
ನವದೆಹಲಿ: ಮದ್ಯಪಾನವನ್ನು ತೀವ್ರವಾಗಿ ವಿರೋಧಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿತ್ರವನ್ನು ಅಮೆರಿಕದ ಕಂಪನಿಯೊಂದು ತನ್ನ ಬಿಯರ್ ಬಾಟಲಿಗಳ ಮೇಲೆ ಚಿತ್ರಿಸಿರುವುದನ್ನು ಅಮೆರಿಕ-ಭಾರತೀಯರು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಈ ಕೂಡಲೇ ಅದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ಭಾರತೀಯ ಮುಖಂಡ ರಾಜನ್ ಝೆಡ್ ಅವರು, ಶಾಂತಿದೂತ ಮಹಾತ್ಮಾ ಗಾಂಧಿ ಅವರು ಮದ್ಯಪಾನವನ್ನು ತೀವ್ರವಾಗಿ ವಿರೋಧಿಸಿದ್ದರು. ಅಂತಹ ಮಾಹಾನ ವ್ಯಕ್ತಿಯ ಚಿತ್ರವನ್ನು ಬಿಯರ್ ಬಾಟಲಿ ಮೇಲೆ ಚಿತ್ರಿಸುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ. ಇದರಿಂದ ಅಮೆರಿಕದ ಭಾರತೀಯರಿಗೆ ಮತ್ತು ಎಲ್ಲಾ ಭಾರತೀಯರಿಗೆ ನೋವಾಗಿದೆ ಎಂದು ಹೇಳಿದ್ದಾರೆ.
ಝೆಡ್ ಅವರು ಅಮೆರಿಕ-ಭಾರತೀಯ ನಾಯಕತ್ವ ಒಕ್ಕೂಟದ ಮುಖ್ಯಸ್ಥರಾಗಿದ್ದು, ನ್ಯೂ ಇಂಗ್ಲೆಂಡ್ ಬ್ರೀವಿಂಗ್ ಕಂಪನಿ ವ್ಯಾಪಾರದ ದೃಷ್ಟಿಯನ್ನಿಟ್ಟುಕೊಂಡು ತನ್ನ ಬಿಯರ್ ಬ್ರ್ಯಾಂಡ್‌ಗೆ ಗಾಂಧೀಜಿ ಅವರನ್ನು ಬಳಸಿಕೊಳ್ಳುವ ಮೂಲಕ ಅವರ ತತ್ವ ಸಿದ್ಧಾಂತಗಳನ್ನು ಕಡೆಗಣಿಸಲಾಗಿದೆ. ಇದರಿಂದ ಅಮೆರಿಕ-ಭಾರತೀಯರ ಹಾಗೂ ಭಾರತೀಯರ ಭಾವನೆಗೆ ಧಕ್ಕೆಯಾಗಿದೆ ಎಂದಿದ್ದಾರೆ.
ಕನೆಕ್ಟಿಕಟ್ ಮೂಲದ ನ್ಯೂ ಇಂಗ್ಲೆಂಡ್ ಬ್ರೀವಿಂಗ್ ಕಂಪನಿ ತನ್ನ ಬಿಯರ್ ಬ್ರ್ಯಾಂಡ್‌ಗೆ ಗಾಂಧಿ ಬಾಟ್ ಎಂದು ಹೆಸರಿಟ್ಟಿದ್ದಷ್ಟೇ ಅಲ್ಲದೇ, ಅದರಲ್ಲಿ ಗಾಂಧೀಜಿಯ ಚಿತ್ರವನ್ನು ಅಂಟಿಸಿತ್ತು.
Advertisement