ಸ್ಮಗ್ಲರ್ ಏಕೆ ಆತ್ಮಾಹುತಿ ಮಾಡಿಕೊಳ್ಳುತ್ತಾರೆ?: ರಕ್ಷಣಾ ಸಚಿವ ಪರಿಕ್ಕರ್
ನವದೆಹಲಿ: ಅರಬ್ಬಿಸಮುದ್ರದಲ್ಲಿ ಸ್ಫೋಟಗೊಂಡ ಪಾಕಿಸ್ತಾನದ ಬೋಟ್ ಉಗ್ರರದ್ದು ಎನ್ನುವುದಕ್ಕೆ ಸಾಕ್ಷಿಯೇ ಇಲ್ಲ ಎಂಬ ಕಾಂಗ್ರೆಸ್ ವಾದಕ್ಕೆ ಸೋಮವಾರ ತಿರುಗೇಟು ನೀಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಅವರು ಉಗ್ರರು ಅಲ್ಲ, ಕಳ್ಳ ಸಾಗಾಣಿಕೆದಾರರು ಎನ್ನುವುದಾದರೆ, ಆತ್ಮಾಹುತಿ ಮಾಡಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
'ಅವರು ಶಂಕಿತ ಉಗ್ರರು ಆಗಿದ್ದರಿಂದಲೇ ಆತ್ಮಾಹುತಿ ಮಾಡಿಕೊಂಡಿದ್ದಾರೆ. ಅದು ಒಂದು ಸಾಮಾನ್ಯ ಡ್ರಗ್ಗು ಸಾಗಿಸುವಂತಹ ಹಡಗು ಆಗಿದ್ದರೂ ಸಹ ಅವರು ಶರಣಾಗುತ್ತಿದ್ದರು' ಎಂದು ಪರಿಕ್ಕರ್ ಹೇಳಿದ್ದಾರೆ.
'ಒಂದು ವೇಳೆ ಅವರು ಕಳ್ಳ ಸಾಗಾಣೆದಾರರು ಆಗಿದ್ದರೆ, ಅವರು ಏಕೆ ಪಾಕಿಸ್ತಾನದ ನೌಕಾಪಡೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ? ಅಲ್ಲದೆ ಅವರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ' ಎಂದು ರಕ್ಷಣಾ ಸಚಿವರು ಪ್ರಶ್ನಿಸಿದ್ದಾರೆ.
ನಮ್ಮ ನೌಕಾಪಡೆ ಅಧಿಕಾರಿಗಳು ಗುಪ್ತಚರ ಮಾಹಿತಿಯನ್ನು ಆಧರಿಸಿ ಸರಿಯಾದ ಸಮಯಕ್ಕೆ ಪಾಕ್ ಬೋಟ್‌ನ್ನು ಪತ್ತೆ ಹಚ್ಚಿದ್ದಾರೆ. ಸುಮಾರು 12 ಗಂಟೆಗಳ ಕಾಲ ಆ ಬೋಟ್ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು ಎಂದು ಪರಿಕ್ಕರ್ ತಿಳಿಸಿದ್ದಾರೆ.
ಪಾಕ್ ಬೋಟ್ ಸ್ಫೋಟ ಪ್ರಕರಣವನ್ನು ರಾಜಕೀಯಕ್ಕೆ ಎಳೆದು ತಂದಿದ್ದ ಕಾಂಗ್ರೆಸ್ ಬೋಟ್ ಉಗ್ರರದ್ದು ಎನ್ನುವುದಕ್ಕೆ ಯಾವುದೇ ಸಾಕ್ಷಿಯೇ ಇಲ್ಲ ಎಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಖಾಸಗಿ ಸುದ್ದಿವಾಹಿನಿಯೊಂದರ ಜತೆಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಜಯ್ ಕುಮಾರ್, ಪ್ರಕರಣದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಘಟನೆ ಹಿಂದೆ ಯಾವ ಉಗ್ರ ಸಂಘಟನೆಯ ಕೈವಾಡ ಇದೆ ಎನ್ನುವುದನ್ನು ಸರ್ಕಾರ ಬಹಿರಂಗಪಡಿಸಬೇಕು. ಆಗ ಎಲ್ಲವೂ ಬಹಿರಂಗವಾಗಲಿದೆ ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ