ಪೊಲೀಸ್ ಅಣಕು ಪ್ರದರ್ಶನದಲ್ಲಿ ಇಸ್ಲಾಂ ಪರ ಘೋಷಣೆ ಕೂಗಿದ 'ಡಮ್ಮಿ ಉಗ್ರರು'!

ಉಗ್ರರನ್ನು ಸದೆಬಡಿಯುವುದು ಹೇಗೆ ಎಂದು ವಿವರಿಸುವ ಗುಜರಾತ್ ಪೊಲೀಸರ ಅಣಕು ಪ್ರದರ್ಶನದಲ್ಲಿ ಡಮ್ಮಿ ಉಗ್ರರು
ಅಣಕು ಪ್ರದರ್ಶನದ ಒಂದು ದೃಶ್ಯ
ಅಣಕು ಪ್ರದರ್ಶನದ ಒಂದು ದೃಶ್ಯ

ಸೂರತ್: ಉಗ್ರರನ್ನು ಸದೆಬಡಿಯುವುದು ಹೇಗೆ ಎಂದು ವಿವರಿಸುವ ಗುಜರಾತ್ ಪೊಲೀಸರ ಅಣಕು ಪ್ರದರ್ಶನದಲ್ಲಿ ಡಮ್ಮಿ ಉಗ್ರರು ಇಸ್ಲಾಂ ಪರ ಘೋಷಣೆ ಕೂಗುತ್ತಿರುವ ದೃಶ್ಯ ಇದೀಗ ವಿವಾದಕ್ಕೀಡಾಗಿದೆ.

ಸೂರತ್‌ನಲ್ಲಿ ನಡೆದ ಈ ಅಣಕು ಪ್ರದರ್ಶನದಲ್ಲಿ ಮುಸ್ಲಿಂ ಟೋಪಿ ಧರಿಸಿದ 'ಡಮ್ಮಿ ಉಗ್ರರು' ಇಸ್ಲಾಂ ಪರ ಘೋಷಣೆ ಕೂಗುತ್ತಿರುವ ವೀಡಿಯೋ ಈಗ ಚರ್ಚೆಗಾಸ್ಪದವಾಗಿದೆ.

ಅಣಕು ಪ್ರದರ್ಶನದಲ್ಲಿ ನಡೆದ ಈ ವಿಚಾರ ಬುಧವಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಗುಜರಾತ್ ಮುಖ್ಯಮಂತ್ರಿ ಆನಂದಿ ಪಟೇಲ್, ಅಣಕು ಪ್ರದರ್ಶನದಲ್ಲಿ ಉಗ್ರರಿಗೆ ಧರ್ಮವೊಂದನ್ನು ಪ್ರತಿನಿಧೀಕರಿಸುವ ಟೋಪಿ ಹಾಕಿಸಿಕೊಂಡಿರುವುದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ.

ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯಾ ಪ್ರದೇಶದಲ್ಲಿರುವ ನರ್ಮದಾ ಡ್ಯಾಂ ಬಳಿ ಉಗ್ರ ನಿಗ್ರಹದ ಅಣಕು ಪ್ರದರ್ಶನ ನಡೆದಿತ್ತು. ಅಣಕು ಪ್ರದರ್ಶನದಲ್ಲಿ ಇಬ್ಬರು ಪೊಲೀಸರು ಇಬ್ಬರು ಡಮ್ಮಿ ಉಗ್ರರನ್ನು ಸೆರೆ ಹಿಡಿದ್ದಿದ್ದಾರೆ. ಆ ಉಗ್ರರು "ನಿಮಗೆ ಬೇಕಾದರೆ ನಮ್ಮ ಜೀವ ತೆಗೆದುಕೊಳ್ಳಿ, ಇಸ್ಲಾಂ ಜಿಂದಾಬಾದ್ ಎಂದು ಘೋಷಣೆ "ಕೂಗುತ್ತಿದ್ದಾರೆ.

ಈ ಬಗ್ಗೆ ನರ್ಮದಾ ಜಿಲ್ಲೆಯ ಪೊಲೀಸ್ ಅಧಿಕಾರಿ ಜಯ್‌ಪಾಲ್‌ಸಿನ್ ರಾಥೋಡ್ ಅವರಲ್ಲಿ ಕೇಳಿದಾಗ, ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಮಾಧ್ಯಮಗಳ ಮೂಲಕವೇ ನನಗೆ ಈ ಘಟನೆಯ ಬಗ್ಗೆ ಗೊತ್ತಾಗಿದ್ದು. ಇಂಥಾ ಘಟನೆ ನಡೆದದ್ದೇ ಆದರೆ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಥೋಡ್ ಹೇಳಿದ್ದಾರೆ.

ಈ ಅಣಕು ಪ್ರದರ್ಶನಕ್ಕೆ ಗುಜರಾತ್‌ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಭಯೋತ್ಪಾದಕರನ್ನು ಒಂದು ಧರ್ಮದೊಂದಿಗೆ ತಳಕು ಹಾಕುವುದು ಸರಿಯಲ್ಲ ಎಂದು ಗುಜರಾತ್ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಮುಖ್ಯಸ್ಥ ಪಟೇಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com