊಂಡಿದ್ದು, ಆಮ್ ಆದ್ಮಿ ಪಕ್ಷ ದೆಹಲಿಯ ಕೊಳಚೆಗೇರಿಯಲ್ಲಿರುವ ಕಂಪನಿಗಳಿಂದ ಇನ್‌ಸ್ಟಾಲ್‌ಮೆಂಟ್ ಮೂಲಕ ರು. 2 ಕೋಟಿ ಪಡೆಯುತ್ತಿದೆ ಎಂದು ಆರೋಪಿಸಿದ್ದರು. ಮಾತ್ರವಲ್ಲದೆ, 2014, ಏಪ್ರಿಲ್ 5ರಂದು ನಾಲ್ಕು ನಕಲಿ ಕಂಪನಿಗಳು ಮಧ್ಯರಾತ್ರಿ ಬಂದು ಆಪ್‌ಗೆ ತಲಾ ರು. 50 ಲಕ್ಷ ದೇಣಿಗೆ ನೀಡಿದ್ದವು ಎಂದು ಆರೋಪಿಸಿದ್ದರು.
ಆದರೆ ಆಪ್‌ಗೆ ಈಗ ವಿದೇಶದಿಂದ ಹಣ ಬರುತ್ತಿದೆ. ಅದೂ ಮುಸ್ಲಿಂ ಉಗ್ರರಿಂದ. ದೆಹಲಿಯಿಂದ ದುಬೈ ಮತ್ತು ಇತರ ರಾಷ್ಟ್ರಗಳಿಗೆ ಫೋನ್ ಕರೆಗಳ ಮೂಲಕ ವ್ಯವಹಾರ ನಡೆಯುತ್ತಿದೆ ಎಂದು ಹಿತಾಸಕ್ತಿ ಅರ್ಜಿಯಲ್ಲಿ ದೂರಲಾಗಿತ್ತು.
ಏತನ್ಮಧ್ಯೆ, ಆಪ್ ಪರವಾಗಿ ವಾದಿಸಿದ ನ್ಯಾಯಾಧೀಶ ಪ್ರಣವ್ ಸಚ್‌ದೇವ, ಎವಿಎಎಂ ಕಾರ್ಯಕರ್ತರ ಬಗ್ಗೆ ತನಿಖೆ ನಡೆಸಲು ಸರ್ಕಾರಕ್ಕೆ ಆದೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
Advertisement